ಐಪಿಎಲ್ 2020- ಪೃಥ್ವಿ ಶಾ ಮಿಂಚು.. ಧೋನಿ ಪಡೆಗೆ ಮತ್ತೊಂದು ಸೋಲು
2020ರ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸತತ ಎರಡನೇ ಗೆಲುವು ದಾಖಲಿಸಿದೆ. ಇತ್ತ ಚೆನ್ನೈ ಸೂಪರ್ ಕಿಂಗ್ಸ್ ಸತತ ಎರಡನೇ ಸೋಲು ಅನುಭವಿಸಿದೆ. ಟೂರ್ನಿಯ ಏಳನೇ ಪಂದ್ಯದಲ್ಲಿ ಪೃಥ್ವಿ ಶಾ ಅವರ ಅಮೋಘ ಅರ್ಧಶತಕ ಹಾಗೂ ಶಿಸ್ತು ಬದ್ಧ ಬೌಲಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 44 ರನ್ ಗಳಿಂದ ಧೋನಿ ಪಡೆಯನ್ನು ಪರಾಭವಗೊಳಿಸಿದೆ.
ದುಬೈ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದ್ರೆ ಧೋನಿಯ ಲೆಕ್ಕಚಾರಗಳನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕರು ಬುಡಮೇಲು ಮಾಡಿದ್ರು. ಪೃಥ್ವಿ ಶಾ ಮತ್ತು ಶಿಖರ್ ಧವನ್ ಮೊದಲ ವಿಕೆಟ್ ಗೆ 94 ರನ್ ಗಳನ್ನು ಪೇರಿಸಿದ್ರು. ಸ್ಟೈಲೀಶ್ ಆಟಗಾರ ಪೃಥ್ವಿ ಶಾ ತಮ್ಮ ಕ್ಲಾಸ್ ಮತ್ತು ಮಾಸ್ ಆಟದ ಮೂಲಕ ಧೋನಿಯ ಗೇಮ್ ಪ್ಲಾನ್ ಗಳನ್ನು ಉಲ್ಟಾಪಲ್ಟಾ ಮಾಡಿದ್ರು. ಇನ್ನೊಂದೆಡೆ ಶಿಖರ್ ಧವನ್ 25 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 35 ರನ್ ಗಳಿಸಿದ್ರು.
ಹಾಗೇ ಪೃಥ್ವಿ ಶಾ ತಮ್ಮ ನೈಜ ಆಟದಿಂದಲೇ ಗಮನ ಸೆಳೆದ್ರು. ಸಚಿನ್, ರಿಕಿ ಪಾಂಟಿಂಗ್ ಮತ್ತು ಸೆಹ್ವಾಗ್ ಆಟದ ಶೈಲಿಯ ಮೂಲಕ ಮಿಂಚು ಹರಿಸಿದ್ದ ಪೃಥ್ವಿ ಶಾ 43 ಎಸೆತಗಳಲ್ಲಿ 9 ಬೌಂಡರಿ ಮತ್ತು ಒಂದು ಸಿಕ್ಸರ್ ನ ಸಹಾಯದಿಂದ ಆಕರ್ಷಕ 64 ರನ್ ದಾಖಲಿಸಿದ್ರು.
ಬಳಿಕ ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಮೂರನೇ ವಿಕೆಟ್‍ಗೆ 58 ರನ್ ಕಲೆ ಹಾಕಿದ್ರು. ಶ್ರೇಯಸ್ ಅಯ್ಯರ್ 26 ರನ್ ಗಳಿಸಿದ್ರೆ, ರಿಷಬ್ ಪಂತ್ 25 ಎಸೆತಗಳಲ್ಲಿ ಆರು ಬೌಂಡರಿಗಳ ಮೂಲಕ ಅಜೇಯ 37 ರನ್ ಸಿಡಿಸಿದ್ರು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತ್ತು.
ಗೆಲ್ಲಲು 176 ರನ್ ಗಳ ಸವಾಲನ್ನು ಸ್ವೀಕರಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್ ಗಳು ಮಾರಕವಾಗಿ ಕಾಡಿದ್ರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಲಯ ಬದ್ಧವಾದ ಬೌಲಿಂಗ್ ದಾಳಿಗೆ ಸಿಎಸ್‍ಕೆ ಬ್ಯಾಟ್ಸ್ ಮೆನ್ ಗಳು ರನ್ ಗಳಿಸಲು ಒದ್ದಾಟ ನಡೆಸಿದ್ರು. ಹೀಗಾಗಿ ಆರಂಭಿಕ ಶೇನ್ ವಾಟ್ಸನ್ 14 ರನ್‍ಗೆ ಸುಸ್ತಾದ್ರೆ, ಮುರಳಿ ವಿಜಯ್ 10 ರನ್ ಗೆ ಸೀಮಿತವಾದ್ರು. ಫಾಫ್ ಡುಪ್ಲೇಸಸ್ ಏಕಾಂಗಿ ಹೋರಾಟ ನಡೆಸಿದ್ರು. ಇನ್ನುಳಿದಂತೆ ಋತುರಾಜ್ ಗಾಯಕ್ವಾಡ್ 5 ರನ್ ಗಳಿಸಿ ರನೌಟಾದ್ರೆ, ಕೇದಾರ್ ಜಾಧವ್ 26 ರನ್ ಗೆ ತನ್ನ ಹೋರಾಟವನ್ನು ಮುಗಿಸಿದ್ರು.
ಮತ್ತೊಮ್ಮೆ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಧೋನಿ ಮತ್ತೆ ಟೀಕೆಗೆ ಗುರಿಯಾದ್ರು. ಫಾಫ್ ಡುಪ್ಲೇಸಸ್ 43 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದ್ರು. ಹಾಗೇ ಧೋನಿ 15 ರನ್ ಗೆ ತನ್ನ ಹೋರಾಟವನ್ನು ಸೀಮಿತಗೊಳಿಸಿದ್ರು. ರವೀಂದ್ರ ಜಡೇಜಾ 12 ರನ್ ಗಳಿಸಿದ್ರು. ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 131 ರನ್ ಗಳಿಸಿತ್ತು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಕಾಗಿಸೊ ರಬಾಡ 26ಕ್ಕೆ ಮೂರು ವಿಕೆಟ್ ಪಡೆದ್ರೆ, ಆನ್ರಿಚ್ ನೊರ್ಟೆಜೆ 21ಕ್ಕೆ ಎರಡು ವಿಕೆಟ್ ಕಬಳಿಸಿದ್ರು. ಮನಮೋಹಕ ಆಟವನ್ನಾಡಿದ್ದ ಪೃಥ್ವಿ ಶಾ ಅವರು ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.