70ರ ಹರೆಯಕ್ಕೆ ಕಾಲಿಟ್ಟ ಸಹಜ ಅಭಿನಯ ಚತುರ ನಾಸಿರುದ್ದೀನ್ ಶಾ ಎಂಬ ಬಾಲಿವುಡ್ ನ ವಿಸ್ಮಯದ ಕುರಿತು ಒಂದಷ್ಟು
ಸಹಜ ನಟನೆಯೆಂದರೆ ಮೊದಲು ನೆನಪಾಗುವ ಹೆಸರುಗಳಲ್ಲಿ ಇವರದ್ದೂ ಒಂದು. ಭಾರತೀಯ ನಾಟಕರಂಗದಲ್ಲೂ ದೊಡ್ಡ ಹೆಸರು ಗಳಿಸಿದ ಬಹುಭಾಷಾ ಅಭಿನಯ ಚತುರ. ಭಾರತೀಯ ಚಿತ್ರರಂಗದ ಅದ್ವಿತೀಯ ಕಲಾವಿದನಿಗೆ ಇಂದು 70ರ ಜನ್ಮದಿನದ ಸಂಭ್ರಮ. ಬಾಲಿವುಡ್ ಅಂಗಳದಲ್ಲಿ ತನ್ನದೇ ಆದ ಹರಿತವಾದ ವ್ಯಕ್ತಿತ್ವ ಹೊಂದಿರುವ ವಿಭಿನ್ನ ಮ್ಯಾಮರಿಸಂನ ಈನಟ ಬೇರಾರು ಅಲ್ಲ, ಅವರೇ ನಾಸಿರುದ್ದೀನ್ ಶಾ..
ಈ ಹೆಸರು ಭಾರತದ ಸಿನಿಪ್ರೇಮಿಗಳಿಂದ ಸದಾ ಗೌರವ-ಅಭಿಮಾನ ಸೂಸುವಂತದ್ದು. ನಾಸೀರ್ ಅಭಿನಯದಲ್ಲಿ ಲೋಪ ಹುಡುಕಲು ಸಾಧ್ಯವೇ ಇಲ್ಲ ಅನ್ನೋದು ಸಿನಿ ಪಂಡಿತರ ಒಕ್ಕೊರಲಿನ ಅಭಿಪ್ರಾಯ. ಹತ್ತಾರು ತರಹೇವಾರಿ ಪಾತ್ರಗಳಲ್ಲಿ ಅದ್ಭುತ ಅಭಿನಯ ತೋರಿದ ಕುಶಲ ನಟ ನಾಸಿರುದ್ದೀನ್ ಅನ್ನೋದ್ರಲ್ಲಿ ಎರಡನೆಯ ಮಾತೇ ಇಲ್ಲ.
ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಸರ್ವಶ್ರೇಷ್ಟ ನಟ ಎಂದು ಗುರುತಿಸಿಕೊಂಡ ಕೆಲವೇ ನಟರಲ್ಲಿ ನಾಸಿರುದ್ದೀನ್ ಶಾ ಮೇಲ್ಪಂಕ್ತಿಯಲ್ಲಿದ್ದಾರೆ. ಯಾವುದೇ ರೀತಿಯ ಪಾತ್ರದಲ್ಲಾದ್ರೂ ಲೀಲಾಜಾಲವಾಗಿ ನಟಿಸುವ ಕಲೆ ನಾಸೀರ್ ಗೆ ಸಿದ್ಧಿಸಿದೆ. ಭಾರತೀಯ ರಂಗಭೂಮಿಯಲ್ಲೂ ನಾಸಿರುದ್ದೀನ್ ಶಾರದ್ದು ದೊಡ್ಡ ಹೆಸರು.
ನಾಸೀರುದ್ದೀನ್ ಶಾ ಎಂದ ಕೂಡ್ಲೇ ನೆನಪಾಗುವ ಪಾತ್ರಗಳು ಹತ್ತಾರು. ಎ ವೆಡ್ನಸ್ ಡೇಯ ಕಾಮನ್ ಮ್ಯಾನ್, ಸರ್ಫರೋಶ್ ಸಿನಿಮಾದ ಗಜಲ್ ಗಾಯಕ ಕಂ ಭಯೋತ್ಪಾದಕ, ಕ್ರಿಶ್ ಚಿತ್ರದ ಖಳನಟ ಡಾ ಸಿದ್ದಾಂತ್ ಆರ್ಯ, ಹೇರಾಮ್ ಚಿತ್ರದ ಗಾಂಧಿ, ಧರಂ ಸಂಕಟ್ ಮೇ ಚಿತ್ರದ ಸನ್ಯಾಸಿ, ರಾಜನೀತಿ ಚಿತ್ರದ ಹೋರಾಟಗಾರ, ತ್ರಿದೇವ್ ನ ಆ್ಯಂಗ್ರಿ ಯಂಗ್ ಹೀರೋ, ಚಮತ್ಕಾರ್ ಚಿತ್ರದಲ್ಲಿ ದೆವ್ವ, ಡರ್ಟಿ ಪಿಕ್ಚರ್ ನ ರಸಿಕ ಪೋಲಿ ನಾಯಕ.. ಹೀಗೆ ಮಾಡಿದ ಹತ್ತಾರು ತರಹೇವಾರಿ ಪಾತ್ರಗಳಲ್ಲಿ ನಾಸಿರುದ್ದೀನ್ ಶಾರದ್ದು ಅಭೂತಪೂರ್ವ ಅಭಿನಯ.
19ನೇ ಶತಮಾನದ ಆಫ್ಘನ್ ಸೇನಾನಿ ಜಾನ್ ಫಿಷನ್ ಖಾನ್ ವಂಶಸ್ಥ ನಾಸಿರುದ್ದೀನ್, ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ 20 ಜುಲೈ 1950ರಲ್ಲಿ ಜನಿಸಿದ್ರು. ಆಪ್ಘನ್ ಲೇಖಕ ಇಡ್ರೀಸ್ ಷಾ, ಪ್ರಖ್ಯಾತ ಪಾಕಿಸ್ತಾನಿ ನಟ ಸೈಯದ್ ಕಮಲ್ ಷಾ, ಕ್ರಿಕೆಟಿಗ ಓವೈಸ್ ಷಾ ನಾಸಿರುದ್ದೀನ್ ಶಾರ ಹತ್ತಿರದ ಸಂಬಂಧಿಕರು. ಆಜ್ಮಿರ್ ನ ಸೇಂಟ್ ಆನ್ಸೆಲ್ಮಸ್ ಹಾಗೂ ನೈನಿತಾಲ್ ನ ಸೇಂಟ್ ಜೋಸೆಫ್ ಕಾಲೇಜ್ ತಮ್ಮ ಶಾಲಾ ವಿದ್ಯಾಭ್ಯಾಸ ಮುಗಿಸಿದ ನಾಸೀರ್, ಅಲಿಗಢ್ ಮುಸ್ಲಿಂ ಯೂನಿವರ್ಸಿಟಿಯಿಂದ 1971ರಲ್ಲಿ ಕಲಾ ಪದವಿ ಪಡೆದುಕೊಂಡರು. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಅಭಿನಯ ಹಾಗೂ ನಿರ್ದೇಶನದ ತರಬೇತಿ ಪಡೆದರು.
150ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ನಾಸುರುದ್ದೀನ್ ಶಾ ಬಾಲಿವುಡ್ ಮಾತ್ರವಲ್ಲದೇ ಬೆಂಗಾಲಿ, ಗುಜರಾತಿ, ತೆಲುಗು, ಕನ್ನಡ, ತಮಿಳು, ಮಲೆಯಾಳಿ, ಮರಾಠಿ, ಕೊಂಕಣಿ, ಉರ್ದು, ಇಂಗ್ಲೀಷ್, ಫ್ರೆಂಚ್ ಹಾಗೂ ಜರ್ಮನ್ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 2006ರಲ್ಲಿ ನಾಸಿರುದ್ದೀನ್ ಶಾ ಯೂಂ ಹೋತಾ ತೋ ಕ್ಯೂಂ ಹೋತಾ ಅನ್ನುವ ಏಕೈಕ ಸಿನಿಮಾ ನಿರ್ದೇಶಿಸಿದ್ದಾರೆ. ಇಂಟೀರಿಯರ್ ಕೆಫೆ ನೈಟ್, ಪಿಂಜ್ರಾ, ಸ್ಕಿನ್ ಆಫ್ ಮಾರ್ಬಲ್ ಅನ್ನುವ ಕಿರು ಚಿತ್ರಗಳಲ್ಲಿ ನಾಸಿರ್ ಅಭಿನಯಿಸಿದ್ದಾರೆ.
1986ರಲ್ಲಿ ತೆರೆಕಂಡ ಬಹುತಾರಾಗಣದ ಚಲನಚಿತ್ರ ಕರ್ಮ ನಾಸಿರುದ್ದೀನ್ ಚಿತ್ರಬದುಕಿಗೆ ತಿರುವು ನೀಡಿದ ಸಿನಿಮಾ. ಬಾಲಿವುಡ್ ನ ದಿಗ್ಗಜ ದಿಲೀಪ್ ಕುಮಾರ್ ಗೆ ಸರಿಸಮನಾಗಿ ಅಭಿನಯಿಸಿ ಸೈ ಅನಿಸಿಕೊಂಡರು ನಾಸೀರುದ್ದೀನ್. ಬಹುತೇಕ ಬಹುತಾರಾಗಣದ ಚಿತ್ರಗಳೇ ನಾಸೀರ್ ವೃತ್ತಿ ಬದುಕಿನಲ್ಲಿ ಅತಿ ಹೆಚ್ಚು ಹೆಸರು ಹಾಗೂ ಕೀರ್ತಿ ಕೊಟ್ಟ ಸಿನಿಮಾಗಳು. ನಾಸಿರುದ್ದೀನ್ ನಟಿಸಿದ್ದ ಬಹುತಾರಾಗಣದ 1985ರಲ್ಲಿ ತೆರೆಕಂಡ ಗುಲಾಮಿ, 1989ರಲ್ಲಿ ಬಿಡುಗಡೆಯಾದ ತ್ರಿದೇವ್ ಹಾಗೂ 1992ರಲ್ಲಿ ಬಿಡುಗಡೆಯಾದ ವಿಶ್ವಾತ್ಮ ಚಿತ್ರಗಳು ಸಾಕಷ್ಟು ಸದ್ದು ಮಾಡಿದ್ದವು. ನಾಸೀರ್ ಅಭಿನಯದ 100ನೇ ಚಿತ್ರ ಮೊಹರಾದಲ್ಲಿ ಅವರದ್ದು ಖಳನಟನ ಪಾತ್ರ. ನಾಸಿರುದ್ದೀನ್ ವಿವಾದಾತ್ಮಕ ಪಾಕಿಸ್ತಾನಿ ಚಿತ್ರ ಖುದಾ ಕೇಲಿಯೇನಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ನೂರೈವತ್ತು ಚಿತ್ರಗಳಿಗೂ ಮೀರಿ ನಟಿಸಿದ ನಾಸಿರುದ್ದೀನ್ ಒಳಗಿನ ನಟನನ್ನು ಹುರಿಗೊಳಿಸಿದ್ದೇ ನಾಟಕರಂಗ. ಅವರೊಳಗಿನ ಸೃಜನಶೀಲ ನಟನನ್ನು ಬಹಿರಂಗಗೊಳಿಸಿದ್ದು ಕಿರುತೆರೆಯ ಟೆಲಿವಿಷನ್ ಸರಣಿಗಳು. ಆದ್ರೆ ನಾಸೀರ್ ಅಂದಾಗ ನೆನಪಾಗೋದು ಅದ್ವಿತೀಯ ಅಭಿನಯ ಚಾತುರ್ಯ ಮಾತ್ರ.
ನಾಸಿರುದ್ದೀನ್ ಅಭಿನಯದ ವಿಶೇಷತೆ ಅಂದ್ರೆ ಕಮರ್ಷಿಯಲ್ ಹಾಗೂ ಕಲಾತ್ಮಕ ಎರಡೂ ಬಗೆಯ ಚಿತ್ರಗಳಲ್ಲಿ ಅವರು ಯಶ ಕಂಡಿದ್ದಾರೆ. ಇಂಗ್ಲೀಷ್, ಫ್ರೆಂಚ್, ಜರ್ಮನ್ ಭಾಷೆಗಳ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ನಾಸೀರ್. ಪ್ರಖ್ಯಾತ ಹಾಲಿವುಡ್ ಕಾಮಿಕ್ ಚಿತ್ರ ‘ದಿ ಲೀಗ್ ಆಫ್ ಎಕ್ಟ್ರಾಆರ್ಡಿನೆರಿ ಜೆಂಟಲ್ಮನ್’ನಲ್ಲಿ ನಾಸೀರ್ರ ಕ್ಯಾಪ್ಟನ್ ನೆಮೊ ಪಾತ್ರ ಸಾಕಷ್ಟು ಜನಪ್ರಿಯಗೊಂಡಿತ್ತು.
ರಂಗಭೂಮಿಯಲ್ಲಿ ಸದಾ ಸಕ್ರಿಯರಾಗಿದ್ದ ನಾಸೀರ್ 70ರ ದಶಕದಲ್ಲೇ ಮಾಟ್ಲಿ ಪ್ರೊಡಕ್ಷನ್ಸ್ ಎನ್ನುವ ಹೆಸರಿನ ರಂಗತಂಡ ಕಟ್ಟಿದ್ದರು. ಡಿಡಿ ನ್ಯಾಷನಲ್ನಲ್ಲಿ ಪ್ರಸಾರವಾದ ಗುಲ್ಜಾರ್ ನಿರ್ದೇಶನದ ಹಾಗೂ ಮಿರ್ಜಾ ಗಾಲೀಬ್ ಜೀವನಾಧಾರಿತ ಟೆಲಿವಿಷನ್ ಸರಣಿ ಎಪೋನಿಮ್ಸ್, ನಾಸಿರುದ್ದೀನ್ ಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ಇದರ ಮುಂದುವರಿದ ಭಾಗವಾಗಿ ಶ್ಯಾಮ್ ಬೆನಗಲ್ ನಿರ್ದೇಶನದ ಹಾಗೂ ಜವಾಹರ್ ಲಾಲ್ ನೆಹರೂ ಪುಸ್ತಕ ದಿ ಡಿಸ್ಕವರೀಸ್ ಆಫ್ ಇಂಡಿಯಾ ಆಧಾರಿತ ಭಾರತ್ ಏಕ್ ಖೋಜ್ ಸಹ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿತು. ನಾಸೀರ್ ಅದರಲ್ಲಿ ಛತ್ರಪತಿ ಶಿವಾಜಿಯ ಪಾತ್ರದಲ್ಲಿ ಹಾಗೂ ಓಂಪುರಿ ಔರಂಗಜೇಬನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ನಾಸೀರುದ್ದೀನ್ ಷಾ ನವದೆಹಲಿ, ಮುಂಬಯಿ, ಬೆಂಗಳೂರು, ಲಾಹೋರ್ ಸೇರಿದಂತೆ ದೇಶಾದ್ಯಂತ ಬೀದಿ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಲಾವೆಂದರ್ ಕುಮಾರ್, ಇಸ್ಮತ್ ಚುಕ್ತಾಯಿ ಮತ್ತು ಸಾದತ್ ಹಸನ್ ಮಾಂಟೊ ರಚನೆಯ ನಾಟಕಗಳನ್ನು ನಾಸೀರ್ ನಿರ್ದೇಶಿಸಿದ್ದಾರೆ. ನಾಸೀರ್ ನಿರ್ದೇಶಿಸಿ, ನಟಿಸಿದ್ದ ಎರಡು ನಾಟಕಗಳು ಬಡೇಭಾಯ್ ಸಾಹೇಬ್ ಹಾಗೂ ಶತರಂಜ್ ಕಿ ಕಿಲಾಡಿ ಕರ್ನಾಟಕದ ಕೆಲವು ಪ್ರಮುಖ ನಗರಗಳಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಗಳಿಸಿವೆ.
ನಾಸೀರ್ ಎರಡು ಕಡೆ ಮಹಾತ್ಮ ಗಾಂಧಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು 1998ರಲ್ಲಿ ಪ್ರದರ್ಶನಗೊಂಡ ಮಹಾತ್ಮ Vs. ಗಾಂಧಿ ನಾಟಕದಲ್ಲಿ, ಇನ್ನೊಂದು ಕಮಲ್ ಹಸನ್ ನಿರ್ದೇಶನ ಹಾಗೂ ನಟನೆಯ ಹೇ ರಾಮ್ ಚಲನಚಿತ್ರದಲ್ಲಿ. ಪ್ರಸಿದ್ಧ ಮಕ್ಕಳ ಆಡಿಯೋಬುಕ್ ಸೀರಿಸ್ ಕರಾಡಿ ಟೇಲ್ಸ್ ನಲ್ಲಿ ನಾಸಿರುದ್ದೀನ್ ನಿರೂಪಕನಾಗಿ ಕಾಣಿಸಿಕೊಂಡರೆ, ಪಹೇಲಿ ಚಿತ್ರದಲ್ಲಿಯೂ ಅವರದ್ದು ನಿರೂಪಕನ ಪಾತ್ರ.
ನಾಸೀರ್, ತಮ್ಮ ಮೊದಲ ಪತ್ನಿ ಮರಣದ ನಂತರ ಬಾಲಿವುಡ್ ನಟಿ ರತ್ನ ಪಾಠಕ್ ರನ್ನು ಮದುವೆಯಾದರು. ನಾಸಿರುದ್ದೀನ್ ರ ಮೊದಲ ಪತ್ನಿಯ ಮಗಳು ಹೀಬಾ. ನಾಸೀರ್ ಹಾಗೂ ರತ್ನಾ ದಂಪತಿಗಳ ಇಬ್ಬರು ಪುತ್ರರು ಇಮಾದ್ ಶಾ ಮತ್ತು ವಿವಾನ್ ಶಾ. ನಾಸಿರುದ್ದೀನ್ ಪುತ್ರ ವಿವಾನ್ ಶಾ ಸಹ ಬಾಲಿವುಡ್ ಅಂಗಳದಲ್ಲಿ ಪುಟ್ಟ ಹೆಜ್ಜೆಯನ್ನಿಟ್ಟು ನಡೆಲಾರಂಭಿಸಿದ್ದಾರೆ. ಈಗಾಗಲೆ ಬಾಲಿವುಡ್ ಕಿಂಗ್ ಖಾನ್ ಶಾರುಕ್ ಜೊತೆ ಹ್ಯಾಪಿ ನ್ಯೂ ಇಯರ್ ನಲ್ಲಿ ಕಾಣಿಸಿಕೊಂಡಿದ್ದ ವಿವಾನ್, ಈಗ ಮಸ್ತಾನ್ ಅನ್ನುವ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕನಟನಾಗಿ ಅಭಿನಯಿಸುತ್ತಿದ್ದಾರೆ.
ನಾಸೀರ್ ಗೂ ವಿವಾದಗಳಿಗೂ ಎಲ್ಲಿಲ್ಲದ ನಂಟು. ಹೇಗೆ ಅವರಲ್ಲೊಬ್ಬ ಅತ್ಯದ್ಭುತ ನಟನಿದ್ದಾನೋ ಹಾಗೆಯೋ ಅವರಲ್ಲಿ ಒಬ್ಬ ಜಗಳಗಂಟನೂ ಇದ್ದಾನೆ. ಹತ್ತಾರು ಬಾರಿ ಕಾಂಟ್ರವರ್ಸಿಗೆ ಸಿಲುಕಿದ ನಾಸಿರುದ್ದೀನ್ ಕೆಲವು ಬಾರಿ ಬಹಿರಂಗವಾಗಿ ಕ್ಷಮಾಪಣೆಯನ್ನೂ ಕೇಳಿದ್ದರು.
ನಾಸಿರುದ್ದೀನ್ ಗೂ ಕರ್ನಾಟಕದ ರಂಗಭೂಮಿ ಹಾಗೂ ಚಿತ್ರರಂಗದ ಜೊತೆ ನಿಕಟ ಸಂಪರ್ಕ ಹೊಂದಿದ್ದರು. ಬಿವಿ ಕಾರಂತ್, ಶಂಕರ್ ನಾಗ್, ಗಿರೀಶ್ ಕಾಸರವಳ್ಳಿ, ಲಂಕೇಶ್, ಗಿರೀಶ್ ಕಾರ್ನಾಡ್, ಮುಂತಾದವರೊಂದಿಗೆ ಒಡನಾಟ ಹೊಂದಿದ್ದರು ನಾಸಿರುದ್ದೀನ್. 2015ರಲ್ಲಿ ಮೈಸೂರಿನ ರಂಗಾಯಣ ಆಯೋಜಿಸಿದ್ದ ಬಹುರೂಪಿ ಶೇಕ್ಸ್ಪಿಯರ್ ನಾಟಕೋತ್ಸವಕ್ಕೆ ನಾಸಿರುದ್ದೀನ್ ಶಾ ಚಾಲನೆ ನೀಡಿದ್ದರು. ಅಂದು ನಾಸಿರುದ್ದೀನ್ ರ ಉದ್ಘಾಟನಾ ಭಾಷಣ ಕೇಳಲು ಮೈಸೂರಿನ ರಂಗ ಆಸಕ್ತರು ಉತ್ಸುಕರಾಗಿ ಆಗಮಿಸಿದ್ದರು. ಮನೋರಂಜನಾ ಕ್ಷೇತ್ರದಲ್ಲಿ ಎಷ್ಟೇ ಆಧುನಿಕತೆ ಅಳವಡಿಕೆಯಾದ್ರೂ ರಂಗಭೂಮಿಗೆ ಅಳಿವಿಲ್ಲ. ಆದ್ರೆ ಈಗ ರಂಗಭೂಮಿ ಅಳಿವು ಉಳಿವಿನ ಬಗ್ಗೆ ದೊಡ್ಡ ಪ್ರಶ್ನೆ ಎದ್ದಿದೆ. ರಂಗಭೂಮಿ ಬಗ್ಗೆ ಜನರ ಕುತೂಹಲ ಎಂದಿನಂತೆಯೇ ಇದೆ. ಕೆಟ್ಟ ಧಾರವಾಹಿಯಿಂದ ಬೇಸತ್ತ ಜನ ಮತ್ತೆ ರಂಗಭೂಮಿಯತ್ತ ಆಕರ್ಷಿತರಾಗ್ತಿದ್ದಾರೆ ಎಂದು ಮಾತನಾಡಿದ್ದರು ನಾಸಿರುದ್ದೀನ್.
ಬಿ.ವಿ ಕಾರಂತ್ ಹಾಗೂ ಗಿರೀಶ್ ಕಾರ್ನಾರ್ಡ್ ನಿರ್ದೇಶಿಸಿದ್ದ 1977ರಲ್ಲಿ ತೆರೆಕಂಡಿದ್ದ ಎಸ್ಎಲ್ ಭೈರಪ್ಪರ ತಬ್ಬಲಿಯು ನೀನಾದೆ ಮಗನೆ ಚಿತ್ರದಲ್ಲಿ ನಾಸಿರುದ್ದೀನ್ ಶಾ ಅಭಿನಯಿಸಿದ್ದರು. ಆ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯೂ ಲಭಿಸಿತ್ತು. ಅದಾದ ನಂತರ 1990ರಲ್ಲಿ ತೆರೆಕಂಡ ಗಿರೀಶ್ ಕಾಸರವಳ್ಳಿ ನಿರ್ದೇಶನದ ಮನೆ ಚಿತ್ರದಲ್ಲಿ ನಾಸಿರುದ್ದೀನ್ ನಾಯಕ ನಟರಾಗಿ ಕಾಣಿಸಿಕೊಂಡಿದ್ದರು. ಬಳಿಕ ಹಿಂದಿಯಲ್ಲಿ ಇದೇ ಚಿತ್ರ ಏಕ್ ಘರ್ ಹೆಸರಿನಲ್ಲಿ ತೆರೆಕಂಡಿತ್ತು.
ನಾಸಿರುದ್ದೀನ್ ಗೆ 1987ರಲ್ಲಿ ಪದ್ಮಶ್ರೀ ಪ್ರಶಸ್ತಿ, 2000ನೇ ಇಸವಿಯಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಹಾಗೂ 2003ರಲ್ಲಿ ಪದ್ಮ ಭೂಷಣ ಪ್ರಶಸ್ತಿ ಲಭಿಸಿದೆ. ಸ್ಪರ್ಷ್, ಪಾರ್ ಹಾಗೂ ಇಕ್ಬಾಲ್ ಚಿತ್ರಗಳ ಮನೋಜ್ಞ ಅಭಿನಯಕ್ಕಾಗಿ ನಾಸಿರುದ್ದೀನ್ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡರೇ, ಆಕ್ರೋಶ್, ಚಕ್ರಾ ಹಾಗೂ ಮಾಸೂಮ್ ಚಿತ್ರಗಳ ಅಭಿನಯಕ್ಕಾಗಿ ಫಿಲಂಫೇರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಪಾರ್ ಚಿತ್ರದ ಅತ್ಯುತ್ತಮ ಅಭಿನಯಕ್ಕಾಗಿ ವೆನಿಸ್ ಅಂತರಾಷ್ಟ್ರೀಯ ಫಿಲಂ ಫೆಸ್ಟಿವಲ್ನಲ್ಲಿ ವೋಲ್ಪಿ ಕಪ್ ಗಳಿಸಿಕೊಂಡಿದ್ದಾರೆ. ಸರ್ಫರೋಶ್ ಚಿತ್ರದಲ್ಲಿ ಖಳನಟನ ಪಾತ್ರ ಉತ್ತಮ ನಟನೆಗೆ ಇಂಟರ್ನ್ಯಾಷನಲ್ ಇಂಡಿಯನ್ ಫಿಲಂ ಅಕಾಡೆಮಿ ಅವಾರ್ಡ್ ಪಡೆದುಕೊಂಡಿದ್ದಾರೆ. ನಾಸಿರುದ್ದೀನ್ ಶಾ, ಏಷಿಯನ್ ಅಕಾಡೆಮಿ ಆಫ್ ಫಿಲಂ ಎಂಡ್ ಟೆಲಿವಿಷನ್ನ ಆಜೀವ ಸದಸ್ಯರೂ ಹೌದು.
ನಾಸಿರುದ್ದೀನ್ ಶಾ ಸದಾ ಒಂದಿಲ್ಲೊಂದು ವಿವಾದಗಳಿಂದಾಗಿ ಸುದ್ದಿಯಾದವ್ರು. ಬಾಲಿವುಡ್ ನ ಖ್ಯಾತ ನಟರಾದ ಅನುಪಮ್ ಖೇರ್ ಮತ್ತು ನಾಸಿರುದ್ದೀನ್ ಶಾ ಅವರ ನಡುವೆ ಕೆಲಕಾಲ ಟ್ವಿಟ್ಟರ್ ವಾರ್ ನಡೆದಿತ್ತು. ಕಾಶ್ಮೀರ ಪಂಡಿತರ ಪರವಾಗಿ ಅನುಪಮ್ ಖೇರ್ ಪ್ರಚಾರ ಮಾಡುತ್ತಿರುವ ಹಿಂದಿನ ಉದ್ದೇಶವೇನು ಅಂತ ನಾಸಿರುದ್ದೀನ್ ಪ್ರಶ್ನಿಸಿದ್ದರು. ಕಾಶ್ಮೀರದಲ್ಲಿ ವಾಸವಿರದೆ ವ್ಯಕ್ತಿ ಕಾಶ್ಮೀರ ಪಂಡಿತರ ಪರವಾಗಿ ಹೋರಾಟ ಆರಂಭಿಸಿರೋದು ನೋಡಿದ್ರೆ ಅವರು ನಿರಾಶ್ರಿತರಾಗಿದ್ದಾರೆ ಎನಿಸುತ್ತದೆ ಅಂತ ಟ್ವಿಟ್ಟರ್ನಲ್ಲಿ ಅನುಪಮ್ ಖೇರ್ರನ್ನು ನಾಸಿರುದ್ದೀನ್ ಕೆಣಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅನುಪಮ್, ತಮಗೆ ನಾಸಿರುದ್ದೀನ್ ಶಾ ಬಗ್ಗೆ ಅಪಾರ ಗೌರವವಿದೆ. ತಮ್ಮ ಜನನ ಕಾಶ್ಮೀರದಲ್ಲಾಗಿದೆ, ಮೂಲತಃ ತಾವೊಬ್ಬ ಕಾಶ್ಮೀರ ಬ್ರಾಹ್ಮಣ ಎಂದು ಸ್ಪಷ್ಟಪಡಿಸಲೂ ಸಹ ತಾವು ಇಚ್ಛಿಸುವುದಿಲ್ಲ ಎಂದು ಅನುಪಮ್ ಖೇರ್ ಟ್ವಿಟ್ಟರ್ ಉತ್ತರಿಸಿದ್ದರು. ಅಂತಿಮವಾಗಿ ನಾಸಿರುದ್ದೀನ್ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಅಂದ್ರೆ, ಅನುಪಮ್ ಖೇರ್ ಸಹ ತಾವು ನಾಸಿರುದ್ದೀನ್ ಶಾ ಅವರನ್ನು ಸಂಪರ್ಕಿಸಿದ್ದು, ತಾವು ಆ ರೀತಿ ಹೇಳಿಯೇ ಇಲ್ಲ ಎಂದು ಹೇಳಿದ್ದಾರೆ ಎಂದಿದ್ದರು. ಆ ವಿವಾದ ಅಲ್ಲಿಗೆ ಮುಗಿದಿತ್ತು.
70ರ ದಶಕದಲ್ಲಿ ಹಿಂದೀ ಚಿತ್ರವನ್ನು ಅತ್ಯಂತ ಕಳಪೆ ಗುಣಮಟ್ಟಕ್ಕೆ ಕೊಂಡೊಯ್ದವರು ರಾಜೇಶ್ ಖನ್ನಾ ಎನ್ನುವ ಮೂಲಕ ನಾಸಿರುದ್ದೀನ್ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿ, 70ರ ದಶಕದ ಚಿತ್ರೋದ್ಯಮ ಅದೋಗತಿಗಿಳಿಯಲು ರಾಜೇಶ್ ಖನ್ನಾ ಕಾರಣ ಎಂದುಬಿಟ್ಟಿದ್ದರು. ಆಗ ರಾಜೇಶ್ ಖನ್ನಾ ಅಭಿಮಾನಿಗಳು ನಾಸೀರ್ ವಿರುದ್ಧ ಕಿಡಿಕಾರಿದ್ರೆ, ಖನ್ನಾ ಪುತ್ರಿ ಟ್ವಿಂಕಲ್ ಖನ್ನಾ ಸಹ ಟ್ವಿಟರ್ ನಲ್ಲಿ ಗರಂ ಆಗಿದ್ರು. ಬಳಿಕ ನಾಸಿರುದ್ದೀನ್ ಶಾ ಈ ವಿಚಾರದಲ್ಲಿ ಕ್ಷಮಾಪಣೆ ಸಹ ಕೋರಿದ್ದರು. ಕೆಲವು ವರ್ಷಗಳ ಹಿಂದೆ ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಪ್ರಶಸ್ತಿಗಳನ್ನು ವಾಪಾಸ್ ಮಾಡುವ ಚಳವಳಿ ಆರಂಭವಾದಾಗ, ನಾಸಿರುದ್ದೀನ್ ಶಾ ಮಾತ್ರ ತಾವು ಪ್ರಶಸ್ತಿಗಳನ್ನು ವಾಪಾಸು ಮಾಡುವುದಿಲ್ಲ ಯಾಕಂದರೆ ಅವು ತಮ್ಮ ದೃಷ್ಟಿಯಲ್ಲಿ ನಗಣ್ಯ ಎಂದು ಹೇಳುವ ಮೂಲಕ ಸುದ್ದಿಯಲ್ಲಿದ್ದರು.
ಇನ್ನೊಂದು ಸಂದರ್ಭದಲ್ಲಿ ಮುಸ್ಲಿಮನಾಗಿದ್ದಕ್ಕೇ ತನ್ನನ್ನು ಗುರಿಯಾಗಿಸಿಕೊಳ್ಳಲಾಗಿದೆ ಎನ್ನುವ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು ನಾಸಿರುದ್ದೀನ್ ಶಾ. ಪಾಕಿಸ್ತಾನದ ಮಾಜಿ ವಿದೇಶಾಂಗ ಕಾರ್ಯದರ್ಶಿ ಖುರ್ಷಿದ್ ಮಹಮೂದ ಕಸೂರಿ ಪುಸ್ತಕ ಬಿಡುಗಡೆಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ನಾಸಿರುದ್ದೀನ್ ಶಾ, ತಮ್ಮ ಹೆಸರು ನಾಸಿರುದ್ದೀನ್ ಶಾ, ತಾವೊಬ್ಬ ಮುಸ್ಲೀಂ ಅನ್ನುವ ಕಾರಣಕ್ಕೆ ತಮ್ಮನ್ನು ಟಾರ್ಗೆಟ್ ಮಾಡಲಾಗ್ತಿದೆ ಎಂದಿದ್ದರು. ಬಳಿಕ ತಮ್ಮ ಹೇಳಿಕೆಯನ್ನು ತಪ್ಪಾಗಿ ವರದಿ ಮಾಡಲಾಗಿದೆ ಎಂದು ಸ್ಪಷ್ಟೀಕರಣ ನೀಡಿದ್ದರು. ನಾನು ಭಾರತೀಯನೆಂದು ಹೆಮ್ಮೆಯಿಂದ ಹೇಳುತ್ತೇನೆ. ನನ್ನ ದೇಶಪ್ರೇಮವನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿಕೆ ನೀಡಿದ್ದರು. ಶಿವಸೇನೆ ಕಾರ್ಯಕರ್ತರು ಆ ಕಾರ್ಯಕ್ರಮವನ್ನು ಆಯೋಜಿಸಿದ್ದ ಎಲ್ ಕೆ ಆಡ್ವಾಣಿಯವರ ಆಪ್ತ ಸುಧೀಂದ್ರ ಕುಲಕರ್ಣಿ ಮುಖಕ್ಕೆ ಮಸಿ ಬಳಿದಿದ್ದರೇ, ನಾಸಿರುದ್ದೀನ್ ಶಾ ವಿರುದ್ಧವೂ ಕಿಡಿಕಾರಿದ್ದರು. ಇದು ಒಂದಷ್ಟು ಕಾಲ ಸಾಕಷ್ಟು ಸಂಚಲನ ಸೃಷ್ಟಿಸಿತ್ತು.
ನಾಸಿರುದ್ದೀನ್ ಕೇವಲ ಭಾರತದ ಚಿತ್ರೋದ್ಯಮವಷ್ಟೇ ಅಲ್ಲ ಜಗತ್ತಿನ ಚಿತ್ರರಂಗ ಗುರುತಿಸುವಂತ ಅಪ್ಪಟ ಪ್ರತಿಭಾವಂತ ನಟ. ರಂಗಭೂಮಿ ಹಾಗೂ ಸೃಜನಾತ್ಮಕ ಸಿನಿಮಾಗಳನ್ನು ಇಷ್ಟ ಪಡುವ ವರ್ಗದ ಎವರ್ ಗ್ರೀನ್ ಫೆವರೇಟ್ ನಟ ನಾಸಿರುದ್ದೀನ್ ಶಾ ಅಂದ್ರೆ ತಪ್ಪಲ್ಲ. 70ರ ವಸಂತಕ್ಕೆ ಕಾಲಿಟ್ಟ ಮೋಸ್ಟ್ ಎಕ್ಸಲೆಂಟ್ ಆ್ಯಕ್ಟರ್, ಲೀವಿಂಗ್ ಲೆಜೆಂಡ್ ನಾಸಿರುದ್ದೀನ್ ಶಾ ಗೆ ಒನ್ಸ್ ಏಗೈನ್, ಹ್ಯಾಪಿ ಹುಟ್ದಬ್ಬ.
–ವಿಭಾ(ವಿಶ್ವಾಸ್ ಭಾರದ್ವಾಜ್)