ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಒಂದೇ ದಿನದಲ್ಲಿ ಕಚ್ಚಾ ತೈಲದ ಬೆಲೆ ಸುಮಾರು 29% ಏರಿಕೆ ಕಂಡಿದ್ದು, ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.
ಮುರ್ಬಾನ್ ಕ್ರೂಡ್ ಆಯಿಲ್ ಬೆಲೆ ಬ್ಯಾರೆಲ್ಗೆ $120 ತಲುಪಿದರೆ, ವೆಸ್ಟ್ ಟೆಕ್ಸಾಸ್ ಇಂಟರ್ ಮಿಡಿಯೇಟ್ ದರವು $115 ಗೆ ಏರಿಕೆಯಾಗಿದೆ. ಇದೇ ವೇಳೆ ಬ್ರೆಂಟ್ ಕ್ರೂಡ್ ಬೆಲೆ $116 ಮಟ್ಟಕ್ಕೆ ತಲುಪಿದೆ.
ಈ ಮಟ್ಟದ ಏರಿಕೆ ಕೊನೆಯದಾಗಿ ರಷ್ಯಾ–ಉಕ್ರೇನ್ ಯುದ್ಧ ಆರಂಭವಾದ ಸಂದರ್ಭದಲ್ಲಿ, 2022ರಲ್ಲಿ ದಾಖಲಾಗಿತ್ತು. ಈಗ ಮತ್ತೆ ಅದೇ ರೀತಿಯ ಪರಿಸ್ಥಿತಿ ಪುನರಾವರ್ತನೆಯಾಗುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇರಾಕ್, ಕುವೈತ್ ಮತ್ತು ಯುಎಇ ರಾಷ್ಟ್ರಗಳಲ್ಲಿ ತೈಲ ಉತ್ಪಾದನೆ ಕುಸಿದಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣವೆಂದು ತಿಳಿಸಲಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ಬೆಲೆ ಏರಿಕೆಯಿಂದ ಹಲವು ದೇಶಗಳಲ್ಲಿ ಇಂಧನ ದರ ಹೆಚ್ಚಳ, ಹಣದುಬ್ಬರ ಮತ್ತು ಆರ್ಥಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.







