ನಾವೆಲ್ಲಾ ಒಂದಾಗಿ ಆಟನಾ ಆಡೋಣ… ಜೊತೆಯಾಗಿ ಆಡುತ್ತಾ ಸ್ನೇಹನಾ ಬೆಳೆಸೋಣ..ಅದಕ್ಕಾಗಿ ಸೇರೋಣ.. ಒಂದಾಗಿ ಗೆಲ್ಲೋಣ… ಸೌರ್ಹಾದತೆಯ ಸಂದೇಶವನ್ನು ಸಾರೋಣ.. ಹೊಸ ಪರಂಪರೆಗೆ ಮುನ್ನಡಿ ಬರೆಯೋಣ…!
ಶಟಲ್ ಕಾಕ್‍ನ ಸದ್ದಿನೊಂದಿಗೆ ಸವಾಲು – ಪ್ರತಿ – ಸವಾಲು ಎಸೆಯೋಣ.. ಬೆವರ ಹನಿಗಳನ್ನು ಸುರಿಸಿ, ಕ್ರೀಡಾ ಸ್ಪೂರ್ತಿಯಿಂದ ಸೆಣಸಾಡೋಣ…ಗೆಲುವಿನ ಹಠದೊಂದಿಗೆ ಅಂಗಣದಲ್ಲಿ ದಿಟವಾಗಿ ಹೋರಾಡೋಣ.. ಪ್ರತಿ ಹೊಡೆತ, ಪ್ರತಿ ಪಂದ್ಯದಲ್ಲಿ ಪ್ರತಿಭೆ-ಸಾಮಥ್ರ್ಯವನ್ನು ಪ್ರದರ್ಶಿಸೋಣ..ಕಠಿಣ ಅಭ್ಯಾಸ ಮಾಡೋಣ.. ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ಮೆರೆಯೋಣ..!
ಜಿದ್ದಾಜಿದ್ದಿನಿಂದ ಸಾಗುವ ರೋಚಕ ಆಟದ ಸೊಬಗನ್ನು ಸವಿಯೋಣ..ಪವರ್‍ಫುಲ್ ಆಟಗಾರರ ನಡುವಿನ ಕೆಚ್ಚೆದೆಯ ಹೋರಾಟವನ್ನು ನೋಡೋಣ.. ಕನ್ನಡಿಗರ ಬ್ಯಾಡ್ಮಿಂಟನ್ ಹಬ್ಬದ ವೈಭವ, ಸಂಭ್ರಮವನ್ನು ಕಣ್ತುಂಬಿಕೊಳ್ಳೊಣ.. ಈ ಮೂಲಕ ಕರ್ನಾಟಕದ ಐತಿಹಾಸಿಕ ಬ್ಯಾಡ್ಮಿಂಟನ್ ಲೀಗ್ ಟೂರ್ನಿಗೆ ಸಾಕ್ಷಿಯಾಗೋಣ…ವಿನೂತನ ಮಾದರಿಯ ಟೂರ್ನಿಯಲ್ಲಿ ಆಡುವ ಮೂಲಕ ಕರುನಾಡಿನಲ್ಲಿ ಇತಿಹಾಸ ಸೃಷ್ಟಿಸೋಣ..!
ಹೌದು..ಪ್ರತಿಷ್ಠಿತ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಗೆ ಕೌಂಟ್‍ಡೌನ್ ಶುರುವಾಗಿದೆ. 9 ಡ್ರೀಮ್ಸ್ ಸಂಸ್ಥೆಯ ವಿನೂತನ ಪರಿಕಲ್ಪನೆಯ ಟೂರ್ನಿಯಾಗಿದೆ.
ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಯ ಒಳಾಂಗಣದಲ್ಲಿ ಫೆಬ್ರವರಿ 21 ಮತ್ತು 22ರಂದು ಈ ಪಂದ್ಯಾವಳಿ ನಡೆಯಲಿದೆ.
ಎಂಟು ಫ್ರಾಂಚೈಸಿಗಳ ನಡುವೆ ನಡೆಯಲಿರುವ ಜಿದ್ದಾಜಿದ್ದಿನ ಹೋರಾಟಕ್ಕೆ ಭರದ ಸಿದ್ದತೆಗಳು ನಡೆಯುತ್ತಿವೆ. ಈಗಾಗಲೇ ಎಂಟು ತಂಡಗಳ ಆಟಗಾರರು ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ.
ಸಚಿವರು, ಶಾಸಕರು, ಐಎಎಸ್ ಅಧಿಕಾರಿಗಳು, ಐಪಿಎಸ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ವೈದ್ಯರು, ಸ್ಯಾಂಡಲ್‍ವುಡ್ ತಾರೆಯರು ಮತ್ತು ಪತ್ರಕರ್ತರು ಹೀಗೆ ಎಂಟು ಕೆಟಗರಿಯ ಆಟಗಾರರು ಈ ಟೂರ್ನಿಯಲ್ಲಿ ಆಡಲಿದ್ದಾರೆ.
ಎಂಟು ಫ್ರಾಂಚೈಸಿಗಳಲ್ಲಿ ಪ್ರತಿ ಕೆಟಗರಿಯಿಂದ ಇಬ್ಬರು ಆಟಗಾರರಿರುತ್ತಾರೆ. ಪವರ್ ಗೇಮ್, ಪುರಷರ ಹಾಗೂ ಮಹಿಳೆಯ ವಿಭಾಗದಲ್ಲಿ ಸಿಂಗಲ್ಸ್, ಡಬಲ್ಸ್, ಮಿಕ್ಸೆಡ್ ಡಬಲ್ಸ್ ಪಂದ್ಯಗಳು ನಡೆಯಲಿವೆ. ಹಾಗೇ ಪಂದ್ಯದ ದಿಕ್ಕು ಬದಲಾಯಿಸುವ ಒಬ್ಬೊಬ್ಬ ಗೇಮ್ ಚೆಂಜರ್ ಪ್ಲೇಯರ್ ಕೂಡ ಪ್ರತಿ ತಂಡದಲ್ಲಿರುತ್ತಾರೆ.
ಲೀಗ್ ಮಾದರಿಯಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಎರಡು ಗುಂಪುಗಳಿದ್ದು, ಟಾಪ್ -2 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಒಟ್ಟು 270 ಪಂದ್ಯಗಳು ಈ ಟೂರ್ನಿಯಲ್ಲಿ ನಡೆಯಲಿದೆ.
ಟೂರ್ನಿಯಲ್ಲಿ ಸಚಿವರಾದ ಡಾ.ಸುಧಾಕರ್, ಶಾಸಕರಾದ ಮಂಥರ್ ಗೌಡ, ಶರತ್ ಬಚ್ಚೇಗೌಡ, ಪೊನ್ನಣ್ಣ, ಬೆಂಗಳೂರು ಜಿಲ್ಲಾಧಿಕಾರಿ ಜಗದೀಶ, ಐಎಎಸ್ ಅಧಿಕಾರಿ ಸೆಲ್ವಕುಮಾರ್, ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್, ರಮೇಶ್ ಬಾನೋಟ್ ಸೇರಿದಂತೆ ಹಲವು ಅಧಿಕಾರಿಗಳು, ಸೆಲೆಬ್ರಿಟಿಗಳು ಹಾಗೂ ವೈದ್ಯರು ಆಡಲಿದ್ದಾರೆ. ಅಂದ ಹಾಗೇ ಬಹತೇಕ ಆಟಗಾರರು, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಆಡಿ ಪ್ರಶಸ್ತಿ ಗೆದ್ದಂತಹವರು. ಹಾಗಾಗಿ ಈ ಟೂರ್ನಿಯಲ್ಲಿ ತೀವ್ರ ಪೈಪೋಟಿಯನ್ನು ಎದರು ನೋಡಬಹುದು.
ಟೂರ್ನಿಯಲ್ಲಿ ಭಾಗಿಯಾಗೋ ಎಂಟು ಫ್ರಾಂಚೈಸಿಗಳು
1- ಪ್ರಕಾಶ್ ಪಳನಿ ಮಾಲೀಕತ್ವದ ಟೀಮ್ ಕೆಫೆ ದಿವ್ಯಮ್, 2- ಪ್ರಸನ್ನ ಎಡಕೇರಿ ಒಡೆತನದ ದಿ ಎಲೈಟ್ ಬ್ಯಾಡ್ಮಿಂಟನ್ ಕ್ಲಬ್, 3- ನವೀನ್ ಸಾರಥ್ಯದ ಕೆಜಿಎಫ್ ಸ್ಮಾಷರ್ಸ್, 4- ನರಸಿಂಹ ಮೂರ್ತಿ ಮಾಲೀಕತ್ವದ ಟೆಲಿಕಾಮ್ ಸ್ಕೈ ಸ್ಟ್ರೈಕರ್ಸ್, 5- ಲಿಂಗರಾಜು ಒಡೆತನದ ಇನ್‍ಸ್ಪೈರ್ ಚಾಲೆಂಜರ್ಸ್, 6-ನರಸಿಂಹ ಮೂರ್ತಿ ಒಡೆತನದ ಎಟಿಕೆ ಆಟಕರ್ಸ್, 7-ಆನಂದ್ ಕುಮಾರ್ ಮಾಲೀಕತ್ವದ ಪ್ರೋ ವಿನ್ ಪ್ಯಾಂಥರ್ಸ್, ರೂಪ ಒಡೆತನದ ಆಸ್ತೆಟಿಕ್ ಆಟಕರ್ಸ್.







