ಇಂಜಮಮ್ ಆರೋಗ್ಯದಲ್ಲಿ ಚೇತರಿಕೆ – – ಗುಣಮುಖರಾಗುವಂತೆ ಸಚಿನ್ ಹಾರೈಕೆ
ಹೃದಯ ಸಂಬಂಧಿ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಮ್ ಉಲ್ ಹಕ್ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂಜಮಮ್ ಉಲ್ ಹಕ್ ಅವರು ಸೋಮವಾರ ಲಾಹೋರ್ ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಲಘು ಹೃದಯಾಘಾತಕ್ಕೊಳಾಗದ ಇಂಜಿ ಅವರಿಗೆ ಆಂಜಿಯೋಪ್ಲ್ಯಾಸ್ಟಿ ಸರ್ಜರಿ ನಡೆಸಲಾಗಿತ್ತು.
ಇದೀಗ ಆರೋಗ್ಯದಲ್ಲಿ ಚೇತರಿಸಿಕೊಂಡಿರುವ ಇಂಜಮಮ್ ಉಲ್ ಹಕ್ ಅವರು ಡಿಸ್ಚಾರ್ಜ್ ಆಗಿದ್ದಾರೆ. ಖ್ಯಾತ ವೈದ್ಯರಾದ ಪ್ರೊಫೆಸರ್ ಅಬ್ಬಾಸ್ ಕಾಜೀಮ್ ಅವರು ಇಂಜಿಗೆ ಚಿಕಿತ್ಸೆ ನೀಡಿದ್ದರು.
ಇಂಜಮಮ್ ಉಲ್ ಹಕ್ ಅವರು ಆರೋಗ್ಯದಲ್ಲಿ ಬೇಗನೇ ಚೇತರಿಸಿಕೊಳ್ಳುವಂತೆ ಅವರ ಅಭಿಮಾನಿಗಳು, ಸ್ನೇಹಿತರು ಹಾರೈಸಿದ್ದರು.
ಮಾಸ್ಟರ್ ಬ್ಲ್ಯಾಸ್ಟರ್ ಸಚಿನ್ ತೆಂಡುಲ್ಕರ್ ಕೂಡ ಟ್ವಿಟ್ ಮಾಡಿದ್ದಾರೆ. ನೀವು ಶೀಘ್ರವೇ ಗುಣಮುಖರಾಗಿ ಎಂದು ಹಾರೈಸುತ್ತೇನೆ. ಶಾಂತ ಸ್ವಭಾವವಾಗಿದ್ದರೂ ಸ್ಪರ್ಧಾತ್ಮಕವಾಗಿರುತ್ತಿದ್ದೀರಿ. ಮೈದಾನದಲ್ಲಿ ಹೋರಾಟ ನಡೆಸುತ್ತಿದ್ದೀರಿ. ಈ ಸ್ಥಿತಿಯಲ್ಲೂ ನೀವು ಧೈರ್ಯವಾಗಿ ಹೊರಬರುತ್ತೀರಿ ಎಂದು ನಾನು ಆಶಿಸುತ್ತೇನೆ. ಬೇಗ ಗುಣಮುಖರಾಗಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಸಚಿನ್ ತೆಂಡುಲ್ಕರ್ ಟ್ವಿಟ್ ಮಾಡಿದ್ದಾರೆ.
ಹಾಗೇ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹಮ್ಮದ್ ಅಜರುದ್ದೀನ್, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ಅವರು ಟ್ವಿಟ್ ಮೂಲಕ ಇಂಜಿ ಬೇಗನೇ ಗುಣಮುಖರಾಗಿ ಎಂದು ಹಾರೈಸಿದ್ದಾರೆ.