ಉತ್ತರ ಕನ್ನಡ: ತಂಬಾಕು ಕೊಡುತ್ತಿಲ್ಲ ಎಂದು ಕೈದಿಗಳು ಜೈಲಿನಲ್ಲಿ ರಾದ್ಧಾಂತ ಮಾಡಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ತಂಬಾಕು ಸೇರಿದಂತೆ ಹೊರಗಡೆಯ ವಸ್ತುಗಳು ಕೊಡುತ್ತಿಲ್ಲ ಎಂದು ಕೈದಿಗಳು ಗಲಾಟೆ ಮಾಡಿದ್ದಾರೆ. ಈ ವಿಷಯವಾಗಿ ಜೈಲರ್ ಮಹೇಶಗೌಡ್ ತರಾಟೆಗೆ ತೆಗೆದುಕೊಂಡಿದ್ದಕ್ಕೆ ರೊಚ್ಚಿಗೆದ್ದು ನಾಲ್ವರು ಕೈದಿಗಳ ಮಧ್ಯೆ ಮಾರಾಮಾರಿ ನಡೆದಿದೆ. ಆಗ ಓರ್ವ ಕೈದಿ ತಲೆಗೆ ಪೆಟ್ಟು ಬಿದ್ದಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಫರಾನ್ ಛಬ್ಬಿ ಹಾಗೂ ಮುಜಾಮಿಲ್ ಇಬ್ಬರಿಗೂ ಗಾಯಗಳಾಗಿದ್ದು, ಚಿಕಿತ್ಸೆಗೆ ದಾಖಲಿಸಲಾಗಿದೆ. ಹೀಗಾಗಿ ಕಾರಗೃಹಕ್ಕೆ ಎ.ಎಸ್ಪಿ ಜಯಕುಮಾರ, ಡಿ ಎಸ್ ಪಿ ಗಿರೀಷ್ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ ಮಾತನಾಡಿ, ತಂಬಾಕು ಉತ್ಪನ್ನಗಳನ್ನು ನಿಷೇಧ ಮಾಡಲಾಗಿದೆ. ಹೀಗಾಗಿ ನಮಗೆ ತಂಬಾಕು ಕೊಡಲೆಬೇಕೆಂದು ಕೈದಿಗಳು ಮಧ್ಯಾಹ್ನ 2 ಗಂಟೆಗೆ ಗಲಾಟೆ ಮಾಡಿದ್ದಾರೆ. ಕೊಡದಿದ್ದಕ್ಕೆ ತಲೆಯನ್ನು ಕಲ್ಲಿಗೆ ಹೊಡೆದುಕೊಂಡು ಗಾಯ ಮಾಡಿಕೊಂಡಿದ್ದಾರೆ. ಫರಾನ್ ಮತ್ತು ಮುಜಾಮಿಲ್ ಇಬ್ಬರ ತಲೆಗೆ ಗಾಯಗಳಾಗಿವೆ. ಆನಂತರ ಜೈಲರ್ ಮೇಲೆಯೇ ದೂರು ನೀಡಲು ಮುಂದಾಗಿದ್ದರು. ಸಿಸಿಟಿವಿ ಪರಿಶೀಲನೆ ನಡೆಸಿದಾಗ ಸತ್ಯ ಗೊತ್ತಾಗಿದೆ. ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆಂದು ಇಬ್ಬರ ಮೇಲೆ ಜೈಲರ್ ದೂರು ಕೊಟ್ಟಿದ್ದಾರೆ. ಇಬ್ಬರು ಕೈದಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.