ಗುವಾಹಟಿ: ಅಸ್ಸಾಂನಲ್ಲಿ ಬದಲಾವಣೆಯ ಬಿರುಗಾಳಿ ಶುರುವಾಗಿದೆ. ರಾಜ್ಯವನ್ನು ಆಳುತ್ತಿರುವ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರ ಹಿಟ್ಲರ್ ಆಡಳಿತದಿಂದ ಮುಕ್ತಿ ಪಡೆಯಲು ಇಡೀ ಅಸ್ಸಾಂ ಜನತೆ ತುದಿಗಾಲಲ್ಲಿ ನಿಂತಿದೆ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಗುವಾಹಟಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮತ್ತು ಅಸ್ಸಾಂ ಸರ್ಕಾರದ ವಿರುದ್ಧ ಸಿಡಿಮಿಡಿಗೊಂಡ ಡಿಕೆ ಶಿವಕುಮಾರ್, ಅಸ್ಸಾಂನ ರಾಜಕೀಯ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಾಂಗ್ರೆಸ್ ಪರವಾದ ಅಲೆ ಸೃಷ್ಟಿಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿರುವ ಅಸ್ಸಾಮಿಗರಿಗೆ ಜೀವಭಯ ಕಾಡುತ್ತಿದೆ
ತಮ್ಮ ಭಾಷಣದುದ್ದಕ್ಕೂ ಅಸ್ಸಾಂ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಬಿಚ್ಚಿಟ್ಟ ಅವರು, ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಬಂದಿರುವ ಅಸಂಖ್ಯಾತ ಅಸ್ಸಾಮಿಗರ ಜೊತೆ ನಾನು ಕಳೆದ ಹದಿನೈದು ದಿನಗಳಿಂದ ನಿರಂತರ ಸಂಪರ್ಕದಲ್ಲಿದ್ದೇನೆ. ನನ್ನ ಅಳಿಯನ ಟೀ ಎಸ್ಟೇಟ್ ನಲ್ಲೂ ಅಸ್ಸಾಂ ಮೂಲದ ಕಾರ್ಮಿಕರಿದ್ದಾರೆ. ಅವರೆಲ್ಲರೂ ತಮ್ಮ ಕಣ್ಣೀರ ಕಥೆಗಳನ್ನು ನನ್ನ ಬಳಿ ತೋಡಿಕೊಂಡಿದ್ದಾರೆ. ಆದರೆ ಅಸ್ಸಾಂನಲ್ಲಿರುವ ತಮ್ಮ ಕುಟುಂಬದವರ ಜೀವಕ್ಕೆ ಎಲ್ಲಿ ಕುತ್ತು ಬರುತ್ತದೆಯೋ ಎಂಬ ಭಯದಿಂದ ತಮ್ಮ ಅಳಲನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಅವರು ನಡುಗುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಈ ಪರಿಯ ಭಯ ಹುಟ್ಟಿಸಿರುವುದು ಅಸ್ಸಾಂನಲ್ಲಿ ನಡೆಯುತ್ತಿರುವ ಹಿಟ್ಲರ್ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಮಂತ್ ಬಿಸ್ವಾ ಶರ್ಮಾ ಅವರನ್ನು ಯಾವ ನದಿಯಲ್ಲಿ ತೊಳೆದಿದ್ದೀರಿ
ಭ್ರಷ್ಟಾಚಾರದ ಆರೋಪ ಹೊತ್ತಿದ್ದ ನಾಯಕರನ್ನು ಬಿಜೆಪಿ ಹೇಗೆ ಪವಿತ್ರಗೊಳಿಸುತ್ತದೆ ಎಂಬುದಕ್ಕೆ ಹಿಮಂತ್ ಬಿಸ್ವಾ ಶರ್ಮಾ ಅತ್ಯುತ್ತಮ ಉದಾಹರಣೆ ಎಂದು ಡಿಕೆಶಿ ವ್ಯಂಗ್ಯವಾಡಿದರು. ಹತ್ತು ವರ್ಷಗಳ ಹಿಂದೆ ಇದೇ ಬಿಜೆಪಿಯ ನಾಯಕರು ಹಿಮಂತ್ ಅವರನ್ನು ಅಸ್ಸಾಂನ ಅತ್ಯಂತ ಭ್ರಷ್ಟ ರಾಜಕಾರಣಿ ಎಂದು ಕರೆದಿದ್ದರು. ಅವರ ಭ್ರಷ್ಟಾಚಾರದ ಕಥೆಗಳ ಬಗ್ಗೆ ಪುಸ್ತಕವನ್ನೇ ಬಿಡುಗಡೆ ಮಾಡಿದ್ದರು. ಆದರೆ ಇಂದು ಅದೇ ನಾಯಕ ಬಿಜೆಪಿಗೆ ಸೇರಿದ ಕೂಡಲೇ ಅಷ್ಟು ಸ್ವಚ್ಛವಾಗಿದ್ದು ಹೇಗೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಿಮಂತ್ ಅವರನ್ನು ಗಂಗಾ ನದಿಯಲ್ಲಿ ಮುಳುಗಿಸಿದರೋ ಅಥವಾ ಬ್ರಹ್ಮಪುತ್ರ ನದಿಯಲ್ಲಿ ತೊಳೆದು ನಿಷ್ಕಲ್ಮಶ ಮಾಡಿದರೋ ಎಂಬುದನ್ನು ದೇಶದ ಜನತೆಗೆ ಉತ್ತರಿಸಬೇಕು ಎಂದು ಸವಾಲು ಹಾಕಿದರು. ಕಳಂಕಿತ ನಾಯಕರು ಬಿಜೆಪಿಗೆ ಹೋದ ಕೂಡಲೇ ಪ್ರಾಮಾಣಿಕರಾಗುವ ಮ್ಯಾಜಿಕ್ ಬಗ್ಗೆ ಬಿಜೆಪಿ ನಾಯಕರು ಬಾಯಿ ಬಿಡಬೇಕು ಎಂದು ಒತ್ತಾಯಿಸಿದರು.
ಎಷ್ಟು ಬಾಂಗ್ಲಾ ವಲಸಿಗರನ್ನು ವಾಪಸ್ ಕಳಿಸಿದ್ದೀರಿ ಲೆಕ್ಕ ಕೊಡಿ
ಅಕ್ರಮ ಬಾಂಗ್ಲಾ ವಲಸಿಗರ ವಿಚಾರದಲ್ಲಿ ಸದಾ ಭಾವನಾತ್ಮಕ ರಾಜಕಾರಣ ಮಾಡುವ ಬಿಜೆಪಿ ನಾಯಕರಿಗೆ ನೇರ ಪ್ರಶ್ನೆ ಹಾಕಿದ ಡಿಕೆ ಶಿವಕುಮಾರ್, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬರೋಬ್ಬರಿ 44 ಸಾವಿರ ಅಕ್ರಮ ಬಾಂಗ್ಲಾ ವಲಸಿಗರನ್ನು ದೇಶದಿಂದ ವಾಪಸ್ ಕಳುಹಿಸಲಾಗಿತ್ತು. ಈಗ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಈವರೆಗೆ ಎಷ್ಟು ಅಕ್ರಮ ವಲಸಿಗರನ್ನು ಗಡಿಪಾರು ಮಾಡಿದೆ ಎಂಬ ಅಧಿಕೃತ ಅಂಕಿ ಅಂಶವನ್ನು ಬಹಿರಂಗಪಡಿಸಲಿ. ಕೇವಲ ಬಾಯಿಮಾತಿನಲ್ಲಿ ರಾಷ್ಟ್ರೀಯತೆ ಮಾತನಾಡುವ ಬಿಜೆಪಿಯ ಸಾಧನೆ ಈ ವಿಚಾರದಲ್ಲಿ ಶೂನ್ಯ ಎಂದರು.
ಕಾಂಗ್ರೆಸ್ ನಾಯಕರನ್ನು ಸೆಳೆಯುತ್ತಿರುವುದೇ ಬಿಜೆಪಿಯ ದೌರ್ಬಲ್ಯ
ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ದಕ್ಷ ಆಡಳಿತ ನೀಡಿದ್ದೇ ಆಗಿದ್ದರೆ, ತಮ್ಮ ಅಭಿವೃದ್ಧಿ ಕಾರ್ಯಗಳ ಮೇಲೆ ನಂಬಿಕೆ ಇದ್ದಿದ್ದರೆ ಬೇರೆ ಪಕ್ಷದ ನಾಯಕರ ಮನೆ ಬಾಗಿಲಿಗೆ ಹೋಗುವ ದರ್ದು ಏನಿತ್ತು ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸಂಸದರು ಮತ್ತು ನಾಯಕರಿಗೆ ಆಮಿಷಗಳೊಡ್ಡಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರುವುದು ಬಿಜೆಪಿಯ ಬಲವನ್ನಲ್ಲ, ಬದಲಾಗಿ ಅವರ ಸೋಲಿನ ಭೀತಿ ಮತ್ತು ದೌರ್ಬಲ್ಯವನ್ನು ಎತ್ತಿ ತೋರಿಸುತ್ತಿದೆ. ಯಾರ ವಿರುದ್ಧ ಚಾರ್ಜ್ ಶೀಟ್ ಹಾಕಿದ್ದರೋ ಅವರನ್ನೇ ಬೇಡಿಕೊಂಡು ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ನೀಡುತ್ತಿರುವುದು ಬಿಜೆಪಿಯ ಅಸಹಾಯಕತೆಗೆ ಸಾಕ್ಷಿ ಎಂದು ಲೇವಡಿ ಮಾಡಿದರು.
ಹಿಮಂತ್ ಬೆಳೆದಿದ್ದು ಕಾಂಗ್ರೆಸ್ ರಕ್ತದಲ್ಲಿ
ಮೂವತ್ತು ಕ್ಷೇತ್ರಗಳಲ್ಲಿ ಯಾರು ಗೆಲ್ಲಬೇಕು ಎಂದು ತಾವೇ ನಿರ್ಧರಿಸುವುದಾಗಿ ಹೇಳುವ ಮುಖ್ಯಮಂತ್ರಿಗಳ ಅಹಂಕಾರ ಶೀಘ್ರದಲ್ಲೇ ಮಣ್ಣುಪಾಲಾಗಲಿದೆ ಎಂದರು. ಹಿಮಂತ್ ಬಿಸ್ವಾ ಶರ್ಮಾ ಅವರು ರಾಜಕೀಯವಾಗಿ ಜನ್ಮ ತಾಳಿದ್ದೇ ಕಾಂಗ್ರೆಸ್ ಪಕ್ಷದಲ್ಲಿ. ಅವರ ಮೈಯಲ್ಲಿ ಹರಿಯುತ್ತಿರುವುದು ಕಾಂಗ್ರೆಸ್ ರಕ್ತ. ಗಾಂಧಿ ಕುಟುಂಬಕ್ಕೆ ನಿಷ್ಠರಾಗಿ ಬೆಳೆದ ಅವರು ಇಂದು ಅದೇ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಪ್ರಧಾನಿ ಹುದ್ದೆ ಒಲಿದು ಬಂದರೂ ದೇಶದ ಆರ್ಥಿಕ ಹಿತದೃಷ್ಟಿಯಿಂದ ಡಾ ಮನಮೋಹನ್ ಸಿಂಗ್ ಅವರಿಗೆ ಅಧಿಕಾರ ಬಿಟ್ಟುಕೊಟ್ಟ ತ್ಯಾಗಮಯಿ ಸೋನಿಯಾ ಗಾಂಧಿ. ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಮಹಾನ್ ಇತಿಹಾಸವನ್ನು ಪ್ರಶ್ನಿಸುವ ನೈತಿಕತೆ ಹಿಮಂತ್ ಅವರಿಗಿಲ್ಲ. ಸೋಲಿನ ಹತಾಶೆಯಿಂದ ಅವರು ತಮ್ಮ ಆಡಳಿತದ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು. ಸಮಾಜವನ್ನು ಒಗ್ಗೂಡಿಸುವ ಶಕ್ತಿ ಕೇವಲ ಕಾಂಗ್ರೆಸ್ ಪಕ್ಷಕ್ಕಿದ್ದು, ಮುಂಬರುವ ದಿನಗಳಲ್ಲಿ ಅಸ್ಸಾಂ ಜನತೆ ಕಾಂಗ್ರೆಸ್ ಕೈಹಿಡಿಯಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.







