ಐಪಿಎಲ್ 2020 – ಮನೆಯೊಂದು ಮೂರು ಬಾಗಿಲು ಆಯ್ತಾ ಧೋನಿಯ ಸಿಎಸ್ ಕೆ ಟೀಮ್ ?
ಇಂಡಿಯನ್ ಪ್ರೀಮಿಯರ್ ಲೀಗ್.. ಪ್ರತಿಷ್ಠಿತ ಟಿ-ಟ್ವೆಂಟಿ ದೇಸಿ ಟೂರ್ನಿ.
ದುಡ್ಡಿನ ಮಳೆ ಹರಿಯುತ್ತಿರುವ ಈ ಟೂರ್ನಿಯಲ್ಲಿ ಆಟದ ಜೊತೆ ಪಕ್ಕಾ ಮನರಂಜನೆಯೂ ಇದ್ದೇ ಇರುತ್ತೆ.
ಅಂದ ಹಾಗೇ ಐಪಿಎಲ್ ಅಂದ ತಕ್ಷಣ ಮೊದಲು ನೆನಪಾಗುವ ತಂಡ ಚೆನ್ನೈ ಸೂಪರ್ ಕಿಂಗ್ಸ್..
ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ನಲ್ಲಿ ಸ್ಥಿರ ಪ್ರದರ್ಶನ ನೀಡಿರುವ ತಂಡ.
ಕಳೆದ 12 ಆವೃತ್ತಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅದ್ಭುತ ಪ್ರದರ್ಶನವನ್ನೇ ನೀಡಿದೆ.
ಮೂರು ಬಾರಿ ಚಾಂಪಿಯನ್ ಹಾಗೂ ಐದು ಬಾರಿ ರನ್ನರ್ ಅಪ್ ಆಗಿರುವ ತಂಡ.
ಎರಡು ವರ್ಷ ನಿಷೇಧದಿಂದ ಟೂರ್ನಿಯಲ್ಲಿ ಆಡಿರಲಿಲ್ಲ.
ಅದನ್ನು ಬಿಟ್ರೆ ಚೆನ್ನೈ ಸೂಪರ್ ಕಿಂಗ್ಸ್ ಅದ್ಭುತವಾದ ಪ್ರದರ್ಶನವನ್ನೇ ನೀಡಿದೆ.
ಆದ್ರೆ 13ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿಲ್ಲ.
ಸಾಲು ಸಾಲು ಸೋಲುಗಳಿಂದ ಇದೀಗ ಟೂರ್ನಿಯಿಂದಲೇ ಬಹುತೇಕ ಹೊರಬಿದ್ದಿದೆ.
ಹಾಗಾದ್ರೆ ಚೆನ್ನೈ ಸೂಪರ್ ಕಿಂಗ್ಸ್ ಎಡವಿದ್ದು ಎಲ್ಲಿ ?
ಚೆನ್ನೈ ಸೂಪರ್ ಕಿಂಗ್ಸ್ 2020ರ ಐಪಿಎಲ್ ಟೂರ್ನಿಗೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿತ್ತು.
ಆದ್ರೆ ಆರಂಭದಲ್ಲೇ ತಂಡದಲ್ಲಿ ಬಿರುಕು ಮೂಡಿತ್ತು. ತಂಡದ ಸ್ಟಾರ್ ಆಟಗಾರ ಸುರೇಶ್ ರೈನಾ ಟೂರ್ನಿ ಆರಂಭಕ್ಕೆ ಮುನ್ನವೇ ತಂಡದಿಂದ ಹೊರನಡೆದಿದ್ದರು.
ರೈನಾ ತಂಡದಿಂದ ಹೊರಬಿದ್ದಿರುವುದು ತಂಡಕ್ಕೆ ಮೊದಲ ಆಘಾತವಾಗಿತ್ತು.
ಈ ನಡುವೆ ಸ್ಟಾರ್ ಬೌಲರ್ ಹರ್ಭಜನ್ ಸಿಂಗ್ ಕೂಡ ಟೂರ್ನಿಯಲ್ಲಿ ಆಡುವುದಿಲ್ಲ ಎಂದು ಹೇಳಿದ್ರು.
ಹೀಗೆ ಆರಂಭದಲ್ಲೇ ಆಘಾತ ಅನುಭವಿಸಿದ್ದ ಸಿಎಸ್ ಕೆ ತಂಡಕ್ಕೆ ಮತ್ತೆ ಕಾಡಿದ್ದು ಕೊರೋನಾ ಸೋಂಕು.
ರೈನಾ ಮತ್ತು ಭಜ್ಜಿ ಅನುಪಸ್ಥಿತಿಯ ಮಧ್ಯೆ ಸಿಎಸ್‍ಕೆ ತಂಡದ ಇಬ್ಬರು ಆಟಗಾರರು ಸೇರಿ ಒಟ್ಟು 13 ಮಂದಿಗೆ ಕೊರೋನಾ ಸೋಂಕು ಆವರಿಸಿಕೊಂಡಿತ್ತು.
ಹೀಗಾಗಿ ತಂಡಕ್ಕೆ ಸರಿಯಾದ ಅಭ್ಯಾಸ ಸಿಗಲಿಲ್ಲ. ಆಟಗಾರರು ಆತಂಕ, ಒತ್ತಡಕ್ಕೆ ಸಿಲುಕಿದ್ರು.
ಉದ್ಘಾಟನಾ ಪಂದ್ಯದಲ್ಲಿ ಗೆಲುವು ದಾಖಲಿಸಿದ್ರೂ ಅದೇ ಗೆಲುವಿನ ಲಯವನ್ನು ಮುಂದುವರಿಸಿಕೊಂಡು ಹೋಗಲು ಸಿಎಸ್ ಕೆ ತಂಡಕ್ಕೆ ಸಾಧ್ಯವಾಗಲಿಲ್ಲ.
ಇನ್ನು ಹಿರಿಯ ಆಟಗಾರರಿಗೆ ಮಣೆ ಹಾಕಿರುವ ಸಿಎಸ್‍ಕೆ ಮ್ಯಾನೇಜ್ ಮೆಂಟ್ ಕಿರಿಯ ಆಟಗಾರರನ್ನು ಕಡೆಗಣಿಸಿತ್ತು.
ಶೇನ್ ವಾಟ್ಸನ್, ಡ್ವೇನ್ ಬ್ರೇವೋ, ಕೇದಾರ್ ಜಾಧವ್, ಅಂಬಟಿ ರಾಯುಡು, ಡು ಪ್ಲೇಸಸ್ ನಂತಹ
ಹಿರಿಯ ಆಟಗಾರರನ್ನು ಸಿಎಸ್‍ಕೆ ತಂಡ ಹೆಚ್ಚು ಅವಲಂಬಿತವಾಗಿತ್ತು.
ಏತನ್ಮಧ್ಯೆ ಮಹೇಂದ್ರ ಸಿಂಗ್ ಧೋನಿಯವರ ಫಾರ್ಮ್ ಕೂಡ ಕೈಕೊಟ್ಟಿತ್ತು.
ಧೋನಿಯ ಲೆಕ್ಕಚಾರದ ಆಟಕ್ಕೆ ಸಿಎಸ್‍ಕೆ ಆಟಗಾರರು ಸರಿಯಾದ ಸಾಥ್ ನೀಡಲಿಲ್ಲ.
ಮತ್ತೊಂದೆಡೆ ಸಿಎಸ್ ಕೆ ತಂಡ ಯುವ ದೇಸಿ ಆಟಗಾರರ ಬಗ್ಗೆ ಹೆಚ್ಚು ನಂಬಿಕೆಯನ್ನೂ ಇಟ್ಟುಕೊಂಡಿರಲಿಲ್ಲ.
ಸ್ಫೋಟಕ ಬ್ಯಾಟ್ಸ್ ಮೆನ್ ಗಳ ಕೊರತೆ ಎದ್ದು ಕಾಣುತ್ತಿತ್ತು.
ಅಷ್ಟೇ ಅಲ್ಲ, ಧೋನಿ ಕೂಡ ಯುವ ಆಟಗಾರರ ಬಗ್ಗೆ ಹೆಚ್ಚಿನ ಒಲವು ತೋರಿಸಲಿಲ್ಲ.
ಕೇವಲ ಹಿರಿಯ ಆಟಗಾರರ ಮೇಲೆ ನಂಬಿಕೆ ಇಟ್ಟು ಕೊಂಡಿದ್ದರು. ಹೀಗಾಗಿ ಧೋನಿಯ ಗೇಮ್ ಪ್ಲಾನ್ ಗಳು ಎಲ್ಲವೂ ಉಲ್ಟಾಪಲ್ಟಾವಾದವು.
ಇದೀಗ ಧೋನಿ ತಂಡದ ಪ್ರದರ್ಶನ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಯುವ ಆಟಗಾರರ ಮೇಲೆ ಕಿಡಿ ಕಾರಿದ್ದಾರೆ.
ಆದ್ರೆ ಧೋನಿ ಮಾಡಿರುವ ತಪ್ಪುಗಳನ್ನು ಯಾವುದು ಲೆಕ್ಕಕ್ಕೆ ಬರುವುದಿಲ್ಲ.
ಸಿಎಸ್‍ಕೆ ತಂಡದ ಪ್ರತಿಯೊಂದು ನಿರ್ಧಾರಗಳು ಧೋನಿಯ ಅಣತಿಯಂತೆ ನಡೆಯುತ್ತದೆ.
ಆಟಗಾರರ ಬಿಡ್ಡಿಂಗ್, ಖರೀದಿ ಎಲ್ಲವೂ ಧೋನಿ ತೀರ್ಮಾನದಂತೆ ನಡೆಯುತ್ತದೆ ಎಂಬುದು ಗೊತ್ತಿಲ್ಲದ ವಿಚಾರವಲ್ಲ.
ಆದ್ರೆ ಧೋನಿ ಯುವ ಆಟಗಾರರಿಗೆ ಅವಕಾಶ ನೀಡುವುದನ್ನು ಮರೆತೆ ಬಿಟ್ಟಿದ್ದಾರೆ.
ಯುವ ಆಟಗಾರರು ಲೆಕ್ಕಕ್ಕೆ ಇಲ್ಲ ಎಂಬ ಅವರ ಧೋರಣೆಯೇ ಸಿಎಸ್‍ಕೆ ತಂಡಕ್ಕೆ ಮುಳುವುವಾಗಿಬಿಟ್ಟಿದೆ.
ಇನ್ನು ಸುರೇಶ್ ರೈನಾ ವಿಚಾರದಲ್ಲಿ ಸಿಎಸ್ ಕೆ ಬಾಸ್ ಎನ್. ಶ್ರೀನಿವಾಸನ್ ಟೀಕೆ ಮಾಡಿದ್ದರು.
ಇದು ಕೂಡ ಧೋನಿ ಮತ್ತು ತಂಡದ ಮೇಲೆ ಗಾಢವಾದ ಪರಿಣಾಮ ಬೀರಿದೆ.
ಅಷ್ಟೇ ಅಲ್ಲ, ಸಿಎಸ್ ಕೆ ಆಟಗಾರರು ಈ ಹಿಂದಿನ ಐಪಿಎಲ್ ಗೆ ಹೋಲಿಕೆ ಮಾಡಿದ್ರೆ ಈ ಬಾರಿ ತುಂಬಾನೇ ಮಂಕಾಗಿದ್ರು.
ಧೋನಿ ಸೇರಿದಂತೆ ಆಟಗಾರರು ಕೂಡ ಅಷ್ಟೊಂದು ಉಲ್ಲಾಸದಿಂದ ಆಡುತ್ತಿಲ್ಲ.
ಒಟ್ಟಿನಲ್ಲಿ ಹಿರಿಯ ಆಟಗಾರರನ್ನು ಮತ್ತು ಆಪ್ತರನ್ನು ಹೆಚ್ಚು ನೆಚ್ಚಿಕೊಂಡ ಧೋನಿ ಈಗ ಕೈಸುಟ್ಟುಕೊಂಡಿದ್ದಾರೆ.
ಯುವ ಆಟಗಾರರಿಗೆ ಮಣೆ ಹಾಕುತ್ತಿದ್ರೆ ಚೆನ್ನೈ ಸೂಪರ್ ಕಿಂಗ್ಸ್
ಈ ಬಾರಿಯ ಐಪಿಎಲ್ ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಿತ್ತು ಅನ್ನೋದು ಕ್ರಿಕೆಟ್ ಪಂಡಿತರ ಅಭಿಪ್ರಾಯವಾಗಿದೆ.







