ತೊಗರಿ ಬೇಳೆಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿ ರೈತ ಸಂಘಟನೆಗಳು ಇಂದು ಕಲಬುರ್ಗಿ ಬಂದ್ಗೆ ಕರೆ ನೀಡಿವೆ.ಬಂದ್ ಘೋಷಣೆ ಮಾಡಿದ್ದರಿಂದ ಇಲ್ಲಿನ ಅಂಗಡಿ ಮಾಲೀಕರು ಸ್ವಯಂ ಪ್ರೇರಿತವಾಗಿ ತಮ್ಮ ಅಂಗಡಿ, ಮುಗ್ಗಟ್ಟುಗಳನ್ನು ಮುಚ್ಚಿ, ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ದಿನನಿತ್ಯ ಕೇಂದ್ರ ಬಸ್ ನಿಲ್ದಾಣದಲ್ಲಿ ದಿನಾಲೂ ಬೆಳಗ್ಗೆ ತೆರೆಯುತ್ತಿದ್ದ ಕಿರಾಣಿ ಅಂಗಡಿ, ಚಪ್ಪಲಿ ಅಂಗಡಿ, ಹೋಟೆಲ್ ಸೇರಿದಂತೆ ಇತರ ವಾಣಿಜ್ಯ ಮಳಿಗೆಗಳು ಮುಚ್ಚಿರುವುದು ಕಂಡು ಬಂತು.ಕಲಬುರಗಿ ಬಂದ್ ಘೋಷಣೆ ನಿಮಿತ್ತ ಇಂದು ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಗಳು ರಸ್ತೆಗೆ ಇಳಿದಿಲ್ಲ, ಇದರಿಂದ ಕೇಂದ್ರ ಬಸ್ ನಿಲ್ದಾಣವು ಬಸ್ ಗಳಿಲ್ಲದೆ ಬಿಕೋ ಎನ್ನುತ್ತಿವೆ.
ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿರುವುದರಿಂದ ವಿದ್ಯಾರ್ಥಿಗಳು ಶಾಲಾ-ಕಾಲೇಜು ತಲುಪಲು ಪರದಾಡಿದ್ದಾರೆ. ಬಂದ್ ಗಂಭೀರ ಸ್ವರೂಪ ಪಡೆದ ಕಾರಣ ವಿದ್ಯಾರ್ಥಿಗಳು ರಜೆ ಎದುರು ನೋಡುತ್ತಿದ್ದರು. ಆದರೆ, ಈವರೆಗೆ ರಜೆ ಘೋಷಿಸಲಾಗಿಲ್ಲ. ಬಂದ್ ಇನ್ನಷ್ಟು ಗಂಭೀರ ಸ್ವರೂಪ ಪಡೆದರೆ ರಜೆ ಘೋಷಿಸುವ ಸಾಧ್ಯತೆಗಳು ದಟ್ಟವಾಗಿದೆ.
ಬಂದ್ ಕರೆಗೆ ಹಲವು ಸಂಘಟನೆಗಳ ಭಾರೀ ಬೆಂಬಲ:
ತೊಗರಿಗೆ ವಿಶೇಷ ಪ್ಯಾಕೇಜ್ ಅನುದಾನ ಘೋಷಿಸಬೇಕೆಂದು ಒತ್ತಾಯಿಸಿ ಕರೆ ಕೊಟ್ಟಿದ್ದ ಕಲಬುರಗಿ ಬಂದ್ ಗೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.







