ಭಾರತೀಯ ಭೂಪ್ರದೇಶಕ್ಕೆ ಪ್ರವೇಶಿಸಲು ಯತ್ನಿಸಿದ ನಾಲ್ಕು ಪಾಕಿಸ್ತಾನಿ ದೋಣಿಗಳನ್ನು ವಶಪಡಿಸಿಕೊಂಡ ಬಿಎಸ್ಎಫ್
ಕಚ್, ಅಗಸ್ಟ್ 17: ಗುಜರಾತ್ನ ಕಚ್ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿಯಲ್ಲಿರುವ ‘ಹರಾಮಿ ನಲ್ಲಾ’ ಎಂಬ ಪ್ರದೇಶದಿಂದ ನಾಲ್ಕು ಪಾಕಿಸ್ತಾನಿ ದೋಣಿಗಳನ್ನು ಭಾರತೀಯ ಗಡಿ ಭದ್ರತಾ ಪಡೆ ಭಾನುವಾರ ವಶಪಡಿಸಿಕೊಂಡಿದೆ ಎಂದು ಪಡೆ ತಿಳಿಸಿದೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಅಲ್ಲಾ ಬಚಾವೊ ಸಿದ್ದೀಕ್ (25) ಎಂದು ಗುರುತಿಸಲ್ಪಟ್ಟ ಪಾಕಿಸ್ತಾನದ ಮೀನುಗಾರನನ್ನು ಬಂಧಿಸಲಾಗಿದ್ದು, ಇತರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಗಡಿ ಭದ್ರತಾ ಪಡೆ ಹೇಳಿದೆ.

ಬಿಎಸ್ಎಫ್ ನ ಭುಜ್ ಘಟಕದ ಗಸ್ತು ತಂಡವು ಬೆಳಿಗ್ಗೆ 6 ಗಂಟೆ ಸುಮಾರಿಗೆ ಕಚ್ ಪ್ರದೇಶದ ‘ಹರಾಮಿ ನಲ್ಲಾ’ ಬಳಿ ದೋಣಿಗಳಲ್ಲಿ ನಾಲ್ಕರಿಂದ ಐದು ಪಾಕಿಸ್ತಾನಗಳಿರುವುದನ್ನು ಗಮನಿಸಿದೆ . ಪಾಕಿಸ್ತಾನದ ಮೀನುಗಾರರು ಭಾರತೀಯ ಭೂಪ್ರದೇಶಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದರು ಎಂದು ಹೇಳಿದೆ.
ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್ಎಫ್) ಪಾಕಿಸ್ತಾನದ ನುಸುಳುಕೋರರನ್ನು ಭಾರತೀಯ ಭೂಪ್ರದೇಶಕ್ಕೆ ಪ್ರವೇಶಿಸುವುದನ್ನು ತಡೆದು ಅವರನ್ನು ಬಂಧಿಸಲು ನೋಡಿದಾಗ ಅವರು ನೀರಿಗೆ ಹಾರಿದ್ದಾರೆ ಎಂದು ಬಿಎಸ್ಎಫ್ ಹೇಳಿಕೆಯಲ್ಲಿ ತಿಳಿಸಿದೆ.

ಬಿಎಸ್ಎಫ್ ಗಸ್ತು ತಂಡ ಅವರನ್ನು ಬೆನ್ನಟ್ಟಿದ್ದು, ಒಬ್ಬ ಪಾಕಿಸ್ತಾನಿ ಮೀನುಗಾರನನ್ನು ಬಂಧಿಸಿದೆ ಮತ್ತು ನಾಲ್ಕು ಪಾಕಿಸ್ತಾನಿ ಮೀನುಗಾರಿಕಾ ದೋಣಿಗಳನ್ನು ವಶಪಡಿಸಿಕೊಂಡಿದೆ. ಉಳಿದ ಮೀನುಗಾರರು ಆ ಪ್ರದೇಶದ ಕೊಳೆತುಂಬಿದ ಮತ್ತು ಜವುಗು ಭೂಪ್ರದೇಶದ ಲಾಭವನ್ನು ಪಡೆದುಕೊಂಡು ಪಾಕಿಸ್ತಾನದ ಭೂಪ್ರದೇಶಕ್ಕೆ ಪರಾರಿಯಾಗಿದ್ದಾರೆ ಎಂದು ಭದ್ರತಾ ಪಡೆ ಹೇಳಿದೆ. ವಶಪಡಿಸಿಕೊಂಡ ಎಲ್ಲಾ ನಾಲ್ಕು ದೋಣಿಗಳನ್ನು ಪರಿಶೀಲಿಸಲಾಗಿದ್ದು, ಅವರಿಂದ ಯಾವುದೇ ಅನುಮಾನಾಸ್ಪದ ವಸ್ತುಗಳು ದೊರಕಿಲ್ಲ ಎಂದು ಗಡಿ ಕಾವಲು ಪಡೆ ತಿಳಿಸಿದೆ.







