ಬೆಳಗಾವಿ: ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಆಂತರಿಕ ಅಸಮಾಧಾನ ಸ್ಫೋಟಗೊಂಡ ಪ್ರಸಂಗ ನಡೆದಿದೆ. ಸ್ವಪಕ್ಷದ ಶಾಸಕರೇ ಮುಖ್ಯಮಂತ್ರಿಗಳ ವಿರುದ್ಧ ಅನುದಾನ ತಾರತಮ್ಯದ ಆರೋಪ ಮಾಡಿ ಸದನದಲ್ಲಿ ಏರುಧ್ವನಿಯಲ್ಲಿ ಮಾತನಾಡಿದ್ದು, ಪ್ರತಿಪಕ್ಷ ಬಿಜೆಪಿಗೆ ಪ್ರಬಲ ಅಸ್ತ್ರ ಒದಗಿಸಿದಂತಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಕುಣಿಗಲ್ ಶಾಸಕ ಡಾ. ರಂಗನಾಥ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಮಧುಗಿರಿಗೆ 100 ಕೋಟಿ, ನಮಗೇಕಿಲ್ಲ?
ವಿಧಾನಸಭೆಯ ಕಲಾಪದ ವೇಳೆ ಮಾತನಾಡಿದ ಶಾಸಕ ರಂಗನಾಥ್, ತಮ್ಮ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ವಿಚಾರದಲ್ಲಿ ತಾರತಮ್ಯವಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಮಧುಗಿರಿ ಕ್ಷೇತ್ರಕ್ಕೆ 100 ಕೋಟಿ ರೂಪಾಯಿ ಅನುದಾನ ನೀಡುತ್ತೀರಿ. ಆದರೆ, ನನ್ನ ಕ್ಷೇತ್ರಕ್ಕೆ ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಸುಮಾರು 1000 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ತಡೆಹಿಡಿಯಲಾಗಿದೆ. ಇದು ಯಾವ ನ್ಯಾಯ? ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ನೇರವಾಗಿ ಪ್ರಶ್ನಿಸಿದರು.
ನಿಮ್ಮ ಮೇಲೆ ಗೌರವವಿದೆ, ಆದರೆ ಅನ್ಯಾಯ ಸಹಿಸಲ್ಲ
ಮುಖ್ಯಮಂತ್ರಿಗಳತ್ತ ಬೆರಳು ಮಾಡಿ ಮಾತನಾಡಿದ ರಂಗನಾಥ್, ಮುಖ್ಯಮಂತ್ರಿಗಳೇ, ನಿಮ್ಮ ಮೇಲೆ ನನಗೆ ಅಪಾರ ಗೌರವವಿದೆ. ವೈಯಕ್ತಿಕವಾಗಿ ನಿಮ್ಮ ಮೇಲೆ ನನಗೆ ಯಾವುದೇ ಆಕ್ರೋಶವಿಲ್ಲ. ಆದರೆ, ನನ್ನ ಕ್ಷೇತ್ರದ ಜನರ ಹಿತದೃಷ್ಟಿಯಿಂದ ನಾನು ಈ ಪ್ರಶ್ನೆ ಕೇಳಲೇಬೇಕಿದೆ. ಕುಣಿಗಲ್ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಬಿಡುಗಡೆಯಾಗಬೇಕಿದ್ದ ಅನುದಾನದ ಬಗ್ಗೆಯೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ತಮ್ಮ ನೋವು ತೋಡಿಕೊಂಡರು.
ಸಮಾಧಾನಪಡಿಸಲು ಯತ್ನಿಸಿದ ಸಿಎಂ
ಸ್ವಪಕ್ಷೀಯ ಶಾಸಕನ ಅನಿರೀಕ್ಷಿತ ಆಕ್ರೋಶದಿಂದ ಮುಜುಗರಕ್ಕೀಡಾದ ಸಿಎಂ ಸಿದ್ದರಾಮಯ್ಯ, ಕೂಡಲೇ ಎದ್ದುನಿಂತು ಉತ್ತರಿಸಿದರು. ನಮ್ಮ ಸರ್ಕಾರ ಯಾರ ಅನುದಾನವನ್ನೂ ಕಡಿತಗೊಳಿಸಿಲ್ಲ. ಒಂದು ವೇಳೆ ಅನುದಾನ ಹಂಚಿಕೆಯಲ್ಲಿ ಹೆಚ್ಚು ಕಡಿಮೆಯಾಗಿದ್ದರೆ ಅಥವಾ ತಾರತಮ್ಯವಾಗಿದ್ದರೆ ಅದನ್ನು ಖಂಡಿತವಾಗಿಯೂ ಪರಿಶೀಲಿಸುತ್ತೇನೆ. ನನ್ನ ಮೇಲೆ ವಿಶ್ವಾಸವಿಡಿ, ಆಗಿರುವ ಸಮಸ್ಯೆಯನ್ನು ಸರಿಪಡಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕರನ್ನು ಸಮಾಧಾನಪಡಿಸಲು ಯತ್ನಿಸಿದರು.
ಕಾಂಗ್ರೆಸ್ ಮನೆಯ ಜಗಳ ಬೀದಿಗೆ ಬರುತ್ತಿದ್ದಂತೆಯೇ, ಪ್ರತಿಪಕ್ಷ ನಾಯಕ ಆರ್. ಅಶೋಕ್ ಎಂಟ್ರಿ ಕೊಟ್ಟು ಪರಿಸ್ಥಿತಿಯ ಲಾಭ ಪಡೆಯಲು ಮುಂದಾದರು. ಕುಣಿಗಲ್ ಶಾಸಕರ ಆಕ್ರೋಶ ಕೇವಲ ಅನುದಾನಕ್ಕಲ್ಲ, ಅದು ರಾಜಕೀಯ ಕಾರಣಕ್ಕೆ ಎಂದು ವ್ಯಂಗ್ಯವಾಡಿದರು. ಅವರಿಗೆ ಒಳಗೊಳಗೆ ಉರಿಯುತ್ತಿದೆ. ತಮ್ಮ ನಾಯಕರಿಗೆ (ಡಿಕೆಶಿ) ಸಿಎಂ ಕುರ್ಚಿ ಸಿಕ್ಕಿಲ್ಲ ಎಂಬ ಕಾರಣಕ್ಕೆ ಈ ರೀತಿ ಆಕ್ರೋಶ ಹೊರಹಾಕುತ್ತಿದ್ದಾರೆ. ಪೂಜೆ ಪುರಸ್ಕಾರ ಮಾಡಿದರೂ ಫಲ ಸಿಗಲಿಲ್ಲ ಎಂಬ ನೋವು ಇರಬಹುದು ಎಂದು ಡಿಕೆಶಿ ಕಡೆಗೆ ಬೆರಳು ಮಾಡಿ ಅಶೋಕ್ ಕಾಲೆಳೆದರು.
ಈ ವೇಳೆ ಮಧ್ಯಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ, ಅಶೋಕ್, ನೀನು ಉರಿಯುವ ಬೆಂಕಿಗೆ ತುಪ್ಪ ಸುರಿಯಬೇಡ ಸುಮ್ಮನಿರು ಎಂದು ಗದರಿದರು. ಸಿಎಂ ಮಾತನ್ನೇ ಅಸ್ತ್ರವನ್ನಾಗಿಸಿಕೊಂಡ ಅಶೋಕ್, ನೋಡಿದ್ರಾ ಅಧ್ಯಕ್ಷರೇ, ಸ್ವತಃ ಮುಖ್ಯಮಂತ್ರಿಗಳೇ ಉರಿಯುವ ಬೆಂಕಿ ಎನ್ನುತ್ತಿದ್ದಾರೆ. ಹಾಗಾದರೆ ಕಾಂಗ್ರೆಸ್ ಪಕ್ಷದಲ್ಲಿ ಬೆಂಕಿ ಬಿದ್ದಿರುವುದು, ಒಳಜಗಳ ನಡೆಯುತ್ತಿರುವುದು ಸತ್ಯವಲ್ಲವೇ? ಎಂದು ಮರುಪ್ರಶ್ನೆ ಹಾಕಿದರು. ಇದಕ್ಕೆ ಉತ್ತರಿಸಿದ ಸಿಎಂ, ಅದು ಕೇವಲ ಗಾದೆ ಮಾತು. ಅದನ್ನು ಅಕ್ಷರಶಃ ತೆಗೆದುಕೊಳ್ಳಬೇಡಿ ಎಂದು ಸಮಜಾಯಿಷಿ ನೀಡಿದರು.
ಐದು ವರ್ಷ ನಾವೇ ಇರುತ್ತೇವೆ
ಇದೇ ಸಂದರ್ಭದಲ್ಲಿ ಸರ್ಕಾರದ ಅವಧಿಯ ಬಗ್ಗೆಯೂ ಚರ್ಚೆ ನಡೆಯಿತು. ಐದು ವರ್ಷ ನೀವೇ ಇರುತ್ತೀರಾ ಎಂಬ ಗ್ಯಾರಂಟಿ ಇದೆಯಾ ಎಂದು ಅಶೋಕ್ ಲೇವಡಿ ಮಾಡಿದರು. ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ರಾಜ್ಯದ ಜನತೆ ನಮಗೆ ಐದು ವರ್ಷ ಆಶೀರ್ವಾದ ಮಾಡಿದ್ದಾರೆ. ನಮ್ಮ ಬಳಿ 136 ಶಾಸಕರ ಬೆಂಬಲವಿದೆ. ಐದು ವರ್ಷ ನಾವೇ ಸುಭದ್ರವಾಗಿ ಆಡಳಿತ ನಡೆಸುತ್ತೇವೆ. ನಿಮ್ಮ ಆಸೆಗಳೇನೂ ಈಡೇರುವುದಿಲ್ಲ ಎಂದು ಟಾಂಗ್ ನೀಡಿದರು.
ಒಟ್ಟಾರೆಯಾಗಿ, ಬೆಳಗಾವಿ ಅಧಿವೇಶನದಲ್ಲಿ ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದು, ಅನುದಾನ ಹಂಚಿಕೆ ವಿಚಾರ ಕಾಂಗ್ರೆಸ್ ಪಡಸಾಲೆಯಲ್ಲಿ ಹೊಗೆಯಾಡುತ್ತಿರುವ ಅಸಮಾಧಾನವನ್ನು ಜಗಜ್ಜಾಹೀರು ಮಾಡಿದೆ.






