ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರ ಪರಿಷ್ಕರಣೆಯ ಚರ್ಚೆ ಮುನ್ನೆಲೆಗೆ ಬರುತ್ತಿದ್ದಂತೆಯೇ ರಾಜಕೀಯ ಕೆಸರೆರಚಾಟ ತಾರಕಕ್ಕೇರಿದೆ. ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರವಾಗಿ ರಾಜ್ಯ ಸರ್ಕಾರದತ್ತ ಬೆರಳು ಮಾಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ಐಟಿ-ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತೀವ್ರ ವಾಗ್ದಾಳಿ ನಡೆಸಿದ್ದು, ಬಿಜೆಪಿಯ ದ್ವಂದ್ವ ನೀತಿಯನ್ನು ಕಟುವಾಗಿ ಟೀಕಿಸಿದ್ದಾರೆ.
ಮೆಟ್ರೋ ಜಾಲ ಒಂದು ಮೀಟರ್ ವಿಸ್ತರಣೆಯಾದರೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ ಎಂದು ಪ್ರಚಾರ ಗಿಟ್ಟಿಸಿಕೊಳ್ಳುವ ಬಿಜೆಪಿಗರು, ಟಿಕೆಟ್ ದರ ಒಂದು ರೂಪಾಯಿ ಹೆಚ್ಚಾದರೆ ಮಾತ್ರ ಅದಕ್ಕೆ ರಾಜ್ಯ ಸರ್ಕಾರವೇ ಕಾರಣ ಎಂದು ಬೊಬ್ಬೆ ಹೊಡೆಯುತ್ತಾರೆ. ಇದು ಬಿಜೆಪಿ ನಾಯಕರು ಅನುಸರಿಸುತ್ತಿರುವ ವಿಚಿತ್ರ ಲಾಜಿಕ್ ಎಂದು ಸಚಿವರು ವ್ಯಂಗ್ಯವಾಡಿದ್ದಾರೆ.
ಹಣ ಹೂಡಿಕೆಯಲ್ಲಿ ರಾಜ್ಯದ್ದೇ ಸಿಂಹಪಾಲು
ಮೆಟ್ರೋ ಯೋಜನೆಯ ಅನುಷ್ಠಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲುದಾರಿಕೆ ಕುರಿತು ಸಚಿವ ಖರ್ಗೆ ಮಹತ್ವದ ಅಂಕಿಅಂಶಗಳನ್ನು ತೆರೆದಿಟ್ಟರು. ನಿಯಮಗಳ ಪ್ರಕಾರ ಮೆಟ್ರೋ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ 50:50 ಅನುಪಾತದಲ್ಲಿ ಬಂಡವಾಳ ಹೂಡಿಕೆ ಮಾಡಬೇಕು. ಆದರೆ ವಾಸ್ತವ ಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಕೇಂದ್ರ ಸರ್ಕಾರವು ತನ್ನ ಪಾಲಿನ ಸಂಪೂರ್ಣ ಅನುದಾನವನ್ನು ಬಿಡುಗಡೆ ಮಾಡದೇ ಇರುವ ಕಾರಣ, ಮೆಟ್ರೋ ವಿಸ್ತರಣೆ ಮತ್ತು ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ ಸರ್ಕಾರವೇ ಬರೋಬ್ಬರಿ ಶೇಕಡಾ 87ರಷ್ಟು ಹಣವನ್ನು ವಿನಿಯೋಗಿಸಿದೆ. ಇಷ್ಟೊಂದು ಭಾರವನ್ನು ರಾಜ್ಯ ಸರ್ಕಾರ ಹೊರುತ್ತಿದ್ದರೂ, ಉದ್ಘಾಟನೆ ಮತ್ತು ಪ್ರಚಾರದ ವೇಳೆ ಕ್ರೆಡಿಟ್ ಪಡೆಯಲು ಮುಗಿಬೀಳುವ ಬಿಜೆಪಿ ನಾಯಕರು, ದರ ಏರಿಕೆಯಂತಹ ಅಪ್ರಿಯ ನಿರ್ಧಾರಗಳ ಹೊಣೆಯನ್ನು ಮಾತ್ರ ರಾಜ್ಯದ ಮೇಲೆ ಹೊರಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ದರ ನಿಗದಿಯಲ್ಲಿ ರಾಜ್ಯಕ್ಕೆ ಅಧಿಕಾರವಿಲ್ಲ
ಮೆಟ್ರೋ ದರ ನಿಗದಿ ಪ್ರಕ್ರಿಯೆಯು ಸಂಪೂರ್ಣವಾಗಿ ಕಾನೂನಾತ್ಮಕ ಚೌಕಟ್ಟಿನಲ್ಲಿದೆ ಎಂದು ವಿವರಿಸಿದ ಖರ್ಗೆ, ಇದರಲ್ಲಿ ರಾಜ್ಯ ಸರ್ಕಾರದ ಪಾತ್ರ ನಗಣ್ಯ ಎಂದು ಸ್ಪಷ್ಟಪಡಿಸಿದರು. ಮೆಟ್ರೋ ರೈಲ್ವೆ ಕಾಯ್ದೆ-2002ರ ಅನ್ವಯ, ಪ್ರಯಾಣ ದರವನ್ನು ನಿಗದಿಪಡಿಸುವ ಅಥವಾ ಪರಿಷ್ಕರಿಸುವ ಅಧಿಕಾರ ಕೇವಲ ಸ್ವತಂತ್ರ ಫೇರ್ ಫಿಕ್ಸೆಶನ್ ಕಮಿಟಿಗೆ (ದರ ನಿಗದಿ ಸಮಿತಿ) ಮಾತ್ರ ಇರುತ್ತದೆ.
ಈ ಸಮಿತಿಯ ರಚನೆ ಮತ್ತು ಕಾರ್ಯವೈಖರಿ ಕುರಿತು ಮಾಹಿತಿ ನೀಡಿದ ಅವರು, ಸಮಿತಿಯನ್ನು ರಚಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಸಮಿತಿಯ ಅಧ್ಯಕ್ಷರನ್ನು (ಚೇರ್ಮನ್) ಕೇಂದ್ರ ಸರ್ಕಾರವೇ ನೇಮಿಸುತ್ತದೆ. ಸಮಿತಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ತಲಾ ಒಬ್ಬರು ಸದಸ್ಯರಿರುತ್ತಾರೆ. ಅಂದರೆ, ಸಮಿತಿಯಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಗಳ ಸಂಖ್ಯೆಯೇ ಹೆಚ್ಚಿರುತ್ತದೆ ಮತ್ತು ಅಂತಿಮ ನಿರ್ಧಾರದಲ್ಲಿ ಅವರದ್ದೇ ಮೇಲುಗೈ ಆಗಿರುತ್ತದೆ. ಅಲ್ಲದೆ, ಕಾನೂನಿನ ಪ್ರಕಾರ ಈ ಸಮಿತಿಯು ನೀಡುವ ಶಿಫಾರಸುಗಳನ್ನು ನಮ್ಮ ಮೆಟ್ರೋ ಸಂಸ್ಥೆಯು ಒಪ್ಪಲೇಬೇಕಾದ ಅನಿವಾರ್ಯತೆ ಇದೆ ಎಂದು ಸಚಿವರು ವಾಸ್ತವವನ್ನು ಬಿಚ್ಚಿಟ್ಟರು.
ಅಜ್ಞಾನವೋ ಅಥವಾ ಉದ್ದೇಶಪೂರ್ವಕ ಸುಳ್ಳೋ?
ಸಾರ್ವಜನಿಕ ಜೀವನದಲ್ಲಿರುವ ಬಿಜೆಪಿ ನಾಯಕರಿಗೆ ಆಡಳಿತಾತ್ಮಕ ಪ್ರಕ್ರಿಯೆಗಳ ಕನಿಷ್ಠ ಅರಿವು ಇರಬೇಕಿತ್ತು. ದರ ನಿಗದಿ ಸಮಿತಿಯ ನೇಮಕ ಮತ್ತು ಅದರ ಅಧಿಕಾರ ವ್ಯಾಪ್ತಿ ಕೇಂದ್ರ ಸರ್ಕಾರದ ಅಧೀನದಲ್ಲಿದೆ ಎಂಬ ಸತ್ಯ ಗೊತ್ತಿದ್ದರೂ, ಜನರನ್ನು ದಿಕ್ಕುತಪ್ಪಿಸಲು ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆಯೇ ಎಂದು ಖರ್ಗೆ ಪ್ರಶ್ನಿಸಿದರು. 2024ರಲ್ಲೇ ರಾಜ್ಯ ಸರ್ಕಾರವು ಹೊಸ ದರ ನಿಗದಿ ಸಮಿತಿ ರಚಿಸುವಂತೆ ಕೇಂದ್ರಕ್ಕೆ ಪತ್ರ ಬರೆದಿತ್ತು. ಆದರೆ ಈಗ ಹಳೆಯ ಪತ್ರಗಳನ್ನು ಹಿಡಿದುಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ. ಸತ್ಯದ ಹಾದಿ ಬಿಜೆಪಿಗೆ ಎಂದು ಅಪಥ್ಯ, ಏಕೆಂದರೆ ಸುಳ್ಳೇ ಅವರ ಮನೆದೇವರು ಎಂದು ಸಚಿವರು ಕಟುವಾಗಿ ಟೀಕಿಸಿದರು.
ಇತ್ತೀಚೆಗೆ ಮೆಟ್ರೋ ದರ ಏರಿಕೆ ಪ್ರಸ್ತಾವನೆಯನ್ನು ಸ್ವತಃ ಕೇಂದ್ರ ಸರ್ಕಾರವೇ ತಡೆಹಿಡಿದಿದೆ ಎಂಬ ವರದಿಗಳೇ ಸಾಕ್ಷಿ, ದರ ಏರಿಕೆಯ ನಿಯಂತ್ರಣ ಯಾರ ಕೈಯಲ್ಲಿದೆ ಎಂಬುವುದಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಬೇಕಿಲ್ಲ. ಆದ್ದರಿಂದ ಬಿಜೆಪಿ ನಾಯಕರು ಮೊದಲು ತಮ್ಮ ಸರ್ಕಾರದ ವ್ಯಾಪ್ತಿಯಲ್ಲಿರುವ ವೈಫಲ್ಯಗಳನ್ನು ಸರಿಪಡಿಸಿಕೊಳ್ಳಲಿ, ಅದನ್ನು ಬಿಟ್ಟು ರಾಜ್ಯ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸಲಿ ಎಂದು ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದರು.







