ಬೆಂಗಳೂರು: ರಾಜ್ಯ ಸರ್ಕಾರದ ಉರ್ದು ಜಾಹೀರಾತು ವಿಚಾರವಾಗಿ ವಿರೋಧ ಪಕ್ಷದ ನಾಯಕರು ಎಬ್ಬಿಸಿರುವ ವಿವಾದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಡಕ್ ತಿರುಗೇಟು ನೀಡಿದ್ದಾರೆ. ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಸ್ವತಃ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ನೀಡಲಾದ ಉರ್ದು ಜಾಹೀರಾತುಗಳ ಸಾಕ್ಷಿಗಳನ್ನು ಮುಂದಿಟ್ಟು ಬಿಜೆಪಿಯ ದ್ವಂದ್ವ ನಿಲುವನ್ನು ಸಿಎಂ ಪ್ರಶ್ನಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಅವರು, ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದು, ನಿಮ್ಮದು ಆತ್ಮವಂಚನೆ ಮತ್ತು ಅಸಹ್ಯದ ಪರಮಾವಧಿ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ನಾಯಕರ ವಿರುದ್ಧ ಸಿಎಂ ಆಕ್ರೋಶ
ಉರ್ದು ಪತ್ರಿಕೆಯಲ್ಲಿ ಸರ್ಕಾರದ ಜಾಹೀರಾತೊಂದು ಪ್ರಕಟಗೊಂಡಿದ್ದನ್ನೇ ದೊಡ್ಡ ವಿಷಯವನ್ನಾಗಿ ಮಾಡಿಕೊಂಡು ಬಿಜೆಪಿ ನಾಯಕರು ವೀರಾವೇಶದ ಮಾತುಗಳನ್ನು ಆಡುತ್ತಿದ್ದಾರೆ. ಆದರೆ, ಹಿಂದೆ ತಾವೇ ಅಧಿಕಾರದಲ್ಲಿ ಇದ್ದಾಗ ಇದೇ ರೀತಿ ಉರ್ದು ಭಾಷೆಯ ಜಾಹೀರಾತು ನೀಡಿದ್ದನ್ನು ಅವರು ಮರೆತಂತಿದೆ. ಅಂದು ನೀವು ಉರ್ದು ಜಾಹೀರಾತು ನೀಡಿದ್ದು ಯಾರ ಓಲೈಕೆ ಮಾಡಲು ಎಂದು ಹೇಳಿ ಪುಣ್ಯಕಟ್ಟಿಕೊಳ್ಳಿ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಅಂದು ತುಷ್ಟೀಕರಣ ಅನ್ನಿಸಲಿಲ್ಲವೇ
ಬಿಜೆಪಿ ನಾಯಕರು ಅಧಿಕಾರದಲ್ಲಿದ್ದಾಗ ಒಂದಲ್ಲ, ಎರಡಲ್ಲ ಹತ್ತಾರು ಬಾರಿ ಉರ್ದು ಜಾಹೀರಾತುಗಳನ್ನು ನೀಡಿದ್ದಾರೆ. ಆಗ ಅವರಿಗೆ ಅದು ತುಷ್ಟೀಕರಣ ಎಂದು ಅನ್ನಿಸಲಿಲ್ಲ. ಆದರೆ ಈಗ ನಮ್ಮ ಸರ್ಕಾರ ನೀಡಿದ ಜಾಹೀರಾತು ಕಂಡೊಡನೆ ಅವರೊಳಗಿನ ಕನ್ನಡಪ್ರೇಮ ಇದ್ದಕ್ಕಿದ್ದಂತೆ ಎದ್ದುನಿಂತಿದೆ. ಇವರ ಈ ಹಿಪೋಕ್ರಸಿ ಅಥವಾ ಇಬ್ಬಗೆಯ ನೀತಿಯು ಬಣ್ಣ ಬದಲಿಸುವ ಗೋಸುಂಬೆಯನ್ನೇ ನಾಚಿಸುವಂತಿದೆ ಎಂದು ಸಿಎಂ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಜಾಹೀರಾತಿನ ಉದ್ದೇಶವೇನು
ಸರ್ಕಾರ ಯಾವುದೇ ಜಾಹೀರಾತು ನೀಡಿದರೂ, ಅದರ ಮೂಲ ಉದ್ದೇಶ ಸರ್ಕಾರದ ಕಾರ್ಯಕ್ರಮಗಳು ಮತ್ತು ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವುದೇ ಆಗಿರುತ್ತದೆ. ಉರ್ದು ಪತ್ರಿಕೆಗಳನ್ನು ಓದುವ ಜನರಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ತಿಳಿಯಬೇಕೆಂಬ ಉದ್ದೇಶದಿಂದ ಆಯಾ ಭಾಷೆಯ ಪತ್ರಿಕೆಗಳಲ್ಲಿ ಅದೇ ಭಾಷೆಯ ಜಾಹೀರಾತು ನೀಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಇದರಿಂದ ಓದುಗರಿಗೆ ವಿಷಯ ಸ್ಪಷ್ಟವಾಗಿ ಅರ್ಥವಾಗುತ್ತದೆ ಮತ್ತು ಜಾಹೀರಾತು ನೀಡಿದ ಉದ್ದೇಶವೂ ಈಡೇರುತ್ತದೆ ಎಂದು ಸಿಎಂ ಸಮರ್ಥಿಸಿಕೊಂಡಿದ್ದಾರೆ.
ನನಗೆ ಪಾಠ ಹೇಳುವ ಅಗತ್ಯವಿಲ್ಲ
ನೆಲ, ಜಲ ಮತ್ತು ಭಾಷೆಯ ಕಾಳಜಿಯ ಬಗ್ಗೆ ಬಿಜೆಪಿ ನಾಯಕರಿಂದ ಪಾಠ ಹೇಳಿಸಿಕೊಳ್ಳಬೇಕಾದ ದರಿದ್ರ ಸ್ಥಿತಿ ನಮಗೆ ಬಂದಿಲ್ಲ ಎಂದು ಸಿಎಂ ಗುಡುಗಿದ್ದಾರೆ. ಕನ್ನಡ ಕಾವಲು ಸಮಿತಿಯ ಅಧ್ಯಕ್ಷನಾಗಿಯೇ ರಾಜಕೀಯ ಜೀವನಕ್ಕೆ ಕಾಲಿರಿಸಿದ ನನಗೆ ಕನ್ನಡ ಕೇವಲ ಭಾಷೆಯಲ್ಲ, ಅದು ಬದುಕು. ಕನ್ನಡ ಮತ್ತು ಕನ್ನಡಿಗರ ಹಿತ ಕಾಯುವ ವಿಚಾರ ಬಂದಾಗ ರಾಜಕೀಯವನ್ನು ಬದಿಗಿಟ್ಟು ಹೋರಾಟದ ಮೊದಲ ಸಾಲಿನಲ್ಲಿ ನಿಂತವನು ನಾನು, ಇದಕ್ಕೆ ಇತಿಹಾಸವೇ ಸಾಕ್ಷಿ ಎಂದು ಸಿದ್ದರಾಮಯ್ಯ ಅವರು ತಮ್ಮ ಕನ್ನಡಾಭಿಮಾನವನ್ನು ಪುನರುಚ್ಚರಿಸಿದ್ದಾರೆ.
https://x.com/siddaramaiah/status/2026984483132747806?ref_src=twsrc%5Etfw%7Ctwcamp%5Etweetembed%7Ctwterm%5E2026984483132747806%7Ctwgr%5E261414e0dcb7729a3b37f44850859bf7d387f092%7Ctwcon%5Es1_c10&ref_url=https%3A%2F%2Fapi-news.dailyhunt.in%2F







