JDS ಮುಖಂಡರೊಂದಿಗೆ ಕೆ.ಹೆಚ್ ಮುನಿಯಪ್ಪ – ಕೈ ಬಿಡೋದು ಪಕ್ಕಾನಾ..?
ಚಿಕ್ಕಬಳ್ಳಾಪುರ : ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಕೆ.ಹೆಚ್ ಮುನಿಯಪ್ಪ ಕಾಂಗ್ರೆಸ್ ಪಕ್ಷ ಬಿಡಲಿದ್ದಾರೆ ಎಂಬ ಗುಸು ಗುಸು ಮಾತಿಗೆ ಮತ್ತಷ್ಟು ಪುಷ್ಠಿ ಸಿಕ್ಕಿದೆ.
ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ಬೇಸರಗೊಂಡಿರುವ ಮುನಿಯಪ್ಪ, ಶೀಘ್ರದಲ್ಲಿಯೇ ಜೆಡಿಎಸ್ ಪಕ್ಷ ಸೇರಲಿದ್ದಾರೆ ಎಂದು ಕೋಲಾರದ ಗಲ್ಲಿಗಳಲ್ಲಿ ಕೇಳಿಬರುತ್ತಿದೆ.
ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಮುನಿಸಿಕೊಂಡಿರುವ ಮುನಿಯಪ್ಪ ದಳದತ್ತ ಮುಖ ಮಾಡಲು ಮುಂದಾಗಿದ್ದಾರಂತೆ. ಈ ಬಗ್ಗೆ ಈಗಾಗಲೇ ಜೆಡಿಎಸ್ ವರಿಷ್ಠರ ಜೊತೆ ಮುನಿಯಪ್ಪ ಮಾತುಕತೆ ನಡೆಸಿದ್ದಾರಂತೆ.

ಈ ನಡುವೆ ಶಿಡ್ಲಘಟ್ಟ ತಾಲೂಕಿನ ತಮ್ಮ ತವರೂರಾದ ಕೋಬದಹಳ್ಳಿ ಗ್ರಾಮದಲ್ಲಿ ಕೆ.ಹೆಚ್ ಮುನಿಯಪ್ಪ ಜೆಡಿಎಸ್ ಮುಖಂಡರ ಜೊತೆ ಸಮಾಲೋಚನೆ ನಡೆಸಿದ್ದಾರೆ.
ಬುಧವಾರ ಕೋಬದಹಳ್ಳಿ ಊರ ಜಾತ್ರೆ ನಡೆದಿದ್ದು, ಇದಕ್ಕೆ ಕೆ ಹೆಚ್ ಮುನಿಯಪ್ಪ, ಚಿಂತಾಮಣಿ ಜೆಡಿಎಸ್ ಶಾಸಕ ಜೆ ಕೆ ಕೃಷ್ಣಾರೆಡ್ಡಿ. ಹಿರಿಯ ಮುಖಂಡ ವೆಂಕಟಶಿವಾರೆಡ್ಡಿ ಸೇರಿದಂತೆ ಹಲವು ಜೆಡಿಎಸ್ ಮುಖಂಡರಿಗೆ ಆಹ್ವಾನ ನೀಡಿದ್ದಾರೆ. ಈ ವೇಳೆ ಸಚಿವ ಡಾ.ಕೆ.ಸುಧಾಕರ್ ಕೂಡ ಕಾಣಿಸಿಕೊಂಡಿದ್ದಾರೆ.
ಕಾಂಗ್ರೆಸ್ ನಾಯಕರನ್ನು ಕಡೆಗಣಿಸಿ ಕೆ ಹೆಚ್ ಮುನಿಯಪ್ಪ ಜೆಡಿಎಸ್ ನಾಯಕರೊಂದಿಗೆ ಕಾಣಿಸಿಕೊಂಡಿರುವುದು ಸಾಕಷ್ಟು ಪ್ರಶ್ನೆಗಳಿಗೆ ನಾಂದಿಯಾಡಿದೆ.
ಮಾಜಿ ಸಂಸದ ಕೆ.ಹೆಚ್ ಮುನಿಯಪ್ಪ ಜೆಡಿಎಸ್ ಪಕ್ಷಕ್ಕೆ ಸೇರುತ್ತಾರಾ ಎಂಬ ಪ್ರಶ್ನೆಗೆ ಮತ್ತಷ್ಟು ಪುಷ್ಠಿ ನೀಡಿದೆ.







