ಬಾಗಲಕೋಟೆ ಉಪಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ಬಿರುಸಿನ ಪ್ರಚಾರ ಕೈಗೊಂಡ ಯತ್ನಾಳ್, ಆಡಳಿತ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಕಟುವಾಗಿ ಟೀಕಿಸುವುದರ ಜೊತೆಗೆ ತಮ್ಮದೇ ಆದ ಹೊಸ ಘೋಷಣೆಗಳನ್ನು ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ನಾನು ಮುಖ್ಯಮಂತ್ರಿಯಾದರೆ ಮಹಿಳೆಯರಿಗೆ ತಿಂಗಳಿಗೆ ಮೂರು ಸಾವಿರ ರೂಪಾಯಿ ಹಾಗೂ ಪುರುಷರಿಗೆ ಎರಡು ಸಾವಿರ ರೂಪಾಯಿ ನೀಡುತ್ತೇನೆ ಎಂದು ಶಾಸಕ ಯತ್ನಾಳ್ ಭರ್ಜರಿ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳು ಕೇವಲ ಕಣ್ಣೊರೆಸುವ ತಂತ್ರವಾಗಿವೆ ಎಂದು ಜರೆದ ಅವರು, ಯುವಕರಿಗೆ ಉದ್ಯೋಗ ನೀಡುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕೇ ಹೊರತು, ಕೇವಲ ಎರಡು ಸಾವಿರ ರೂಪಾಯಿ ನೀಡುವುದರಿಂದ ಜನರ ಬದುಕು ಹಸನಾಗುವುದಿಲ್ಲ ಎಂದು ತಿರುಗೇಟು ನೀಡಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಆರ್ಥಿಕ ನಿರ್ವಹಣೆಯನ್ನು ಪ್ರಶ್ನಿಸಿದ ಯತ್ನಾಳ್, ಉಚಿತ ಯೋಜನೆಗಳ ಹೆಸರಿನಲ್ಲಿ ಸರ್ಕಾರ ಜನರ ಮೇಲೆ ವಿಪರೀತ ತೆರಿಗೆ ಹೊರೆಯನ್ನು ಹಾಕುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಜನಸಾಮಾನ್ಯರ ದಿನನಿತ್ಯದ ಬದುಕಿನ ಮೇಲೆ ತೆರಿಗೆಗಳು ಬೀರುತ್ತಿರುವ ಪರಿಣಾಮಗಳನ್ನು ವಿವರಿಸಿದ ಅವರು, ಮರಣೋತ್ತರ ಪ್ರಮಾಣಪತ್ರದ ಶುಲ್ಕವನ್ನು 25 ರೂಪಾಯಿಯಿಂದ ಬರೋಬ್ಬರಿ 100 ರೂಪಾಯಿಗೆ ಏರಿಕೆ ಮಾಡಲಾಗಿದೆ. ಅದೇ ರೀತಿ ಪ್ರತಿ ಯೂನಿಟ್ ವಿದ್ಯುತ್ ದರವನ್ನು 7 ರೂಪಾಯಿ 20 ಪೈಸೆಗೆ ಹೆಚ್ಚಿಸುವ ಮೂಲಕ ಜನರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಮಿತಿಮೀರಿದೆ ಎಂದು ಕಳವಳ ವ್ಯಕ್ತಪಡಿಸಿದ ಯತ್ನಾಳ್, ಪ್ರಸ್ತುತ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು ಮೂರು ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಆದರೆ, ಸರ್ಕಾರ ಈ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ನಿರುದ್ಯೋಗಿ ಯುವಜನತೆಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದ ಬಳಿ ಯಾವುದೇ ಸ್ಪಷ್ಟ ನೀತಿಗಳಿಲ್ಲ ಎಂದು ದೂರಿದರು.
ಇದೇ ವೇಳೆ ಹಿಂದೂ ಸಮಾಜದ ಐಕ್ಯತೆಯನ್ನು ಪ್ರಬಲವಾಗಿ ಪ್ರತಿಪಾದಿಸಿದ ಅವರು, ಸಮಾಜ ಒಗ್ಗಟ್ಟಿನಿಂದ ಇರಬೇಕಾದ ಅನಿವಾರ್ಯತೆಯನ್ನು ಒತ್ತಿ ಹೇಳಿದರು. ಮತದಾರರು ಯಾವುದೇ ಕ್ಷಣಿಕ ಆಮಿಷಗಳಿಗೆ ಬಲಿಯಾಗದೆ, ನಾಡಿನ ಭವಿಷ್ಯದ ದೃಷ್ಟಿಯಿಂದ ವಿವೇಚನೆಯಿಂದ ಮತ ಚಲಾಯಿಸಬೇಕು ಎಂದು ಕರೆ ನೀಡಿದರು. 2028ರ ವಿಧಾನಸಭಾ ಚುನಾವಣೆಯ ವೇಳೆಗೆ ರಾಜ್ಯದಲ್ಲಿ ಸಮಗ್ರ ಬದಲಾವಣೆ ತರಲು ಈ ಉಪಚುನಾವಣೆಯಲ್ಲಿ ವೀರಣ್ಣ ಚರಂತಿಮಠ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವಂತೆ ಯತ್ನಾಳ್ ಮತದಾರರಲ್ಲಿ ಕಳಕಳಿಯ ಮನವಿ ಮಾಡಿದರು.







