ಬೆಂಗಳೂರು: ಕರ್ನಾಟಕದ ವಿಧಾನಸಭೆ ಅಧಿವೇಶನವು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ತೀವ್ರ ಜಟಾಪಟಿಗೆ ಸಾಕ್ಷಿಯಾಗಿದೆ. ಅದರಲ್ಲೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಬಿಜೆಪಿ ಶಾಸಕ ಮುನಿರತ್ನ ಅವರ ನಡುವೆ ನಡೆದ ಮಾತಿನ ಚಕಮಕಿ ಇದೀಗ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಸದನದಲ್ಲಿ ನಡೆದ ಈ ಘಟನೆಯನ್ನು ಮುಂದಿಟ್ಟುಕೊಂಡು ರಾಜ್ಯ ಬಿಜೆಪಿ ಘಟಕವು ಡಿಕೆ ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಡಿಸಿಎಂ ಅವರಿಗೆ ಹಳೆಯ ಭೂಗತ ಲೋಕದ ನಂಟು ಮತ್ತು ರೌಡಿಸಂ ಸಂಸ್ಕೃತಿ ಇನ್ನೂ ಹೋಗಿಲ್ಲ ಎಂದು ಗಂಭೀರ ಆರೋಪ ಮಾಡಿದೆ.
ವಿಧಾನಸಭೆಯಲ್ಲಿ ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದ ಚರ್ಚೆ ನಡೆಯುತ್ತಿತ್ತು. ಈ ವೇಳೆ ಶಾಸಕ ಮುನಿರತ್ನ ಅವರು ಉಪಮುಖ್ಯಮಂತ್ರಿಗಳನ್ನು ಪ್ರಶ್ನಿಸುತ್ತಾ, ನನ್ನ ಪ್ರಶ್ನೆಗೆ ಉತ್ತರ ಕೊಡುವ ತಾಕತ್ತು ನಿಮಗಿದೆಯಾ ಎಂದು ಸವಾಲು ಹಾಕಿದರು. ಮುನಿರತ್ನ ಅವರ ಈ ಮಾತು ಡಿ.ಕೆ. ಶಿವಕುಮಾರ್ ಅವರನ್ನು ಕೆರಳಿಸಿತು. ತಕ್ಷಣವೇ ಆಕ್ರೋಶಗೊಂಡ ಡಿಕೆಶಿ, ನನ್ನ ಯೋಗ್ಯತೆ, ತಾಕತ್ತು ಮತ್ತು ದಮ್ಮು ಏನು ಎಂಬುದನ್ನು ನಾನು ತೋರಿಸಬೇಕಾ? ಎಂದು ಏರುಧ್ವನಿಯಲ್ಲಿ ತಿರುಗೇಟು ನೀಡಿದರು. ಈ ಸಂದರ್ಭದಲ್ಲಿ ಸದನದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಇಬ್ಬರು ನಾಯಕರ ನಡುವಿನ ವಾಗ್ವಾದ ವಿಕೋಪಕ್ಕೆ ಹೋಗುತ್ತಿದ್ದಂತೆ, ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಪರಸ್ಪರ ಘೋಷಣೆಗಳನ್ನು ಕೂಗಲು ಆರಂಭಿಸಿದರು.
ಬಿಜೆಪಿಯಿಂದ ಆ ದಿನಗಳು ಪ್ರಸ್ತಾಪ
ಡಿಕೆ ಶಿವಕುಮಾರ್ ಅವರ ಈ ವರ್ತನೆಯನ್ನು ಖಂಡಿಸಿರುವ ರಾಜ್ಯ ಬಿಜೆಪಿ, ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಾಗ್ದಾಳಿ ನಡೆಸಿದೆ. ಡಿಸಿಎಂ ಡಿಕೆಶಿ ಅವರಿಗೆ ಆ ದಿನಗಳು ಮತ್ತೆ ನೆನಪಾದಂತಿದೆ. ಕುಖ್ಯಾತ ರೌಡಿ ಕೊತ್ವಾಲ್ ರಾಮಚಂದ್ರನ ಶಿಷ್ಯ ಎಂಬುದನ್ನು ಸದನದಲ್ಲಿ ತೋರಿಸುವ ಯಾವ ಅಗತ್ಯವೂ ಇರಲಿಲ್ಲ ಎಂದು ಬಿಜೆಪಿ ಟೀಕಿಸಿದೆ. ಉಪಮುಖ್ಯಮಂತ್ರಿ ಸ್ಥಾನದಲ್ಲಿರುವ ವ್ಯಕ್ತಿ ತೋಳ್ಬಲ ಪ್ರದರ್ಶನಕ್ಕೆ ಇಳಿಯುವುದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವಂತದ್ದಲ್ಲ ಎಂದು ಬಿಜೆಪಿ ಕಿಡಿಕಾರಿದೆ.
ಬಿಜೆಪಿ ತನ್ನ ಟೀಕೆಯನ್ನು ಮುಂದುವರಿಸುತ್ತಾ, ನರಿಯನ್ನು ಸಿಂಹಾಸನದ ಮೇಲೆ ಕೂರಿಸಿದರೂ ಅದು ತನ್ನ ಸಹಜ ಚಾಳಿಯನ್ನು ಬಿಡುವುದಿಲ್ಲ. ಅದೇ ರೀತಿ ಕೊತ್ವಾಲ್ ಶಿಷ್ಯಂದಿರನ್ನು ಎಷ್ಟೇ ಉನ್ನತ ಮಟ್ಟದ ಸ್ಥಾನಕ್ಕೆ ಕೂರಿಸಿದರೂ ಅವರು ತಮ್ಮ ಹಳೆಯ ಗೂಂಡಾಗಿರಿ ಬುದ್ಧಿಯನ್ನು ಬಿಡುವುದಿಲ್ಲ ಎನ್ನುವುದಕ್ಕೆ ಡಿಕೆ ಶಿವಕುಮಾರ್ ಅವರೇ ಸಾಕ್ಷಿ ಎಂದು ವ್ಯಂಗ್ಯವಾಡಿದೆ. ಮಿಸ್ಟರ್ ಡಿಕೆ ಶಿವಕುಮಾರ್ ಅವರೇ, ಸದನ ಇರುವುದು ಜನರ ಸಂಕಟ ಮತ್ತು ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಚರ್ಚಿಸುವುದಕ್ಕೆಯೇ ಹೊರತು, ಧಮ್ಕಿ ಹಾಕುವುದಕ್ಕಲ್ಲ ಎಂದು ಬಿಜೆಪಿ ಚುರುಕು ಮುಟ್ಟಿಸಿದೆ.
ಕೇವಲ ಉಪಮುಖ್ಯಮಂತ್ರಿಯಾಗಿರುವಾಗಲೇ ಡಿಕೆ ಶಿವಕುಮಾರ್ ಹೀಗೆ ವರ್ತಿಸುತ್ತಿದ್ದಾರೆ. ಇನ್ನು ಇವರಿಗೆ ಮುಖ್ಯಮಂತ್ರಿ ಕುರ್ಚಿ ಸಿಕ್ಕರೆ ರಾಜ್ಯದ ಪರಿಸ್ಥಿತಿ ಏನಾಗಬಹುದು ಎಂದು ಬಿಜೆಪಿ ಪ್ರಶ್ನಿಸಿದೆ. ಒಂದು ವೇಳೆ ಅವರು ಸಿಎಂ ಆದರೆ ರಾಜ್ಯದಲ್ಲಿ ಮತ್ತೆ ಕೊತ್ವಾಲ್ ಶೈಲಿಯ ದುರಾಡಳಿತ ಮತ್ತು ಗೂಂಡಾ ರಾಜ್ಯಭಾರ ಬರುವುದು ಗ್ಯಾರಂಟಿ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಒಟ್ಟಿನಲ್ಲಿ ಸದನದಲ್ಲಿ ನಡೆದ ದಮ್ಮು ತಾಕತ್ತು ವಾಗ್ವಾದವು ಇದೀಗ ಬೀದಿರಂಪವಾಗಿ ಮಾರ್ಪಟ್ಟಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ಕದನವನ್ನು ಮತ್ತಷ್ಟು ತೀವ್ರಗೊಳಿಸಿದೆ.







