ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರ ಪತ್ನಿ ಎಲಿಜಬೆತ್‌ಗೆ ಪಾಕಿಸ್ತಾನ ಏಜೆಂಟ್ ಸಂಪರ್ಕಗಳಿವೆ ಎಂದು ಮಾಡಿದ ಆರೋಪಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕಿಡಿ ಕಾರಿದ್ದಾರೆ.
ರಾಜಕೀಯಕ್ಕೆ ಹೆಂಡತಿ ಮತ್ತು ಮಕ್ಕಳನ್ನು ಎಳೆಯುವುದು ಅತ್ಯಂತ ಕೆಟ್ಟ ಬೆಳವಣಿಗೆ. ಇದನ್ನು ಯಾರೂ ಮಾಡಬಾರದು, ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ವೈಯಕ್ತಿಕ ವಿಚಾರಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಗೌರವ್ ಗೊಗೊಯ್ ಸಕಾರಾತ್ಮಕ ಹಾಗೂ ಪ್ರೀತಿಯ ರಾಜಕಾರಣ ಮಾಡುತ್ತಾರೆ ಎಂದು ಹೇಳಿದ ಅವರು, ಮುಖ್ಯಮಂತ್ರಿ ಅನಗತ್ಯ ಆರೋಪಗಳನ್ನು ಬಿಟ್ಟು ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಈ ಆರೋಪ–ಪ್ರತ್ಯಾರೋಪಗಳಿಂದ ಅಸ್ಸಾಂ ರಾಜಕೀಯ ಮತ್ತಷ್ಟು ತೀವ್ರಗೊಂಡಿದ್ದು, ವಿಚಾರವು ರಾಷ್ಟ್ರ ಮಟ್ಟದಲ್ಲೂ ಚರ್ಚೆಗೆ ಕಾರಣವಾಗಿದೆ.







