ಬಾಹ್ಯಾಕಾಶದ ವಿಸ್ಮಯಕಾರಿ ವಿದ್ಯಮಾನಗಳಿಗಾಗಿ ಕಾತರದಿಂದ ಕಾಯುವ ಖಗೋಳಾಸಕ್ತರಿಗೆ ಇದೊಂದು ಸಿಹಿ ಸುದ್ದಿ. 2026ನೇ ಸಾಲಿನ ಮೊದಲ ಸೂರ್ಯಗ್ರಹಣಕ್ಕೆ ದಿನಗಣನೆ ಆರಂಭವಾಗಿದ್ದು, ಜಗತ್ತಿನಾದ್ಯಂತ ಜನರು ರಿಂಗ್ ಆಫ್ ಫೈರ್ ಅಥವಾ ಬೆಂಕಿಯ ಉಂಗುರ ಎಂದೇ ಖ್ಯಾತಿ ಪಡೆದಿರುವ ಈ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಜ್ಜಾಗಿದ್ದಾರೆ. ಫೆಬ್ರವರಿ 17 ಅಂದರೆ ಮಂಗಳವಾರದಂದು ಸಂಭವಿಸಲಿರುವ ಈ ಕಂಕಣ ಸೂರ್ಯಗ್ರಹಣವು ಖಗೋಳ ಲೋಕದಲ್ಲಿ ಹೊಸ ಸಂಚಲನ ಮೂಡಿಸಲಿದೆ.
ಬೆಂಕಿಯ ಉಂಗುರ ಸೃಷ್ಟಿಯಾಗುವುದು ಹೇಗೆ
ಭೂಮಿ, ಸೂರ್ಯ ಮತ್ತು ಚಂದ್ರ ಒಂದೇ ಸರಳ ರೇಖೆಯಲ್ಲಿ ಬಂದಾಗ ಗ್ರಹಣ ಸಂಭವಿಸುತ್ತದೆ. ಆದರೆ ಕಂಕಣ ಸೂರ್ಯಗ್ರಹಣವು ಸಾಮಾನ್ಯ ಗ್ರಹಣಕ್ಕಿಂತ ಭಿನ್ನವಾಗಿರುತ್ತದೆ. ನಾಸಾ ವಿಜ್ಞಾನಿಗಳ ಪ್ರಕಾರ, ಈ ಸಮಯದಲ್ಲಿ ಚಂದ್ರನು ಭೂಮಿಯಿಂದ ತನ್ನ ಕಕ್ಷೆಯಲ್ಲಿ ಅತ್ಯಂತ ದೂರದ ಬಿಂದುವಿನಲ್ಲಿರುತ್ತಾನೆ. ಹೀಗಾಗಿ, ಚಂದ್ರನ ಗಾತ್ರವು ಭೂಮಿಯಿಂದ ನೋಡುವಾಗ ಸೂರ್ಯನಿಗಿಂತ ಚಿಕ್ಕದಾಗಿ ಕಾಣುತ್ತದೆ.
ಪರಿಣಾಮವಾಗಿ, ಚಂದ್ರನು ಸೂರ್ಯನ ಮಧ್ಯಭಾಗವನ್ನು ಮಾತ್ರ ಆವರಿಸಿಕೊಳ್ಳುತ್ತಾನೆ ಹೊರತು ಸಂಪೂರ್ಣವಾಗಿ ಮರೆಮಾಚುವುದಿಲ್ಲ. ಈ ಸಂದರ್ಭದಲ್ಲಿ ಸೂರ್ಯನ ಅಂಚುಗಳು ಚಂದ್ರನ ಸುತ್ತಲೂ ಉರಿಯುವ ಬೆಂಕಿಯ ಉಂಗುರದಂತೆ ಗೋಚರಿಸುತ್ತವೆ. ಈ ಅದ್ಭುತ ದೃಶ್ಯವೇ ರಿಂಗ್ ಆಫ್ ಫೈರ್. ವರದಿಗಳ ಪ್ರಕಾರ, ಈ ಬಾರಿ ಸೂರ್ಯನ ಶೇಕಡಾ 96ರಷ್ಟು ಭಾಗವನ್ನು ಚಂದ್ರ ಆವರಿಸಲಿದ್ದು, ಸುಮಾರು 2 ನಿಮಿಷ 20 ಸೆಕೆಂಡುಗಳ ಕಾಲ ಈ ವಿಸ್ಮಯಕಾರಿ ದೃಶ್ಯ ಮುಂದುವರಿಯಲಿದೆ.
ಗ್ರಹಣದ ಸಮಯ ವಿವರ
ಭಾರತೀಯ ಕಾಲಮಾನದ ಪ್ರಕಾರ ಈ ಗ್ರಹಣದ ಪ್ರಕ್ರಿಯೆಯು ಸುಮಾರು 4 ಗಂಟೆ 32 ನಿಮಿಷಗಳ ಕಾಲ ನಡೆಯಲಿದೆ.
ಆರಂಭ: ಮಧ್ಯಾಹ್ನ 3:26ಕ್ಕೆ
ಗರಿಷ್ಠ ಹಂತ (ಪೂರ್ಣ ಕಂಕಣ): ಸಂಜೆ 5:42ಕ್ಕೆ
ಮುಕ್ತಾಯ: ಸಂಜೆ 7:57ಕ್ಕೆ
ಭಾರತದಲ್ಲಿ ಗ್ರಹಣ ಗೋಚರವಾಗಲಿದೆಯೇ
ಭಾರತದ ಖಗೋಳಾಸಕ್ತರಿಗೆ ಈ ಬಾರಿ ನಿರಾಸೆಯಾಗುವ ಸಾಧ್ಯತೆಯಿದೆ. ಏಕೆಂದರೆ ಈ ಕಂಕಣ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಏಷ್ಯಾ ಖಂಡದ ಬಹುತೇಕ ಭಾಗಗಳಲ್ಲಿ ಈ ಗ್ರಹಣದ ನೆರಳು ಬೀಳುವುದಿಲ್ಲ. ಭಾರತದಲ್ಲಿ ಗ್ರಹಣ ಕಾಣಿಸದಿರುವುದರಿಂದ, ಯಾವುದೇ ರೀತಿಯ ಸೂತಕ ಆಚರಣೆಗಳು ಅಥವಾ ವಿಶೇಷ ಧಾರ್ಮಿಕ ವಿಧಿವಿಧಾನಗಳನ್ನು ಪಾಲಿಸುವ ಅಗತ್ಯವಿರುವುದಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ದೇವಾಲಯಗಳು ಎಂದಿನಂತೆ ತೆರೆದಿರುತ್ತವೆ ಮತ್ತು ಪೂಜಾ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿವೆ.
ಜಗತ್ತಿನ ಎಲ್ಲೆಲ್ಲಿ ಗೋಚರಿಸಲಿದೆ
ಈ ಅಪರೂಪದ ಕಂಕಣ ಸೂರ್ಯಗ್ರಹಣವು ಪ್ರಮುಖವಾಗಿ ಅಂಟಾರ್ಕ್ಟಿಕಾ ಭಾಗದಲ್ಲಿ ಸ್ಪಷ್ಟವಾಗಿ ಗೋಚರಿಸಲಿದೆ. ಅದರಲ್ಲೂ ಕಾನ್ಕಾರ್ಡಿಯಾ ಮತ್ತು ಮಿರ್ನಿಯಂತಹ ಸಂಶೋಧನಾ ಕೇಂದ್ರಗಳಲ್ಲಿರುವವರಿಗೆ ಇದು ಸ್ಪಷ್ಟವಾಗಿ ಕಾಣಲಿದೆ. ಇದನ್ನು ಹೊರತುಪಡಿಸಿ:
ದಕ್ಷಿಣ ಆಫ್ರಿಕಾ ಭಾಗಗಳು: ಟಾಂಜಾನಿಯಾ, ಜಾಂಬಿಯಾ, ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಭಾಗಶಃ ಗ್ರಹಣ ಗೋಚರಿಸಲಿದೆ.
ದಕ್ಷಿಣ ಅಮೆರಿಕ: ಅರ್ಜೆಂಟೀನಾ ಮತ್ತು ಚಿಲಿಯ ಕೆಲವು ಭಾಗಗಳ ಜನರು ಈ ವಿಸ್ಮಯವನ್ನು ನೋಡಬಹುದು.
ಗ್ರಹಣ ಹವಾಮಾನಶಾಸ್ತ್ರಜ್ಞ ಜೇ ಆಂಡರ್ಸನ್ ಅವರ ಪ್ರಕಾರ, ಈ ಗ್ರಹಣದ ಪೂರ್ಣ ವೃತ್ತಾಕಾರದ ವಲಯವು ಜನವಸತಿ ಇಲ್ಲದ ಪ್ರದೇಶಗಳಲ್ಲಿ ಹಾದುಹೋಗುವುದರಿಂದ, ಕೆಲವೇ ಕೆಲವು ಸಾಹಸಿಗರು ಅಥವಾ ವಿಜ್ಞಾನಿಗಳು ಮಾತ್ರ ಇದನ್ನು ನೇರವಾಗಿ ವೀಕ್ಷಿಸಲು ಸಾಧ್ಯವಾಗಬಹುದು.
ಮನೆಯಲ್ಲೇ ಕುಳಿತು ವೀಕ್ಷಿಸುವುದು ಹೇಗೆ
ಭಾರತದಲ್ಲಿ ಗ್ರಹಣ ಗೋಚರಿಸದಿದ್ದರೂ, ತಂತ್ರಜ್ಞಾನದ ಮೂಲಕ ಈ ಅದ್ಭುತವನ್ನು ಕಣ್ತುಂಬಿಕೊಳ್ಳುವ ಅವಕಾಶವಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ಮತ್ತು ಇತರ ಪ್ರಮುಖ ಖಗೋಳ ಸಂಸ್ಥೆಗಳು ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ ಹಾಗೂ ವೆಬ್‌ಸೈಟ್‌ಗಳಲ್ಲಿ ಗ್ರಹಣದ ನೇರಪ್ರಸಾರವನ್ನು (Live Streaming) ಮಾಡಲಿವೆ. ಆಸಕ್ತರು ಮಂಗಳವಾರ ಮಧ್ಯಾಹ್ನದಿಂದಲೇ ಆನ್‌ಲೈನ್ ಮೂಲಕ ಈ ಬೆಂಕಿಯ ಉಂಗುರವನ್ನು ವೀಕ್ಷಿಸಿ ಆನಂದಿಸಬಹುದು.







