ಐಪಿಎಲ್ ನಿಜಕ್ಕೂ ಬೇಕಾ? ಟಿ-೨೦ ವಿಶ್ವಕಪ್ ಅಂಗಳದಲ್ಲಿ ಕ್ರಿಕಟ್
ಕಲಿಗಳ ನೀರಸ ವೈಫಲ್ಯ ಹುಟ್ಟುಹಾಕಿದ ಚರ್ಚೆ:
ಅಂತೂ ಭಾರತದ ವೀರಾಗ್ರಣಿಗಳು ಕ್ರಿಕೆಟ್ ಲೋಕದಲ್ಲಿ ಅಂಬೆಗಾಲಿಡುತ್ತಿರುವ ನಮೀಬಿಯಾ, ಸ್ಕಾಟ್ಲ್ಯಾಂಡ್ ಮತ್ತು ಆಫ್ಘಾನಿಸ್ತಾನದ ವಿರುದ್ಧ ಪರಮ ಪರಾಕ್ರಮ ಮೆರೆದು, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಚಾರಿತ್ರಿಕ ಸೋಲು ದಾಖಲಿಸಿ, ಸವ್ಯಸಾಚಿ ನ್ಯೂಜಿಲ್ಯಾಂಡಿನ ಕಿವಿಗಳ ವಿರುದ್ಧ ತಿಣಿಕಾಡಿ ಹೀನಾಯವಾಗಿ ಸೋತು ತಮ್ಮ ಟಿ-೨೦ ವಿಶ್ವಕಪ್ ಅಭಿಯಾನ ಮುಗಿಸಿದ್ದಾರೆ.
ಹೊಟ್ಟೆ ತುಂಬಿದವರಿಗೆ ಅವಕಾಶ ಕೊಡಬಾರದು ಹಸಿವಿದ್ದವನನ್ನು ಹುಡುಕಬೇಕು ಎನ್ನುವ ಮಾತು ಈಗ ಮತ್ತೆ ಮತ್ತೆ ಕೇಳಿಬರಲು ಕಾರಣ ಇವರ ಕಳಪೆ ಪ್ರದರ್ಶನ ಮಾತ್ರವಲ್ಲ, ಇವರ ದುರಹಂಕಾರ, ಆರ್ಥಿಕ ಅಹಂಕಾರ ಮತ್ತು ಅಸಡ್ಡೆ. ಇವರಿಗೆ ಐಪಿಎಲ್ ನಲ್ಲಿ ಭೂರಿ ಭೋಜನ, ಜಾಹಿರಾತುಗಳಲ್ಲೆ ತರಹೇವಾರಿ ವ್ಯಂಜನ. ಹೊಟ್ಟೆ ಬಿರಿಯಷ್ಟು ಉಂಡವನಿಗೆ ಕ್ಯಾಮೆ ಮಾಡಲು ಮನಸಾದ್ರೂ ಹೇಗೆ ಬರತ್ತೆ. ರಾಹುಲ್, ಹಿಟ್ ಮ್ಯಾನ್ ರೋಹಿತ್, ಕ್ರಿಕೆಟ್ ಗಾಡ್ ಉತ್ತರಾಧಿಕಾರಿ ವಿರಾಟ್ ಕೋಹ್ಲಿ, ಸೂರ್ಯಕುಮಾರ್ ಯಾದವ್, ಇಶನ್ ಕಿಶನ್, ಹಾರ್ದಿಕ್ ಪಾಂಡ್ಯ, ವೃಷಬ್ ಪಂಥ್, ಸರ್ ರವೀಂದ್ರ ಜಡೆಜಾ ಕೊನೆಗೆ ಕೇರಂಬೋರ್ಡ್ ಅಶ್ವಿನ್ ವರೆಗೆ ಭರ್ಜರಿ ಬ್ಯಾಟ್ಸ್ ಮನ್ ಗಳೇ. ಆದರೂ ಇವರ ಯೋಗ್ಯತೆಗೆ ಲೀಗ್ನ ಮೊದಲೆರಡು ಪಂದ್ಯಗಳಲ್ಲಿ ಒಂದು ಗೌರವ ಉಳಿಸುವ ಸ್ಕೋರ್ ಕಲೆಹಾಕಲು ಸಾಧ್ಯವಾಗಲಿಲ್ಲ. ಟೀಂ ಇಂಡಿಯಾ ವಿಶ್ವಕಪ್ ಅಭಿಯಾನ ಮುಗಿಯುತ್ತಿದ್ದ ಹಾಗೆ ಕಪಿಲ್ ದೇವ್, ಸುನಿಲ್ ಗವಾಸ್ಕರ್ ಮುಂತಾದವರು ತಂಡದ ಹೀನಾಯ ಪ್ರದರ್ಶನದ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಐಪಿಎಲ್ನಲ್ಲಿ ತೋರುವ ಜಿದ್ದನ್ನು ದೇಶಕ್ಕಾಗಿ ಪ್ರತಿಷ್ಟಿತ ಟೂರ್ನಿಯಲ್ಲಿ ತೋರದೇ ಇರುವುದಕ್ಕೆ ಕಾರಣವೇನು ಅನ್ನುವ ಬಗ್ಗೆ ಪ್ರಶ್ನಿಸುತ್ತಿದ್ದಾರೆ.
ಲೀಗ್ ಹಂತದ ಮೊದಲ ಎರಡೂ ಪಂದ್ಯಗಳಲ್ಲಿ ಭಾರತದ ಕಳಪೆ ಪ್ರದರ್ಶನಕ್ಕೆ ಅನೇಕ ಕಾರಣಗಳಿವೆ. ಐಪಿಎಲ್ ನಲ್ಲಿ ಆಡಿದ ಪಿಚ್ಗಳ ಸಂಪೂರ್ಣ ಲಾಭ ಪಡೆಯುವ ಎಲ್ಲಾ ಅವಕಾಶಗಳೂ ಭಾರತಕ್ಕಿತ್ತು. ಟೀಂ ಇಂಡಿಯಾ ಇದ್ದ ಗ್ರೂಪ್ನಲ್ಲಿ ನ್ಯೂಜಿಲ್ಯಾಂಡ್ ಹೊರತುಪಡಿಸಿದರೆ ಉಳಿದ ಯಾವ ತಂಡಗಳೂ ಬಲಾಢಯವಾಗಿರಲಿಲ್ಲ. ಅಸಲಿಗೆ ಇವರ ಐಪಿಎಲ್ ಅನುಭವದ ಮುಂದೆ ಪಾಕಿಸ್ತಾನವೂ ಬಲಿಷ್ಟ ತಂಡವೇನಲ್ಲ. ಆದರೆ ಪಾಕಿಸ್ತಾನ ತಂಡಕ್ಕೆ ಗೆಲುವಿನ ಹಸಿವಿತ್ತು, ಇವರಿಗೆ ಹೊಟ್ಟೆ ತುಂಬಿ ಅಜೀರ್ಣವಾಗಿತ್ತು. ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ಎರಡೂ ತಂಡಗಳು ಸಾಂಘಿಕ ಪ್ರದರ್ಶನ ನೀಡಿದ್ದರೇ, ಭಾರತೀಯರು ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲಾ ವಿಭಾಗಗಳಲ್ಲೂ ವೈಫಲ್ಯ ಕಂಡರು.
ಮಂಜು ಬೀಳುತ್ತಿತ್ತು, ಟಾಸ್ ಸೋತಿತು, ಮೊದಲು ಬ್ಯಾಟ್ ಮಾಡಿದ ತಂಡಕ್ಕೆ ಗೆಲುವಿನ ಅವಕಾಶ ಕಡಿಮೆ ಅನ್ನುವ ಮಾತುಗಳು ಇವರಿಗೆ ಅನ್ವಯವೇ ಆಗಬಾರದಿತ್ತು. ಯಾಕಂದರೆ ಮೊದಲು ಬ್ಯಾಟ್ ಮಾಡಿದ ಯಾವುದೇ ತಂಡ ೧೭೦ರ ಗಡಿ ದಾಟಿದ್ದರೇ ಎರಡನೇ ಇನ್ನಿಂಗ್ಸ್ ಆಡುವವರಿಗೆ ಖಂಡಿತಾ ಚೇಸ್ ಮಾಡಲು ಸಾಧ್ಯವಿರಲಿಲ್ಲ. ಮೊದಲ ಬ್ಯಾಟಿಂಗ್ ಪವರ್ಪ್ಲೇ ಒಳಗೆ ಬ್ಯಾಟ್ಸ್ಮನ್ಗಳ ಅಸಲಿ ಆಟ ಹೊರಹೊಮ್ಮಲೇ ಇಲ್ಲ; ಕಾನ್ಫಿಡೆನ್ಸ್ ಮೊದಲೇ ಇರಲಿಲ್ಲ. ಮೊದಲ ಆರು ಓವರ್ಗಳಲ್ಲಿ ರನ್ ಪೇರಿಸಲು ಬ್ಲೂ ಬಾಯ್ಸ್ ತಿಣಕಾಡಿಬಿಟ್ಟರು.
ಮೊದಲ ಪವರ್ ಪ್ಲೇ ಸಮಯದಲ್ಲಿ ಅಂತಿಮ ಡೆತ್ ಓವರ್ಗಳಲ್ಲಿ ಯಾವ ಫೀಲ್ಡರ್ ನನ್ನು ಎಲ್ಲಿ ನಿಲ್ಲಿಸಬೇಕು ಅನ್ನುವ ಕನಿಷ್ಟ ಕಾಮನ್ಸೆನ್ಸ್ ಸಹ ನಾಯಕನಿಗೆ ಇರಲಿಲ್ಲ. ಇನ್ನು ಇದರ ಜೊತೆ ಬೌಲಿಂಗ್ನಲ್ಲಿಯೂ ಪದೇ ಪದೇ ಪ್ರಯೋಗ ಮಾಡುವ ದುಸ್ಸಾಹಸ. ಯುನೈಟೆಡ್ ಅರಬ್ ಎಮಿರೆಟ್ಸ್ ಪಿಚ್ ಗಳಲ್ಲಿ ಅತ್ಯುತ್ತಮ ಟ್ರಾಕ್ ರೆಕಾರ್ಡ್ ಹೊಂದಿದ್ದ ರವಿಚಂದ್ರನ್ ಅಶ್ವಿನ್ರನ್ನು ಮೊದಲ ಮಹತ್ವದ ಪಂದ್ಯಗಳಿಗೆ ತಂಡದೊಳಗೆ ಸ್ಥಾನವೇ ಕೊಡಲಿಲ್ಲ. ಅದ್ಯಾರೋ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅನ್ನುವ ಅನನುಭವಿಯನ್ನು ತಂಡದೊಳಗಿಟ್ಟು ಮೆರೆಸಲಾಯಿತು.
ಬೌಲಿಂಗ್ ಮಾಡಲಾರ ಎಂದು ಗೊತ್ತಿದ್ದರೂ ಹಾರ್ದಿಕ್ ಪಾಂಡ್ಯಾನನ್ನು ತಂಡದೊಳಗೆ
ತುಂಬಿಸಿಕೊಳ್ಳಲಾಯಿತು. ಪರಿಣಾಮ ಆತ ಬ್ಯಾಟಿಂಗ್ನಲ್ಲಿಯೂ ಯಶಸ್ವಿಯಾಗಲಿಲ್ಲ.
ಐಪಿಎಲ್ನಲ್ಲಿ ಯಶಸ್ವಿಯಾಗಿದ್ದ ಶಾರ್ದೂಲ್ ಠಾಗೂರ್ಗೆ ಅವಕಾಶ ನಿರಾಕರಿಸಿದ್ದು ಮತ್ತೊಂದು ಮೂರ್ಖತನ.
ಬೌಲಿಂಗ್ ವಿಭಾಗದಲ್ಲಾಗಲೀ, ಕ್ಷೇತ್ರರಕ್ಷಣೆಯನ್ನು ನಿಯೋಜಿಸುವಲ್ಲಾಗಲೀ ಕೋಹ್ಲಿಯ ಯಾವ ಯೋಜನೆಗಳೂ ಫಲಕಾರಿಯಾಗಲಿಲ್ಲ. ಯಾಕಂದರೆ ಟೀಂ ಇಂಡಿಯಾ ಡ್ರಸ್ಸಿಂಗ್ ರೂಂನಲ್ಲಿ ಸೌಹಾರ್ಧ ಸಾಮರಸ್ಯದ ಒಗ್ಗಟ್ಟಿನ ವಾತಾವರಣವೇ ಇಲ್ಲ. ರೋಹಿತ್ ಶರ್ಮನನ್ನು ಕಂಡರೆ ಕೋಹ್ಲಿಗೆ ಆಗುವುದಿಲ್ಲ. ಕೋಹ್ಲಿ ಸರ್ವಾಧಿಕಾರಿ ನಿರ್ಧಾರದ ವಿರುದ್ಧ ಸಹ ಆಟಗಾರರಿಗೆ ಭಿನ್ನಾಭಿಪ್ರಾಯಗಳಿದ್ದವು. ಕಿವಿಯನ್ನರ ವಿರುದ್ಧದ ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್ ಆರ್ಡರ್ ಬದಲಾಯಿಸುವ ಪ್ರಯೋಗ ಯಾಕೆ ಬೇಕಿತ್ತು? ವಿಶ್ವಾಸವಿಲ್ಲದ ಇಶಾನ್ ಕಿಶನ್ ರೋಹಿತ್ ಶರ್ಮಾ ಜಾಗದಲ್ಲಿ ಇನ್ನಿಂಗ್ಸ್ ಆರಂಭಿಸಲು ಬಂದಿದ್ದೇ ದೊಡ್ಡ ಬ್ಲಂಡರ್. ದೊಡ್ಡ ಪ್ರತಿಷ್ಟಿತ ಟೂರ್ನಿಯಲ್ಲಿ ಈ ರೀತಿಯ ಪ್ರಯೋಗ ಮಾಡುವ ಮೂರ್ಖತನವನ್ನು ಯಾವ ನಾಯಕನೂ ಮಾಡುವುದಿಲ್ಲ; ಆದರೆ ಕೋಹ್ಲಿ ಮಾಡಿದ್ದ.
ಇದರ ಪರಿಣಾಮವೇ 9 ವರ್ಷಗಳ ನಂತರ, ತಂಡವು ಮೊದಲ ಬಾರಿಗೆ ಐಸಿಸಿ ಪಂದ್ಯಾವಳಿಯ ನಾಕೌಟ್ ಸುತ್ತುಗಳಿಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಕ್ಯಾಪ್ಟನ್ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್ ಅವರಂತಹ ಆಟಗಾರರು ಬಹುತೇಕ ಎಲ್ಲಾ ಪಂದ್ಯಗಳನ್ನು ಆಡಿದರು. ಈ ಅವಧಿಯಲ್ಲಿ ಆಯಾ ತಂಡಗಳಿಗೆ ಪಂದ್ಯಗಳು. ಐಪಿಎಲ್ ಪ್ರಾರಂಭವಾಗುವ ಒಂದು ವಾರದ ಮೊದಲು, ಕೊಹ್ಲಿ, ರೋಹಿತ್, ರಾಹುಲ್, ಬುಮ್ರಾ ಮತ್ತು ಶಮಿ ಅವರಂತಹ ಭಾರತೀಯ ಆಟಗಾರರು ಸುಮಾರು 3 ತಿಂಗಳ ಕಾಲ ಇಂಗ್ಲೆಂಡ್ನಲ್ಲಿ 5 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಈ ಸಮಯದಲ್ಲಿ, ಭಾರತೀಯ ಆಟಗಾರರು ಹಲವಾರು ದಿನಗಳ ಕಾಲ ಬಯೋ ಬಬಲ್ನಲ್ಲಿಯೇ ಇದ್ದರು. ಅಂದರೆ, ಭಾರತದ ಆಟಗಾರರು ನಿರಂತರವಾಗಿ ಬ್ಯುಸಿಯಾಗಿದ್ದರು.
ಟಿ-೨೦ ವಿಶ್ವಕಪ್ನಲ್ಲಿ ಪಾಲ್ಗೊಂಡಿದ್ದ ಬಹುತೇಕ ಭಾರತೀಯ ಆಟಗಾರರು ಇಂಗ್ಲೆಂಡ್
ಪ್ರವಾಸದಿಂದ ನೇರವಾಗಿ ಐಪಿಎಲ್ಗೆ ಆಗಮಿಸಿ ನಂತರ ವಿಶ್ವಕಪ್ಗೆ ಬಂದಿಳಿದಿದ್ದರು. ಸತತ ಪಂದ್ಯಗಳನ್ನು ಎದುರಿಸಿದ್ದ ದಣಿವು ಅವರಲ್ಲಿತ್ತು ಅನ್ನುವುದು ಸತ್ಯ. ಬುಮ್ರಾ ಈ ಬಗ್ಗೆ ಟೂರ್ನಿಯ ಆರಂಭದಲ್ಲೇ ವಿಶ್ರಾಂತಿ ಬೇಕಿತ್ತು ಅಂದಿದ್ದು ನಿಜ. ಈ ನಿಟ್ಟಿನಲ್ಲಿ ಬಿಸಿಸಿಐ ನಿರ್ಧಾರ ನಿಜಕ್ಕೂ ಅವಿವೇಕತನದ್ದು. ಮೆಂಟರ್ ಅನ್ನುವ ಒಂದು ಸ್ಥಾನ ಕಲ್ಪಿಸಿ ಧೋನಿಯನ್ನು ಯಾವ ಪುರುಷಾರ್ಥಕ್ಕೆ ಟೀಂ ಮ್ಯಾನೇಜ್ಮೆಂಟ್ ಒಳಗೆ ಬಿಡಲಾಯಿತು ಅನ್ನುವುದಕ್ಕೆ ಬಿಸಿಸಿಐ ನಲ್ಲಿ ಉತ್ತರವೇ ಇಲ್ಲ. ದುಡ್ಡಿನ ಹಿಂದೆ ಬಿಸಿಸಿಐ ಓಡುತ್ತಿರುವ ಪರಿಣಾಮವೇ ಈ ವಿಶ್ವಕಪ್ನಲ್ಲಿ ಹೀನಾಯ ಸೋಲು. ಇನ್ನಾದರೂ ಬೋರ್ಡ್ ಪ್ರತಿಷ್ಠಿತ ಪಂದ್ಯಗಳ ವಿಚಾರದಲ್ಲಿ ಅಂತಿಮ ಹನ್ನೊಂದರ ಪಟ್ಟಿ ಸಿದ್ಧಪಡಿಸುವ ನಿಟ್ಟಿನಲ್ಲಿ ಗಂಭೀರವಾಗಿ ಚಿಂತಿಸಬೇಕಿದೆ. ಮುಖ್ಯವಾಗಿ ಕ್ರಿಕೆಟ್ ಅನ್ನು ಧರ್ಮವೆಂದೇ ಭಾವಿಸುವ ಭಾರತೀಯ ಕ್ರಿಕೆಟ್ ಅಭಿಮಾನಿಗಳು ರೊಚ್ಚಿಗೆದ್ದಿದ್ದು ಐಪಿಎಲ್ ಬ್ಯಾನ್ ಮಾಡುವ ಕುರಿತು ಆಗ್ರಹಿಸುತ್ತಿದ್ದಾರೆ. ಆದರೆ ದುಡ್ಡಿನ ಹೊಳೆಯೇ ಹರಿವ ಐಪಿಎಲ್ ಅನ್ನು ಬೋರ್ಡ್ ಯಾಕೆ ಬದಿಗಿಡುತ್ತದೆ ಹೇಳಿ?
ಸದ್ಯ ಟೀಂ ಇಂಡಿಯಾಗೆ ಹಿಡಿದ ಗ್ರಹಣ ಬಿಟ್ಟಿದೆ. ನಾಯಕ ಸ್ಥಾನದಿಂದ ಹೆಡ್ ವೆಯ್ಟ್ ಕೋಹ್ಲಿ,
ಕೋಚ್ ಸ್ಥಾನದಿಂದ ಅಂಡೇಪಿರ್ಕಿ ರವಿಶಾಸ್ತ್ರಿ ಇಬ್ಬರೂ ತೊಲಗುತ್ತಿದ್ದಾರೆ. ಈಗಿನ ಬಿಸಿಸಿಐ ದೊರೆ ದಾದಾ ಸೌರವ್ ಗಂಗೂಲಿ ಹೆಡ್ ಕೋಚ್ ರಾಹುಲ್ ದ್ರಾವಿಡ್ ಇಡೀ ತಂಡವನ್ನೇ ರೀಶಫಲ್ ಮಾಡಬೇಕಿದೆ. ಯಾವನ್ಯಾವನು ಗಾಂಚಾಲಿ ಮಾಡ್ತಾನೋ, ಅವನ ಪಾಸ್ಟ್ ರೆಕಾರ್ಡ್ ಎಂತದ್ದೇ ಇರಲಿ ಮುಲಾಜಿಲ್ಲದೆ ಪ್ಲೇಯಿಂಗ್ ಇಲವೆನ್ ನಿಂದ ಕಿತ್ತು ಬಿಸಾಡಬೇಕಿದೆ. ಪ್ರತಿಭೆ ಇದ್ದವನಿಗೆ ಮಾತ್ರವೇ
ಸ್ಥಾನ ಅನ್ನುವ ಸಂದೇಶ ರವಾನಿಸಬೇಕಿದೆ. ಹಸಿವಿದ್ದ ಪ್ರತಿಭಾವಂತ ಗಲ್ಲಿ ಕ್ರಿಕೇಟರ್ ಸಾವಿರಾರು ಜನ ಪ್ರಾಮಾಣಿಕವಾಗಿ ಹುಡಕಿದರೆ ಖಂಡಿತಾ ಸಿಗುತ್ತಾರೆ. ಈಗಿನಿಂದದ ಶುರುಮಾಡಿದರೆ ಮುಂದಿನ ಐಸಿಸಿ 50 ಒವರ್ ವಿಶ್ವಕಪ್ ವೇಳೆಗೆ ಒಂದೊಳ್ಳೆ ನಿಜವಾದ ಪ್ರತಿಭಾವಂತರ ಡಿಪೆಂಡಬಲ್ ಆಟಗಾರರ ಗಟ್ಟಿ ಟೀಂ ಇಂಡಿಯಾ ಕಟ್ಟಬಹುದು.