ಅಡುಗೆ ಅನಿಲ (LPG) ಬಳಕೆದಾರರಲ್ಲಿ eKYC ಕುರಿತು ಉಂಟಾಗಿದ್ದ ಗೊಂದಲಕ್ಕೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಇದುವರೆಗೆ eKYC ಪೂರ್ಣಗೊಳಿಸದವರು ಮಾತ್ರ ಈ ಪ್ರಕ್ರಿಯೆಯನ್ನು ಮಾಡಬೇಕಾಗಿದ್ದು, ಈಗಾಗಲೇ ಪೂರ್ಣಗೊಳಿಸಿದವರು ಮತ್ತೆ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದೆ.
ಪ್ರಧಾನ್ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ವರ್ಷಕ್ಕೊಮ್ಮೆ eKYC ಮಾಡಿಸುವುದು ಕಡ್ಡಾಯವಾಗಿದೆ. ವಿಶೇಷವಾಗಿ 8ನೇ ಮತ್ತು 9ನೇ ರೀಫಿಲ್ಗಳ ಮೇಲೆ ಸಬ್ಸಿಡಿ ಪಡೆಯಲು eKYC ಅವಶ್ಯಕ ಎಂದು ಕೇಂದ್ರ ತಿಳಿಸಿದೆ.
ಈ ಕ್ರಮವು ಸಬ್ಸಿಡಿಯನ್ನು ಸರಿಯಾದ ಫಲಾನುಭವಿಗಳಿಗೆ ತಲುಪಿಸಲು ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ. ಜೊತೆಗೆ eKYC ಪ್ರಕ್ರಿಯೆಯಿಂದ ಗ್ಯಾಸ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿದೆ.
ಈ ಸ್ಪಷ್ಟನೆಯೊಂದಿಗೆ LPG ಬಳಕೆದಾರರಲ್ಲಿ ಉಂಟಾಗಿದ್ದ ಗೊಂದಲ ಬಹುತೇಕ ನಿವಾರಣೆಯಾಗಿದ್ದು, ಫಲಾನುಭವಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.







