ವಿಂಡ್ಹೋಕ್: ಕಾಡು ಪ್ರಾಣಿಗಳನ್ನು ಕೊಂದು ಅವುಗಳ ಮಾಂಸವನ್ನು ಜನರಿಗೆ ಹಂಚಲು ಸರ್ಕಾರವೇ ಸೂಚಿಸಿದೆ.
ಭಾರತದಲ್ಲಿ (India) ಕಾಡುಪ್ರಾಣಿಗಳನ್ನು ಕೊಲ್ಲಲು ನಿಷೇಧವಿದೆ. ಇದೇನಪ್ಪಾ ಅಂತೀ. ಹೌದು. ಇದು ಸತ್ಯ. ಆದರೆ, ಇದು ನಮ್ಮ ದೇಶದ ಸುದ್ದಿಯಲ್ಲ. ನಮೀಬಿಯಾದಲ್ಲಿ (Namibia) ಸರ್ಕಾರವೇ ಕಾಡುಪ್ರಾಣಿಗಳನ್ನು (Wild Animals) ಕೊಲ್ಲಲು ಆದೇಶಿಸಿರುವ ಸುದ್ದಿ.
ಬರದಿಂದ (Drought) ತತ್ತರಿಸಿರುವ ನಮೀಬಿಯಾ ಜನರಿಗೆ ಆಹಾರ ಒದಗಿಸುವ ನಿಟ್ಟಿನಲ್ಲಿ 83 ಆನೆಗಳು (Elephants) ಸೇರಿದಂತೆ 723 ಕಾಡು ಪ್ರಾಣಿಗಳನ್ನು ಕೊಲ್ಲುಲು ಅಲ್ಲಿನ ಸರ್ಕಾರವೇ ಯೋಜನೆ ರೂಪಿಸಿದೆ. ತೀವ್ರ ಬರಗಾಲದಿಂದ ಆಹಾರಕ್ಕಾಗಿ ಹೆಣಗಾಡುತ್ತಿರುವವರಿಗೆ ಮಾಂಸವನ್ನು ವಿತರಿಸುವುದಾಗಿ ಸರ್ಕಾರ ಹೇಳಿದೆ.
ಪ್ರಾಣಿಗಳ ಸಂಖ್ಯೆಯು ಲಭ್ಯವಿರುವ ಹುಲ್ಲುಗಾವಲು ಭೂಮಿ ಮತ್ತು ನೀರಿನ ಸಂಪನ್ಮೂಲಗಳನ್ನು ಮೀರಿದೆ. ಹೀಗಾಗಿ ಅಲ್ಲಿ ಜನವಸತಿ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳು ಮತ್ತು ಮಾನವರ ಸಂಘರ್ಷ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಸಂಘರ್ಷ ನಿಯಂತ್ರಿಸಲು ಗುರುತಿಸಲಾದ ಪ್ರದೇಶಗಳಿಂದ 83 ಆನೆಗಳನ್ನು ಕೊಲ್ಲಲಾಗುತ್ತದೆ ಮತ್ತು ಮಾಂಸವನ್ನು ಬರ ಪರಿಹಾರ ಕಾರ್ಯಕ್ರಮಕ್ಕೆ ಬಳಸಲಾಗುತ್ತದೆ ಎಂದು ನಮೀಬಿಯಾ ಪರಿಸರ ಸಚಿವಾಲಯ ಹೇಳಿದೆ.
ಇದರ ಭಾಗವಾಗಿ ಆನೆಗಳೊಂದಿಗೆ 30 ಹಿಪ್ಪೋಗಳು, 60 ಎಮ್ಮೆಗಳು, 50 ಇಂಪಾಲಾಗಳು, 100 ನೀಲಿ ಕಾಡುಕೋಣಗಳು, 300 ಜೀಬ್ರಾಗಳು ಮತ್ತು 100 ಎಲ್ಯಾಂಡ್‌ಗಳನ್ನು ಕೊಲ್ಲಲು ಯೋಜಿಸಿದೆ. ವೃತ್ತಿಪರ ಬೇಟೆಗಾರರು ಮತ್ತು ಸರ್ಕಾರದಿಂದ ಗುತ್ತಿಗೆ ಪಡೆದ ಕಂಪನಿಗಳು ಈಗಾಗಲೇ 157 ಪ್ರಾಣಿ ಬೇಟೆಯಾಡಿ 56,800 ಕೆಜಿ ಮಾಂಸವನ್ನು ಜನರಿಗೆ ವಿತರಿಸಲಾಗಿದೆ.
ಜಿಂಬಾಬ್ವೆ, ಜಾಂಬಿಯಾ, ಬೋಟ್ಸ್ವಾನಾ, ಅಂಗೋಲಾ ಮತ್ತು ನಮೀಬಿಯಾದಲ್ಲಿ ಅಂದಾಜು 2 ಲಕ್ಷ ಆನೆಗಳಿದ್ದು, ಇಲ್ಲಿ ಜಗತ್ತಿನಲ್ಲಿಯೇ ಹೆಚ್ಚು ಆನೆಗಳಿವೆ. ಇಲ್ಲಿ ಹಿಂದಿನ ವರ್ಷ ನೂರಾರು ಆನೆಗಳು ಬರಗಾಲದಿಂದಾಗಿ ಸಾವನ್ನಪ್ಪಿದ್ದವು.







