ಬೆಂಗಳೂರು: ರಾಜ್ಯದಲ್ಲಿ ಅಡುಗೆ ಅನಿಲ ಸಿಲಿಂಡರ್ ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸುವ ದಂಧೆಕೋರರ ವಿರುದ್ಧ ನಿರ್ದಾಕ್ಷಿಣ್ಯ ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿಲಿಂಡರ್ ಮತ್ತು ತೈಲ ಪೂರೈಕೆ ಹಾಗೂ ಕಾಳಸಂತೆ ವ್ಯವಹಾರದ ಕುರಿತು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು. ಕೆಲವರು ಪ್ರಸ್ತುತ ಪರಿಸ್ಥಿತಿಯ ದುರ್ಲಾಭ ಪಡೆದುಕೊಂಡು ಹೆಚ್ಚಿನ ಬೆಲೆಗೆ ಸಿಲಿಂಡರ್ ಮಾರಾಟ ಮಾಡುತ್ತಿರುವ ದೂರುಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಇದರಿಂದ ತೊಂದರೆಯಾಗಲು ಬಿಡುವುದಿಲ್ಲ ಎಂದರು. ಯಾವುದೇ ಕಾರಣಕ್ಕೂ ಗ್ಯಾಸ್ ಸಿಲಿಂಡರ್ ಕಾಳಸಂತೆ ಮಾರಾಟವನ್ನು ಸರ್ಕಾರ ಸಹಿಸುವುದಿಲ್ಲ. ಅಂತಹವರ ವಿರುದ್ಧ ಪೊಲೀಸ್ ಇಲಾಖೆ ಮುಖಾಂತರ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಗುಡುಗಿದರು.
ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳಿಂದಾಗಿ ಇಂಧನ ಹಾಗೂ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಆದರೆ, ಕೇವಲ ಯುದ್ಧದ ನೆಪವೊಡ್ಡಿ ರಾಜ್ಯಕ್ಕೆ ಬರಬೇಕಾದ ಪಾಲನ್ನು ತಡೆಯುವುದು ಸರಿಯಲ್ಲ. ಬೇರೆ ಎಲ್ಲಾ ರಾಜ್ಯಗಳಿಗೆ ಯಾವ ರೀತಿ ತೈಲ ಹಾಗೂ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆಯೋ, ಅದೇ ರೀತಿ ನಮ್ಮ ಕರ್ನಾಟಕಕ್ಕೂ ಸಮರ್ಪಕವಾಗಿ ಪೂರೈಕೆಯಾಗಬೇಕು ಎಂದು ಅವರು ಒತ್ತಾಯಿಸಿದರು.
ನಮಗೂ ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ಸಿಲಿಂಡರ್ ಅತ್ಯಂತ ಅವಶ್ಯಕವಾಗಿದೆ. ನಮ್ಮ ರಾಜ್ಯಕ್ಕೆ ಸಿಗಬೇಕಾದ ನ್ಯಾಯಯುತ ಪಾಲನ್ನು ನಮಗೆ ಕೊಡಲೇಬೇಕು ಅಲ್ವಾ ಎಂದು ಪ್ರಶ್ನಿಸಿದ ಅವರು, ರಾಜ್ಯದ ಜನತೆಯ ಹಿತದೃಷ್ಟಿಯಿಂದ ಪೂರೈಕೆಯಲ್ಲಿ ಯಾವುದೇ ತಾರತಮ್ಯ ಆಗಬಾರದು ಎಂದು ಆಗ್ರಹಿಸಿದರು.
ಒಂದೆಡೆ ರಾಜ್ಯಕ್ಕೆ ಅಗತ್ಯವಿರುವಷ್ಟು ಸಿಲಿಂಡರ್ ಮತ್ತು ತೈಲವನ್ನು ತಾರತಮ್ಯ ಮಾಡದೆ ಒದಗಿಸುವಂತೆ ಆಗ್ರಹಿಸಿರುವ ಗೃಹ ಸಚಿವರು, ಮತ್ತೊಂದೆಡೆ ರಾಜ್ಯದೊಳಗೆ ಲಭ್ಯವಿರುವ ಸಿಲಿಂಡರ್ ಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸುವ ಜಾಲವನ್ನು ಮಟ್ಟಹಾಕಲು ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಗೃಹ ಸಚಿವರ ಈ ಕಠಿಣ ಎಚ್ಚರಿಕೆ ಕಾಳಸಂತೆಕೋರರಿಗೆ ನಡುಕ ಹುಟ್ಟಿಸಿದ್ದು, ಜನಸಾಮಾನ್ಯರಿಗೆ ಕೊಂಚ ನಿರಾಳತೆ ತಂದಿದೆ.







