DKS – Siddu | ಕಾಂಗ್ರೆಸ್ ಗೆ “ರಾಹು” ಕಾಟ.. ಏನಿದು ಕಚ್ಚಾಟ ?
ಪಂಜಾಬ್, ಮಧ್ಯಪ್ರದೇಶದ ಕಾಂಗ್ರೆಸ್ ಪರಿಸ್ಥಿತಿಯೇ ರಾಜ್ಯ ಕಾಂಗ್ರೆಸ್ ಗೆ ಬರಲಿದ್ಯಾ ? ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಅನ್ನೋ ಗಾದೆಯಂತೆ ಸದ್ಯ ಕರ್ನಾಟಕದಲ್ಲಿರುವ ಉತ್ತಮ ಸ್ಥಿತಿಯನ್ನ ಕಾಂಗ್ರೆಸ್ ತನ್ನ ಕೈಯಿಂದ ನಾಶ ಮಾಡಿಕೊಳ್ಳಲಿದ್ಯಾ ? ವಿಪಕ್ಷ ನಾಯಕ ಸಿದ್ದರಾಮಯ್ಯ – ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವಿನ ಮುಸುಕಿನ ಗುದ್ದಾಟ ಕಾಂಗ್ರೆಸ್ ಗೆ ನಷ್ಟವನ್ನ ಉಂಟು ಮಾಡಲಿದ್ಯಾ ? ಅನ್ನುವ ಪ್ರಶ್ನೆಗಳು ಸದ್ಯ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿವೆ.
ಹೌದು..! ಸಿದ್ದರಾಮೋತ್ಸವದಲ್ಲಿ ಡಿ.ಕೆ.ಶಿವಕುಮಾರ್ – ಸಿದ್ದರಾಮಯ್ಯ ಅಪ್ಪಿಕೊಂಡು ದೋಸ್ತಿ ಪ್ರದರ್ಶಿಸಿದ್ದರು. ಇದು ರಾಜ್ಯ ಕಾಂಗ್ರೆಸ್ ನಲ್ಲಿ ಹೊಸ ಸಂಚಲನವನ್ನು ಸೃಷ್ಠಿಸಿತ್ತು. ಉಭಯರೂ ಜೋಡೆತ್ತುಗಳಂತೆ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರ್ತಾರೆ. ಈ ಜೋಡೆತ್ತುಗಳು ಕಾಂಗ್ರೆಸ್ ಬಂಡಿಯನ್ನ ಅಧಿಕಾರದತ್ತ ಎಳೆದುಕೊಂಡು ಹೋಗುತ್ತವೆ ಎಂದು ಎಲ್ಲರೂ ಅಂದಾಜಿಸಿದ್ದರು.
ಆದ್ರೆ ರಾಹುಲ್ ಗಾಂಧಿಯ ಭಾರತ್ ಜೋಡೋ ಪಾದಯಾತ್ರೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ನಲ್ಲಿ ದಂಗಲ್ ಶುರುವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ಕಾಂಗ್ರೆಸ್ ಗೆ ನಾನೇ ಬಾಸ್, ನಾನು ಹೇಳಿದ್ದೆ ಅಂತಿಮ ಎಂಬಂತೆ ಕೆಲವು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪಕ್ಷದ ಹಿರಿಯ ನಾಯಕರ ವಿರುದ್ಧ ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೆಲಸ ಮಾಡಿ ಇಲ್ಲಾ ಮನೆಗೆ ಹೋಗಿ ಎಂಬಂತೆ ಮಾತನಾಡುತ್ತಿದ್ದಾರೆ. ಇದು ಸಹಜವಾಗಿಯೇ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವವರಿಗೆ ಅಸಮಧಾನ ಉಂಟು ಮಾಡಿದೆ. ಇತ್ತ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಸೈಲೆಂಟ್ ಆಗಿ ರಣತಂತ್ರ ರೂಪಿಸುತ್ತಿದ್ದಾರೆ. ಈ ನಡುವೆ ಸಿದ್ದು ಶಿಷ್ಯರು ಡಿ.ಕೆ.ಶಿವಕುಮಾರ್ ನಡೆಯ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಇದನ್ನ ಗಮನಿಸಿರುವ ಪಕ್ಷದ ಕೆಲವು ಹಿರಿಯ ನಾಯಕರು, ನಾವು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಬೇಕು. ಅಭ್ಯರ್ಥಿಗಳು ಯಾರಾಗಬೇಕು. ಸಿಎಂ ಯಾರಗಬೇಕು ಅಂತಾ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಯಾವುದೇ ಗೊಂದಲಕ್ಕೆ ದಾರಿ ಮಾಡಿಕೊಡದೇ ಎಲ್ಲರೂ ಒಟ್ಟಾಗಿ ಹೋಗೋಣ ಅಂತಾ ಡಿಕೆಶಿಗೆ ಸಲಹೆ ನೀಡಿದ್ದಾರಂತೆ.
ಒಟ್ಟಾರೆ ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆ ರಾಜ್ಯ ಕಾಂಗ್ರೆಸ್ ಗೆ ಶಕ್ತಿ ನೀಡಬೇಕಿತ್ತು. ಆದ್ರೆ ಅದೇ ರಾಜ್ಯ ಕಾಂಗ್ರೆಸ್ ನಲ್ಲಿ ಮುಸುಕಿನ ಗುದ್ದಾಟಕ್ಕೆ ಕಾರಣವಾದಂತೆ ಇದೆ.