ಪಾಕಿಸ್ತಾನದ ನಾಯಕರು ಮತ್ತು ಅಧಿಕಾರಿಗಳ ಬಾಯಲ್ಲಿ ಭಾರತದ ಮೇಲಿನ ದ್ವೇಷ ಆಗಾಗ್ಗೆ ಹೊರಬೀಳುತ್ತಲೇ ಇರುತ್ತದೆ. ಇದೀಗ ಭಾರತದಲ್ಲಿ ಪಾಕಿಸ್ತಾನದ ಮಾಜಿ ಹೈಕಮಿಷನರ್ ಆಗಿ ಕಾರ್ಯನಿರ್ವಹಿಸಿದ್ದ ಅಬ್ದುಲ್ ಬಾಸಿತ್ ಅಚ್ಚರಿ ಹಾಗೂ ಉದ್ಧಟತನದ ಹೇಳಿಕೆಯೊಂದನ್ನು ನೀಡಿದ್ದಾರೆ. ಒಂದು ವೇಳೆ ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ಪಾಕಿಸ್ತಾನವು ತಕ್ಷಣವೇ ಭಾರತದ ಮೇಲೆ ಪ್ರತಿದಾಳಿ ನಡೆಸಲಿದೆ ಎಂದು ಅವರು ಹೇಳಿರುವುದು ತೀವ್ರ ಸಂಚಲನ ಮೂಡಿಸಿದೆ.
ಕಾಲ್ಪನಿಕ ಯುದ್ಧದ ಸನ್ನಿವೇಶವೊಂದರ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಬಾಸಿತ್, ಯಾವುದೇ ದೇಶ ಪಾಕಿಸ್ತಾನವನ್ನು ಗುರಿಯಾಗಿಸಿದರೂ ಅದರ ಕೋಪ ಭಾರತದ ಮೇಲೆ ತಿರುಗಲಿದೆ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಅಮೆರಿಕ ನಮ್ಮ ಮೇಲೆ ದಾಳಿ ಮಾಡಿದರೆ, ನಾವು ಮರುಯೋಚನೆ ಮಾಡದೆ ಭಾರತದ ಪ್ರಮುಖ ನಗರಗಳಾದ ಮುಂಬೈ ಮತ್ತು ನವದೆಹಲಿಯ ಮೇಲೆ ದಾಳಿ ಮಾಡಬೇಕಾಗುತ್ತದೆ. ನಾವು ಈ ವಿಚಾರದಲ್ಲಿ ಸುಮ್ಮನೆ ಕೂರುವುದಿಲ್ಲ, ಆ ನಂತರ ಏನಾಗುತ್ತದೆ ಎಂಬುದನ್ನು ಕಾದು ನೋಡೋಣ ಎಂದು ಎಚ್ಚರಿಕೆಯ ದಾಟಿಯಲ್ಲಿ ಹೇಳಿದ್ದಾರೆ.
ಇದೊಂದು ಅತ್ಯಂತ ಕೆಟ್ಟ ಸನ್ನಿವೇಶ ಎಂದು ಬಣ್ಣಿಸಿದ ಬಾಸಿತ್, ಪ್ರಸ್ತುತ ಇಂತಹ ಘಟನೆ ನಡೆಯುವುದು ಅಸಾಧ್ಯ ಎಂದು ಪದೇ ಪದೇ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ತಮ್ಮ ವಾದವನ್ನು ಮತ್ತೆ ಮುಂದುವರಿಸಿದ ಅವರು, ಯಾರಾದರೂ ನಮ್ಮನ್ನು ಕೆಟ್ಟ ದೃಷ್ಟಿಯಿಂದ ನೋಡಿದರೆ, ಪಾಕಿಸ್ತಾನಕ್ಕೆ ಭಾರತದ ಮೇಲೆ ಎಲ್ಲಿ ಬೇಕಾದರೂ ದಾಳಿ ಮಾಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ನಾವು ಹಾಗೆ ಆಗಬೇಕೆಂದು ಬಯಸುವುದಿಲ್ಲ ಮತ್ತು ಭಾರತವೂ ಇಂತಹ ಸನ್ನಿವೇಶವನ್ನು ಬಯಸುವುದಿಲ್ಲ ಎಂದು ಹೇಳುವ ಮೂಲಕ ತಮ್ಮ ಹತಾಶೆಯನ್ನು ಹೊರಹಾಕಿದ್ದಾರೆ. ಭಾರತದ ಪ್ರಮುಖ ಆರ್ಥಿಕ ಮತ್ತು ರಾಜಕೀಯ ನಗರಗಳ ಹೆಸರನ್ನು ನೇರವಾಗಿ ಉಲ್ಲೇಖಿಸಿರುವುದು ಈಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.
ಅಬ್ದುಲ್ ಬಾಸಿತ್ ಅವರಿಗೆ ಭಾರತದ ರಾಜಕೀಯ ಮತ್ತು ಭೌಗೋಳಿಕ ಪರಿಸ್ಥಿತಿಗಳ ಬಗ್ಗೆ ಅರಿವಿಲ್ಲ ಎಂದೇನಿಲ್ಲ. ಅವರು 2014 ರಿಂದ 2017 ರವರೆಗೆ ನವದೆಹಲಿಯಲ್ಲಿ ಪಾಕಿಸ್ತಾನದ ಉನ್ನತ ರಾಯಭಾರಿಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಈ ಅವಧಿಯಲ್ಲಿ ಉಭಯ ದೇಶಗಳ ನಡುವಿನ ಸಂಬಂಧ ಅತ್ಯಂತ ಸೂಕ್ಷ್ಮ ಹಾಗೂ ಸಂಕೀರ್ಣವಾಗಿತ್ತು. ಭಾರತದ ನಾಡಿಮಿಡಿತ ತಿಳಿದಿರುವ ಹಿರಿಯ ರಾಜತಾಂತ್ರಿಕ ಅಧಿಕಾರಿಯೊಬ್ಬರು ಅಮೆರಿಕದ ಕಾಲ್ಪನಿಕ ದಾಳಿಗೆ ಭಾರತವನ್ನು ಗುರಿಯಾಗಿಸುತ್ತೇವೆ ಎಂದು ಹೇಳಿರುವುದು ಪಾಕಿಸ್ತಾನದ ನಾಯಕರ ಮಾನಸಿಕತೆಯನ್ನು ಜಗಜ್ಜಾಹೀರು ಮಾಡಿದೆ.
ತಮ್ಮ ಮೇಲಿನ ಯಾವುದೇ ಅಂತರರಾಷ್ಟ್ರೀಯ ಒತ್ತಡ ಅಥವಾ ವಿದೇಶಿ ದಾಳಿಯ ಹತಾಶೆಯನ್ನು ಭಾರತದ ಮೇಲೆ ತೀರಿಸಿಕೊಳ್ಳುವ ಪಾಕಿಸ್ತಾನದ ವಿಲಕ್ಷಣ ಹುನ್ನಾರ ಈ ಹೇಳಿಕೆಯ ಮೂಲಕ ಬಹಿರಂಗವಾಗಿದೆ. ಒಂದು ದೇಶದ ಮೇಲಿನ ಸಿಟ್ಟಿಗೆ ಸಂಬಂಧವೇ ಇಲ್ಲದ ನೆರೆಯ ದೇಶದ ಮೇಲೆ ದಾಳಿ ಮಾಡುತ್ತೇವೆ ಎನ್ನುವ ಇವರ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.







