ದೆಹಲಿಯ ರೌಸ್ ಅವೆನ್ಯೂ ವಿಶೇಷ ನ್ಯಾಯಾಲಯದಿಂದ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಮಹತ್ವದ ರಿಲೀಫ್ ಲಭಿಸಿದೆ. ಜಾರಿ ನಿರ್ದೇಶನಾಲಯ (ED) ಸಲ್ಲಿಸಿದ್ದ ಆರೋಪಪಟ್ಟಿಯನ್ನು ಈ ಹಂತದಲ್ಲಿ ಪರಿಗಣಿಸಲು ನ್ಯಾಯಾಲಯ ನಿರಾಕರಿಸಿದೆ.
ನ್ಯಾಷನಲ್ ಹೆರಾಲ್ಡ್‌ಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ, ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL)ಗೆ ಸೇರಿದ ಸುಮಾರು ₹2,000 ಕೋಟಿ ಮೌಲ್ಯದ ಆಸ್ತಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ED ಆರೋಪಪಟ್ಟಿಯಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರನ್ನು ಆರೋಪಿಗಳಾಗಿ ಉಲ್ಲೇಖಿಸಿತ್ತು. ಆದರೆ, ಈ ಆರೋಪಪಟ್ಟಿಯಲ್ಲಿರುವ ಅಂಶಗಳನ್ನು ಪರಿಶೀಲಿಸಿದ ನ್ಯಾಯಾಲಯ, ಅದನ್ನು ತಕ್ಷಣ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯಾಯಾಲಯದ ಈ ಆದೇಶದಿಂದಾಗಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ದೊಡ್ಡ ಮಟ್ಟದ ಕಾನೂನು ನಿಟ್ಟುಸಿರು ಸಿಕ್ಕಂತಾಗಿದೆ. ಪ್ರಕರಣದ ಮುಂದಿನ ವಿಚಾರಣೆ ವೇಳೆ ED ತನ್ನ ವಾದಗಳನ್ನು ಇನ್ನಷ್ಟು ಸ್ಪಷ್ಟಪಡಿಸಬೇಕಾಗುತ್ತದೆ ಎನ್ನಲಾಗಿದೆ. ಈ ಬೆಳವಣಿಗೆ ರಾಜಕೀಯ ವಲಯದಲ್ಲೂ ಭಾರೀ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್ ಪಕ್ಷವು ಇದನ್ನು ಸತ್ಯಕ್ಕೆ ಸಿಕ್ಕ ಜಯ ಎಂದು ಬಣ್ಣಿಸಿದೆ.







