ಅಂತರ್ಜಾತಿ ವಿವಾಹವಾಗುವ ಜೋಡಿಗಳಿಗೆ ರಾಜ್ಯ ಸರ್ಕಾರದಿಂದ ಮಹತ್ವದ ನೆರವು ಸಿಗುವ ಸಾಧ್ಯತೆ ಹೆಚ್ಚಿದೆ. ಕುಟುಂಬಸ್ಥರಿಂದ ವಿರೋಧ, ಬಹಿಷ್ಕಾರ ಮತ್ತು ಕೆಲ ಸಂದರ್ಭಗಳಲ್ಲಿ ಹಿಂಸೆ ಅಥವಾ ಕೊಲೆಗಳ ಘಟನೆಗಳ ಹಿನ್ನೆಲೆ, ಸರ್ಕಾರ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ‘ಇವನಮ್ಮವ ಇವ ನಮ್ಮವ’ ವಿಧೇಯಕ ಮಂಡಿಸಲಾಗಿದ್ದು, ಜಾತಿ ಆಧಾರಿತ ಹಿಂಸೆ, ಕಿರುಕುಳ ಮತ್ತು ಭೇದಭಾವವನ್ನು ತಡೆಯುವ ಉದ್ದೇಶ ಹೊಂದಿದೆ. ಈ ವಿಧೇಯಕದ ಮೂಲಕ ಅಂತರ್ಜಾತಿ ವಿವಾಹಿತರ ಸುರಕ್ಷತೆ ಮತ್ತು ಗೌರವವನ್ನು ಖಚಿತಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಸಿಎಂ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಈ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಸಾಮಾಜಿಕ ಸಮಾನತೆ ಹಾಗೂ ಏಕತೆಯನ್ನು ಬಲಪಡಿಸುವ ಪ್ರಯತ್ನ ಮಾಡುತ್ತಿದೆ.
ಈ ವಿಧೇಯಕ ಕಾಯ್ದೆಯಾಗಿ ಜಾರಿಗೆ ಬಂದರೆ, ಅಂತರ್ಜಾತಿ ವಿವಾಹಗಳಿಗೆ ಹೆಚ್ಚಿನ ಮಾನ್ಯತೆ ಸಿಗುವುದರ ಜೊತೆಗೆ, ಇಂತಹ ಜೋಡಿಗಳ ರಕ್ಷಣೆಗೆ ಬಲವಾದ ಕಾನೂನು ಚೌಕಟ್ಟು ಸಿಗಲಿದೆ.







