ಬೆಂಗಳೂರು: ರಾಜ್ಯದಲ್ಲಿನ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದೆ. ಇದರ ಬೆನ್ನಲ್ಲೇ ಬಿಜೆಪಿಯಲ್ಲಿ (BJP) ಟಿಕೆಟ್ ಗಾಗಿ ಸದ್ದಿಲ್ಲದೆ ಗದ್ದಲ ಶುರುವಾಗಿದೆ.
ಸಂಸದ ಬಸವರಾಜ ಬೊಮ್ಮಾಯಿಯವರು (Basavaraj Bommai) ಮಾಜಿ ಸಿಎಂ ಯಡಿಯೂರಪ್ಪ (BS Yediyurappa) ಅವರನ್ನು ಭೇಟಿ ಮಾಡಿ ಶಿಗ್ಗಾಂವಿ (Shiggavi) ಟಿಕೆಟ್ ಬಗ್ಗೆ ಚರ್ಚಿಸಿದ್ದಾರೆ. ಇಬ್ಬರೂ ನಾಯಕರು ಸುಮಾರು ಅರ್ಧ ಗಂಟೆಗಳ ಕಾಲ ಟಿಕೆಟ್ ಗಾಗಿ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.
ಶಿಗ್ಗಾಂವಿ ಕ್ಷೇತ್ರದಲ್ಲಿ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಹಾಗೂ ಮಾಜಿ ಸಚಿವ ನಿರಾಣಿ ಹೆಸರುಗಳು ಪ್ರಬಲವಾಗಿ ಕೇಳಿ ಬರುತ್ತಿವೆ. ತಮ್ಮ ಪುತ್ರನಿಗೆ ಟಿಕೆಟ್ ಕೊಡುವ ವಿಚಾರದಲ್ಲಿ ಬೊಮ್ಮಾಯಿ ಯತ್ನಿಸುತ್ತಿದ್ದಾರೆ. ಎಲ್ಲವೂ ಹೈಕಮಾಂಡ್ ಕೈಯಲ್ಲಿದೆ ಎಂದು ಹೇಳುತ್ತಿರುವ ಅವರು, ಇಂದು ಯಡಿಯೂರಪ್ಪ ಅವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಈ ವೇಳೆ ಮಾತನಾಡಿದ ಬೊಮ್ಮಾಯಿ, ಯಡಿಯೂರಪ್ಪ ನಮ್ಮ ಹಿರಿಯ ನಾಯಕರು, ಸಹಜವಾಗಿ ಭೇಟಿ ಮಾಡುತ್ತೇವೆ. ಚುನಾವಣೆಯ ಬಗ್ಗೆ ಬಂದು ಮಾತನಾಡು ಎಂದಿದ್ದರು. ಅವರೊಂದಿಗೆ ಮಾತನಾಡಿದ್ದೇನೆ. ಶಿಗ್ಗಾಂವಿ ಕ್ಷೇತ್ರದ ಬಗ್ಗೆಯೂ ಚರ್ಚೆ ನಡೆಯಿತು. ಚುನಾವಣೆಗೆ ಏನೇನು ತಯಾರಿ ಮಾಡಿದ್ದೇವೆ ಎನ್ನುವ ಕುರಿತು ಕೇಳಿದರು. ಮಾಡಿಕೊಂಡಿರುವ ಎಲ್ಲ ಸಿದ್ಧತೆಗಳ ಕುರಿತು ಚರ್ಚೆ ಮಾಡಲಾಗಿದೆ ಎಂದಿದ್ದಾರೆ.