ಕಲಬುರಗಿ: ಐಪಿಎಸ್ 2011ನೇ ಬ್ಯಾಚ್ ಅಧಿಕಾರಿ ಹಾಗೂ ಕನ್ನಡಿಗ ಮಂಜುನಾಥ ಸಿಂಗೆ (Manjunath Singe) ಸಿಬಿಐ ಡೆಪ್ಯೂಟಿ ಇನ್ಸ್ ಪೆಕ್ಟರ್ ಜನರಲ್ (CBI DIG) ಹುದ್ದೆಗೇರಿದ್ದಾರೆ.
ಜ.13ರಂದು ಭಾರತ ಸರ್ಕಾರದ ಅಧೀನ ಕಾರ್ಯದರ್ಶಿ ಸತ್ಯಂ ಶ್ರೀವಾಸ್ತವ ಈ ಕುರಿತು ಆದೇಶ ಹೊರಡಿಸಿದ್ದಾರೆ. ಸಿಂಗೆ ಅವರು 2028ರ ಫೆ.28ರ ವರೆಗೆ (5 ವರ್ಷ) ಸಿಬಿಐ ಡಿಐಜಿ ಹುದ್ದೆ ನಿಭಾಯಿಸಲಿದ್ದಾರೆ. ಅಫಜಲಪುರ ತಾಲೂಕಿನ ಗೌರ್(ಬಿ) ಗ್ರಾಮದ ಮಂಜುನಾಥ, ನಿವೃತ್ತ ಹೆಡ್ ಕಾನ್ಸ್‌ಟೇಬಲ್ ಹುಚ್ಚಪ್ಪ ಸಿಂಗೆ ಅವರ ಪುತ್ರ. ಜಿಲ್ಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದಾರೆ.
ಧಾರವಾಡದ ಕರ್ನಾಟಕ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ಮುಗಿಸಿದ್ದಾರೆ. ಪಿಯುಸಿ ಹಂತದಿಂದಲೇ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳಿಗೆ ಸಿದ್ಧತೆ ಆರಂಭಿಸಿದ್ದರು. 2009-10ರಲ್ಲಿ ಐಆರ್‍ಎಸ್ ಉತ್ತೀರ್ಣರಾಗಿ ಗೋವಾದ ಆದಾಯ ತೆರಿಗೆ ಇಲಾಖೆಯಲ್ಲಿ 1 ವರ್ಷ ಸೇವೆ ಸಲ್ಲಿಸುತ್ತ ಮತ್ತೊಮ್ಮೆ ಯುಪಿಎಸ್ಸಿ ಪರೀಕ್ಷೆಗೆ ಹಾಜರಾಗಿ 2010-11ರಲ್ಲಿ ಐಪಿಎಸ್ ಆಗಿದ್ದರು.
ಆರಂಭಿಕ ತರಬೇತಿಯ ನಂತರ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಎಎಸ್ಪಿ ಆಗಿ 1 ವರ್ಷ ಸೇವೆ ಸಲ್ಲಿಸಿದರು. ಗಡಚಿರೋಲಿ ವಿಭಾಗದ ನಕ್ಸಲ್ ನಿಗ್ರಹ ಪಡೆಯಲ್ಲೂ ಎಎಸ್ಪಿ ಆಗಿ 2 ವರ್ಷ ಸೇವೆ ಸಲ್ಲಿಸಿದರು. ಆಮೇಲೆ ಪಾಲ್ಗಾರ್ ಎಸ್ಪಿಯಾಗಿ, ನಂತರ ಮುಂಬೈ ವಸಾಯಿ ಪ್ರಾಂತ್ಯದ ಡಿಸಿಪಿ, ನಂತರ ಬಾಂದ್ರಾ ಡಿಸಿಪಿಯಾಗಿ ಕಾರ್ಯನಿರ್ವಹಿಸಿದರು. ಕೋವಿಡ್ ಅವಧಿ ಮುಗಿಯುತ್ತಿದ್ದಂತೆಯೇ ಸಿಬಿಐ ಅಧಿಕಾರಿಯಾಗಿ ಸೇವೆ ಆರಂಭಿಸಿದರು. ಈಗ ಸಿಬಿಐ ಡಿಐಜಿ ಹುದ್ದೆ ಅಲಂಕರಿಸಿದ್ದಾರೆ.







