ರಿಯಾಲಿಟಿ ಶೋಗಳು ನೀಡುವ ಜನಪ್ರಿಯತೆ ಶಾಶ್ವತವಲ್ಲ, ಅದು ಕೇವಲ ನಾಲ್ಕು ದಿನದ ಹಬ್ಬ ಎನ್ನುವ ಮಾತು ಚಿತ್ರರಂಗದಲ್ಲಿ ಆಗಾಗ ಕೇಳಿಬರುತ್ತಲೇ ಇರುತ್ತದೆ. ಇದಕ್ಕೆ ತಾಜಾ ಉದಾಹರಣೆಯಾಗಿ ನಿಂತಿದ್ದಾರೆ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಕರುನಾಡಿನ ಮನೆಮಾತಾಗಿದ್ದ ಗಿಲ್ಲಿ ನಟ. ದೊಡ್ಮನೆಯ ಆಟ ಮುಗಿಸಿ, ವಿಜಯದ ಮಾಲೆ ಧರಿಸಿ ಹೊರಬಂದಾಗ ಸಿಕ್ಕ ಸ್ವಾಗತ ಕಂಡು, ಸ್ಯಾಂಡಲ್ ವುಡ್ ನಲ್ಲಿ ಇವರದ್ದೇ ಹವಾ ಎಂದು ಎಲ್ಲರೂ ಲೆಕ್ಕಾಚಾರ ಹಾಕಿದ್ದರು. ಆದರೆ ಈಗ ಆ ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾಗಿವೆ.
ಉತ್ಸವ, ಜಾತ್ರೆಗಳ ಭರಾಟೆಯಲ್ಲಿ ಕಳೆದುಹೋದ ಗಿಲ್ಲಿ
ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಗಿಲ್ಲಿಗೆ ಸಿಕ್ಕ ಪ್ರಚಾರ ಅಷ್ಟಿಷ್ಟಲ್ಲ. ಊರೂರುಗಳಲ್ಲಿ ಸನ್ಮಾನ, ಜಾತ್ರೆಗಳಲ್ಲಿ ಮುಖ್ಯ ಅತಿಥಿ, ಉತ್ಸವಗಳಲ್ಲಿ ಉದ್ಘಾಟನೆ ಎಂದು ಬಿಡುವಿಲ್ಲದಷ್ಟು ಬ್ಯುಸಿಯಾಗಿದ್ದರು. ಅವರ ಜನಪ್ರಿಯತೆಯನ್ನು ಬಳಸಿಕೊಳ್ಳಲು ನಿರ್ಮಾಪಕರು ಕೂಡ ಮುಗಿಬಿದ್ದರು. ಹಳೆಯ ಸಿನಿಮಾಗಳಿಗೆ ಜೀವ ತುಂಬಲು ಗಿಲ್ಲಿಯನ್ನೇ ಅಸ್ತ್ರವನ್ನಾಗಿ ಮಾಡಿಕೊಂಡರು. ತಾನು ಈ ಹಿಂದೆ ನಟಿಸಿ ಮೂಲೆಗುಂಪಾಗಿದ್ದ ಸಿನಿಮಾಗಳ ಪ್ರಮೋಷನ್ ಗಾಗಿ ಗಿಲ್ಲಿ ಹಗಲಿರುಳು ಶ್ರಮಿಸಿದ್ದರು. ಆದರೆ ಈ ಓಡಾಟ, ಅಬ್ಬರಗಳೆಲ್ಲವೂ ಕೇವಲ ವೇದಿಕೆಗಳಿಗೆ ಮಾತ್ರ ಸೀಮಿತವಾಯಿತು ಹೊರತು, ಥಿಯೇಟರ್ ಬಾಕ್ಸಾಫೀಸ್ ಗೆ ತಲುಪಲಿಲ್ಲ ಎನ್ನುವುದು ವಿಪರ್ಯಾಸ.
ಪ್ರೇಕ್ಷಕರು ಬರ್ಲಿಲ್ಲ, ಸಿನಿಮಾಗಳು ಗೆಲ್ದಿಲ್ಲ!
ಗಿಲ್ಲಿ ಬಿಗ್ ಬಾಸ್ ವಿನ್ನರ್ ಆದ ತಕ್ಷಣ ಅವರ ಹಳೆಯ ಸಿನಿಮಾಗಳು ಅದೃಷ್ಟ ಪರೀಕ್ಷೆಗೆ ಇಳಿದವು. ವಿನ್ನರ್ ಹಣೆಪಟ್ಟಿ ಸಿನಿಮಾಗಳಿಗೆ ಪ್ಲಸ್ ಪಾಯಿಂಟ್ ಆಗಲಿದೆ ಎಂದು ಚಿತ್ರತಂಡಗಳು ನಂಬಿದ್ದವು. ಆದರೆ ಫಲಿತಾಂಶ ಮಾತ್ರ ಶೂನ್ಯ. ಗಿಲ್ಲಿ ನಟಿಸಿದ ಸರ್ಕಾರಿ ಶಾಲೆ ಎಚ್.8 ಆಗಲಿ ಅಥವಾ ಹೆಸರಿನಲ್ಲೇ ಗೆಲುವು ಇಟ್ಟುಕೊಂಡಿದ್ದ ಸೂಪರ್ ಹಿಟ್ ಎಂಬ ಚಿತ್ರವಾಗಲಿ, ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಲೇ ಇಲ್ಲ. ಟಿವಿಯಲ್ಲಿ ಗಿಲ್ಲಿಯನ್ನು ನೋಡಿ ಕೇಕೆ ಹಾಕಿದ ಅಭಿಮಾನಿಗಳು, ದುಡ್ಡು ಕೊಟ್ಟು ಟಿಕೆಟ್ ಖರೀದಿಸಿ ಥಿಯೇಟರ್ ಗೆ ಬರಲು ಹಿಂದೇಟು ಹಾಕಿದರು. ಪರಿಣಾಮ, ಸಾಲು ಸಾಲು ಸಿನಿಮಾಗಳು ಫ್ಲಾಪ್ ಪಟ್ಟಿಗೆ ಸೇರ್ಪಡೆಯಾದವು.
ಪ್ರಥಮ್ ಹಾದಿಯಲ್ಲೇ ಸಾಗುತ್ತಿದೆಯಾ ಗಿಲ್ಲಿ ಕೆರಿಯರ್?
ಈಗ ಗಾಂಧಿನಗರದಲ್ಲಿ ಹೊಸದೊಂದು ಚರ್ಚೆ ಶುರುವಾಗಿದೆ. ಈ ಹಿಂದೆ ಬಿಗ್ ಬಾಸ್ ಗೆದ್ದಿದ್ದ ಒಳ್ಳೆ ಹುಡುಗ ಪ್ರಥಮ್ ಕೂಡ ಇದೇ ರೀತಿ ಭ್ರಮನಿರಸನಗೊಂಡಿದ್ದರು. ಬಿಗ್ ಬಾಸ್ ಫೇಮ್ ಇಟ್ಟುಕೊಂಡು ಸಾಲು ಸಾಲು ಸಿನಿಮಾ ಮಾಡಿದ ಪ್ರಥಮ್, ಅಂತಿಮವಾಗಿ ಬಿಗ್ ಬಾಸ್ ಬೇರೆ, ಬಿಗ್ ಸ್ಕ್ರೀನ್ ಬೇರೆ ಎಂದು ಅರಿತುಕೊಂಡು ಊರು ಸೇರಿದ್ದರು. ಈಗ ಗಿಲ್ಲಿ ಸರದಿ ಎನ್ನುವ ಮಾತುಗಳು ಕೇಳಿಬರುತ್ತಿವೆ. ಪ್ರಥಮ್ ಎದುರಿಸಿದ ಅದೇ ಸವಾಲು ಈಗ ಗಿಲ್ಲಿ ಎದುರು ಬಂದು ನಿಂತಿದೆ.
ಮುಂದೇನು? ಗೊಂದಲದಲ್ಲಿ ಚಾಂಪಿಯನ್!
ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ಗಿಲ್ಲಿ ಸದ್ಯಕ್ಕೆ ಬ್ರೇಕ್ ತೆಗೆದುಕೊಂಡಿದ್ದಾರೆ. ಸಿನಿಮಾಗಳ ಸೋಲು ಅವರನ್ನು ಆಳವಾದ ಚಿಂತೆಗೆ ದೂಡಿದೆ. ಮೂಲತಃ ನಿರ್ದೇಶಕನಾಗುವ ಕನಸು ಹೊತ್ತಿದ್ದ ಗಿಲ್ಲಿ, ನಟನೆಯ ವ್ಯಾಮೋಹ ಬಿಟ್ಟು ಡೈರೆಕ್ಷನ್ ಕ್ಯಾಪ್ ತೊಡುತ್ತಾರಾ? ಅಥವಾ ಛಲ ಬಿಡದೆ ನಟನಾಗಿಯೇ ಮುಂದುವರಿದು ಗೆದ್ದು ತೋರಿಸುತ್ತಾರಾ ಎಂಬುದು ಕುತೂಹಲ ಮೂಡಿಸಿದೆ. ಒಟ್ಟಿನಲ್ಲಿ ಬಿಗ್ ಬಾಸ್ ಪಟ್ಟ ತಂದುಕೊಟ್ಟ ಜನಪ್ರಿಯತೆ, ಸಿನಿಮಾದಲ್ಲಿ ಗೆಲ್ಲಲು ಸಾಲದು ಎಂಬ ಕಟು ಸತ್ಯ ಗಿಲ್ಲಿಗೆ ಈಗ ಅರ್ಥವಾದಂತಿದೆ. ಮುಂದಿನ ಅವರ ನಡೆ ಏನು ಎಂಬುದನ್ನು ಕಾದು ನೋಡಬೇಕಿದೆ.







