ಹಿಂದೂ ಮಹಾಸಾಗರದಲ್ಲಿ ಇರಾನ್ ಯುದ್ಧನೌಕೆಯ ಮೇಲೆ ನಡೆದ ದಾಳಿಯಲ್ಲಿ ಸಾವನ್ನಪ್ಪಿದ 45 ನಾವಿಕರ ಮೃತದೇಹಗಳನ್ನು ಶ್ರೀಲಂಕಾ ಸರ್ಕಾರವು ಇರಾನ್ ರಾಯಭಾರ ಕಚೇರಿಗೆ ಹಸ್ತಾಂತರಿಸಿದೆ.
ಈ ಘಟನೆ ಹಿಂದೂ ಮಹಾಸಾಗರ ಪ್ರದೇಶದಲ್ಲಿ ನಡೆದಿದ್ದು, ಇರಾನ್‌ನ IRIS Dena ಯುದ್ಧನೌಕೆಯ ಮೇಲೆ ಅಮೆರಿಕದ ಪಡೆಗಳು ದಾಳಿ ನಡೆಸಿದ ನಂತರ ಈ ಸಾವುಗಳು ಸಂಭವಿಸಿದ್ದವು ಎಂದು ವರದಿಗಳು ತಿಳಿಸಿವೆ.
ಆಂಧ್ರ ಪ್ರದೇಶದ ವಿಶಾಖಪಟ್ಟಣ ನಗರಕ್ಕೆ ನೌಕಾಭ್ಯಾಸಕ್ಕಾಗಿ ಬಂದಿದ್ದ ಈ ಯುದ್ಧನೌಕೆ, ಸ್ವದೇಶಕ್ಕೆ ಮರಳುತ್ತಿದ್ದ ವೇಳೆ ಮಾರ್ಚ್ 4ರಂದು ಶ್ರೀಲಂಕಾ ಸಮೀಪ ದಾಳಿ ನಡೆದಿತ್ತು. ಅಮೆರಿಕದ ಪಡೆಗಳು ಜಲಾಂತರ್ಗಾಮಿ ಮೂಲಕ ದಾಳಿ ನಡೆಸಿದರೆಂದು ಹೇಳಲಾಗುತ್ತಿದೆ.
ಈ ಭೀಕರ ದಾಳಿಯಲ್ಲಿ ಒಟ್ಟು 84 ಮಂದಿ ನಾವಿಕರು ಮೃತಪಟ್ಟಿದ್ದರು ಎಂದು ವರದಿಗಳು ಸೂಚಿಸಿವೆ. ಇದೀಗ ಅವರಲ್ಲಿ 45 ಮಂದಿಯ ಮೃತದೇಹಗಳನ್ನು ಅಧಿಕೃತವಾಗಿ ಇರಾನ್ ರಾಯಭಾರ ಕಚೇರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ.







