ಮೈಸೂರು: ನಾಡದೇವತೆ ಚಾಮುಂಡಿ ಬೆಟ್ಟದ ತಾಯಿ ಚಾಮುಂಡೇಶ್ವರಿಗೆ ಆಷಾಡ ಪೂಜೆಗಳು ಇದೇ ಶುಕ್ರವಾರ ಅಂದರೆ ಜೂನ್ 26ರಿಂದ ಆರಂಭವಾಗಲಿವೆ. ಆದರೆ ಜೂ.26ರ ಮೊದಲ ಆಶಾಢ ಶುಕ್ರವಾರ ಪೂಜೆಗೆ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದೆ.
ಮೈಸೂರು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಚಾಮುಂಡಿ ಬೆಟ್ಟದಲ್ಲಿ ಆಷಾಢ ಆಚರಣೆಗೆ ಬ್ರೇಕ್ ಹಾಕಲಾಗಿದೆ. ಜತೆಗೆ ದೇವಾಲಯಗಳಲ್ಲಿ ಪ್ರಸಾದ ವಿತರಣೆಗೆ ಅವಕಾಶ ನಿರಾಕರಿಸಲಾಗಿದೆ.
ಮೈಸೂರು ಜಿಲ್ಲಾ ವ್ಯಾಪ್ತಿಯ ಧಾರ್ಮಿಕ ದತ್ತಿ ಇಲಾಖೆ ಹಾಗೂ ಖಾಸಗಿ ಆಡಳಿತಕ್ಕೆ ಒಳಪಡುವ ಎಲ್ಲಾ ದೇವಾಲಯಗಳು, ಧಾರ್ಮಿಕ ಕೇಂದ್ರ, ಪೂಜಾ ಸ್ಥಳಗಳು, ಆಧ್ಯಾತ್ಮಿಕ ಕೇಂದ್ರಗಳ ವಸತಿ ಗೃಹಗಳಲ್ಲಿ ಭಕ್ತರು ತಂಗಲು, ದಾಸೋಹ ಹಾಗೂ ಪ್ರಸಾದ ವಿತರಣೆಗೆ ಅವಕಾಶ ನಿರಾಕರಿಸಲಾಗಿದೆ.
ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಷಾಢ ಮಾಸದ ಶುಕ್ರವಾರಗಳನ್ನು ಆಚರಣೆ ಮಾಡುವ ಎಲ್ಲಾ ದೇವಾಲಗಳಲ್ಲಿ ಹಾಗೂ ಸಾರ್ವಜನಿಕವಾಗಿ ಪ್ರಸಾದ ವಿತರಿಸುವುದನ್ನು ನಿಷೇಧಿಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್.ಜಿ.ಶಂಕರ್ ಹೇಳಿದ್ದಾರೆ.