ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಮರುಕಳಿಸುವಂತೆ ಮಾಡುವ, ನಾಡಿನ ಕಲೆ ಮತ್ತು ಸಂಸ್ಕೃತಿಯ ಪ್ರತೀಕವಾಗಿರುವ ಐತಿಹಾಸಿಕ ಹಂಪಿ ಉತ್ಸವಕ್ಕೆ ಅದ್ದೂರಿ ಚಾಲನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗಾರಿ ಬಾರಿಸುವ ಮೂಲಕ ನೀಡಿದ್ದರು, ಉತ್ಸವ ಶುರುವಾಗಿ ಮುಗಿತು ಕೂಡ ಆದರೆ ಈ ಸಂಭ್ರಮದ ವಾತಾವರಣದ ನಡುವೆಯೇ ವೇದಿಕೆಯ ಮೇಲೆ ನಡೆದ ಒಂದು ಅನಿರೀಕ್ಷಿತ ಘಟನೆ ಈಗ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಡಾ. ಪುನೀತ್ ರಾಜ್ಕುಮಾರ್ ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ನಡೆದಿದ್ದೇನು? ವೈರಲ್ ಆಗುತ್ತಿರುವ ವಿಡಿಯೋದಲ್ಲೇನಿದೆ?
ಹಂಪಿ ಉತ್ಸವದ ಉದ್ಘಾಟನಾ ಸಮಾರಂಭಕ್ಕೆ ಸ್ಯಾಂಡಲ್ ವುಡ್ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದರು. ಮುಖ್ಯಮಂತ್ರಿಗಳು ವೇದಿಕೆಗೆ ಆಗಮಿಸಿದ ಸಂದರ್ಭದಲ್ಲಿ, ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಗೌರವಪೂರ್ವಕವಾಗಿ ಸಿದ್ದರಾಮಯ್ಯನವರಿಗೆ ನಮಸ್ಕರಿಸಿದರು.
ಈ ಸಂದರ್ಭದಲ್ಲಿ ನಡೆದ ಘಟನೆ ಈಗ ವಿವಾದಕ್ಕೆ ಕಾರಣವಾಗಿದೆ. ತಮಗೆ ನಮಸ್ಕರಿಸಿದ ಅಶ್ವಿನಿ ಅವರನ್ನು ಗುರುತಿಸಲು ವಿಫಲರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಪಕ್ಕದಲ್ಲಿದ್ದವರ ಕಡೆಗೆ ತಿರುಗಿ ಇವರು ಯಾರು? ಎಂದು ಪ್ರಶ್ನಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಪಕ್ಕದಲ್ಲಿದ್ದವರು, ಇವರು ಪುನೀತ್ ರಾಜ್ಕುಮಾರ್ ಅವರ ಪತ್ನಿ ಎಂದು ತಿಳಿಸಿದ್ದಾರೆ. ಆಗ ಪ್ರತಿಕ್ರಿಯಿಸಿದ ಸಿಎಂ, ಓಹ್ ಅಶ್ವಿನಿ ಅವರೇ.. ಇರಲಿ ಬಿಡಿ, ನೋಡಿ ತುಂಬಾ ದಿನವಾಯ್ತಲ್ಲ ಎಂದು ಸಬೂಬು ನೀಡಿದ್ದಾರೆ. ಈ ದೃಶ್ಯಾವಳಿಗಳು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಅಪ್ಪು ಅಭಿಮಾನಿಗಳ ಆಕ್ರೋಶ
ಕರ್ನಾಟಕದ ಮನೆಮಾತಾಗಿರುವ, ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ ದೈವದ ಸ್ಥಾನ ಪಡೆದಿರುವ ಪುನೀತ್ ರಾಜ್ಕುಮಾರ್ ಅವರ ಕುಟುಂಬವನ್ನು ರಾಜ್ಯದ ಮುಖ್ಯಮಂತ್ರಿಯೊಬ್ಬರು ಗುರುತಿಸದೇ ಇರುವುದು ಅಭಿಮಾನಿಗಳಿಗೆ ತೀವ್ರ ಆಘಾತ ಮತ್ತು ಬೇಸರ ತಂದಿದೆ.
ಅಪ್ಪು ಅವರು ಈ ರಾಜ್ಯಕ್ಕೆ, ಇಲ್ಲಿನ ಜನತೆಗೆ ಮತ್ತು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರ. ಅವರ ಅಗಲಿಕೆಯ ನಂತರ ಅಶ್ವಿನಿ ಮೇಡಂ ಅವರು ಶಕ್ತಿಧಾಮದ ಮೂಲಕ ಹಾಗೂ ಪಿಆರ್ಕೆ ಬ್ಯಾನರ್ ಮೂಲಕ ಸದ್ದಿಲ್ಲದೆ ಸಮಾಜ ಸೇವೆ ಮತ್ತು ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತಹ ವ್ಯಕ್ತಿತ್ವವನ್ನು ನೀವು ಮರೆತಿರುವುದು ಹೇಗೆ ಸಾಧ್ಯ? ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ.
ಇದು ಅಶ್ವಿನಿ ಮೇಡಂ ಅವರಿಗೆ ಮಾಡಿದ ಅವಮಾನವಲ್ಲ, ಬದಲಾಗಿ ಸಮಸ್ತ ಅಪ್ಪು ಅಭಿಮಾನಿಗಳಿಗೆ ಆದ ನೋವು ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ. ಸಾರ್ವಜನಿಕ ಸಮಾರಂಭಗಳಲ್ಲಿ ಇಂತಹ ನಡೆಗಳು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇನ್ನು ಕೆಲವರು ರಾಜಕೀಯ ಕಾರಣಗಳನ್ನು ಮುಂದಿಟ್ಟುಕೊಂಡು ತೀವ್ರವಾಗಿ ಟೀಕಿಸುತ್ತಿದ್ದು, ಒಟ್ಟಾರೆಯಾಗಿ ಹಂಪಿ ಉತ್ಸವದ ಸಂಭ್ರಮದ ನಡುವೆ ಈ ಘಟನೆ ಕಹಿ ಪ್ರಸಂಗವಾಗಿ ಮಾರ್ಪಟ್ಟಿದೆ.







