ಬೆಂಗಳೂರು: ಪಾರ್ಕಿಂಗ್ ವಿಚಾರಕ್ಕೆ ಜಗಳ ನಡೆದು, ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ.
ಅಂಗಡಿಯ ಮುಂದೆ ಕಾರು ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿತ್ತು. ಗಲಾಟೆ (Parking dispute) ಯಲ್ಲಿ ಯುವಕ ಕೊಲೆ (Murder) ಆಗಿದ್ದಾನೆ. ನಗರದ ಹೊರವಲಯದ ಸೊಂಡೆಕುಪ್ಪ ಗ್ರಾಪಂ ಬಳಿ ಈ ಘಟನೆ ನಡೆದಿದೆ.
ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ರೆಹಮಾನ್ (17) ಕೊಲೆಯಾಗಿರುವ ದುರ್ದೈವಿ. ಅದೇ ಗ್ರಾಮದ ರೇಣುಕಾ ಹಾಗೂ ಪರ್ಮಿ ಎಂಬವರು ರೆಹಮಾನ್ ಎದೆಗೆ ಚಾಕು ಇರಿದು ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕೊಲೆಯಾಗಿರುವ ಯುವಕ ಬೇಕರಿಗೆ ಕೇಕ್ ತರಲು ಹೋಗಿದ್ದ. ಈ ಸಂದರ್ಭದಲ್ಲಿ ಅಂಗಡಿ ಮುಂದೆ ಕಾರು ಪಾರ್ಕಿಂಗ್ ಮಾಡಿದ್ದು, ಇದನ್ನು ರೆಹಮಾನ್ ಪ್ರಶ್ನೆ ಮಾಡಿದ್ದಾನೆ. ಆಗ ಕಾರಿನಲ್ಲಿದ್ದವರು ಯುವಕನೊಂದಿಗೆ ಗಲಾಟೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಈ ಜಗಳ ಅಲ್ಲಿಗೆ ಮುಗಿದಿಲ್ಲ. ರಾತ್ರಿ ಮತ್ತೆ ಎರಡು ಗುಂಪುಗಳ ಮಧ್ಯೆ ಆರಂಭವಾಗಿದೆ. ಆ ಸಂದರ್ಭದಲ್ಲಿ ರೇಣುಕಾ ಹಾಗೂ ಪರ್ಮಿ ಎಂಬವರು ಕಾರಿನಲ್ಲಿದ್ದ ಚಾಕು ಹಾಗೂ ಪಿಸ್ತೂಲ್ ತೋರಿಸಿ ಬೆದರಿಸಿದ್ದಾರೆ. ನಂತರ ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗಿದೆ. ಘಟನೆಯ ನಂತರ ಯುವಕ ಸಾವನ್ನಪ್ಪಿದ್ದು, ಪೊಲೀಸರು, ರೇಣುಕಾನನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿಗಾಗಿ ಬಲೆ ಬೀಸಿದ್ದಾರೆ ಎನ್ನಲಾಗಿದೆ. ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







