ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾಷಾ ವಿವಾದಗಳು ಹೊಸದೇನಲ್ಲ. ಆದರೆ ಈ ಬಾರಿ ವಿವಾದಕ್ಕೆ ಕಾರಣವಾಗಿರುವುದು ನಾಮಫಲಕದ ಅಳತೆಯಲ್ಲ, ಬದಲಾಗಿ ಕನ್ನಡ ಭಾಷೆಯ ಕಗ್ಗೊಲೆ. ಸ್ಥಳೀಯ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಿ ಲಾಭ ಗಳಿಸಲು ಬರುವ ಕಂಪನಿಗಳಿಗೆ ಇಲ್ಲಿನ ಭಾಷೆಯ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲ ಎಂಬುದಕ್ಕೆ ಜನಪ್ರಿಯ ದೋಸೆ ಮತ್ತು ಇಡ್ಲಿ ಹಿಟ್ಟು ಮಾರಾಟ ಮಾಡುವ ಬ್ಯಾಟರ್ ಬಾಕ್ಸ್ ಕಂಪನಿಯ ಜಾಹೀರಾತು ಸಾಕ್ಷಿಯಾಗಿದೆ.
ಅರ್ಥಹೀನ ಭಾಷಾಂತರದ ಅವಾಂತರ
ಇಂಗ್ಲಿಷ್ ಭಾಷೆಯ ಆಕರ್ಷಕ ಸಾಲುಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಭರತದಲ್ಲಿ ಬ್ಯಾಟರ್ ಬಾಕ್ಸ್ ಕಂಪನಿ ಎಡವಟ್ಟಿನ ಪರಮಾವಧಿಯನ್ನೇ ಪ್ರದರ್ಶಿಸಿದೆ. ತನ್ನ ಉತ್ಪನ್ನದ ಜಾಹೀರಾತಿನಲ್ಲಿ ಇಂಗ್ಲಿಷ್ ಭಾಷೆಯ ಎಂಜಾಯ್ಮೆಂಟ್ ಇನ್ ಎವೆರಿ ಬೈಟ್ ಎಂಬ ಸಾಲನ್ನು ಬಳಸಲಾಗಿತ್ತು. ಇದರ ನೈಜ ಅರ್ಥ ಪ್ರತಿ ತುತ್ತಿನಲ್ಲೂ ಆನಂದ ಅಥವಾ ಪ್ರತಿ ತುತ್ತಿನಲ್ಲೂ ಸವಿ ಎಂಬುದಾಗಿದೆ. ಆದರೆ ಗೂಗಲ್ ಟ್ರಾನ್ಸ್ಲೇಟ್ ಮೊರೆ ಹೋದ ಕಂಪನಿಯ ಮಹಾಶಯರು ಇದನ್ನು ಪ್ರತಿ ಕಚ್ಚುವಿಕೆಯಲ್ಲಿ ಆನಂದ ಎಂದು ಭಾಷಾಂತರಿಸಿ ಬೋರ್ಡ್ ಹಾಕಿದ್ದಾರೆ.
ಆಹಾರವನ್ನು ಪ್ರೀತಿಯಿಂದ ಸವಿಯುವ ತುತ್ತು ಎಲ್ಲಿ, ಪ್ರಾಣಿಗಳು ಅಥವಾ ಹಲ್ಲಿನಿಂದ ಕಚ್ಚುವಿಕೆ ಎಲ್ಲಿ ಎಂಬ ಸಾಮಾನ್ಯ ಪ್ರಜ್ಞೆಯೂ ಇಲ್ಲದೆ ಈ ಪದಬಳಕೆ ಮಾಡಿರುವುದು ಕನ್ನಡಿಗರ ತೀವ್ರ ಕೆಂಗಣ್ಣಿಗೆ ಗುರಿಯಾಗಿದೆ.
ಕನ್ನಡಿಗರ ಆಕ್ರೋಶ ಮತ್ತು ವ್ಯಂಗ್ಯದ ಬಾಣ
ಈ ಪ್ರಮಾದದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಕನ್ನಡಿಗರು ಕಂಪನಿಯ ವಿರುದ್ಧ ಮುಗಿಬಿದ್ದಿದ್ದಾರೆ. ಎಕ್ಸ್ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ನೆಟ್ಟಿಗರು ಕಂಪನಿಯ ಅಜ್ಞಾನವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬ್ರ್ಯಾಂಡ್ ಕಟ್ಟುವ ನಿಮಗೆ ಕನ್ನಡ ಗೊತ್ತಿರುವ ಒಬ್ಬ ಕಾಪಿರೈಟರ್ ಅಥವಾ ಭಾಷಾ ತಜ್ಞರನ್ನು ನೇಮಿಸಿಕೊಳ್ಳಲು ಆಗುವುದಿಲ್ಲವೇ ಎಂದು ಕನ್ನಡಿಗರು ಪ್ರಶ್ನಿಸಿದ್ದಾರೆ. ಪ್ರತಿಯೊಂದು ತುತ್ತಿನಲ್ಲೂ ಆನಂದ ಎಂದು ಬರೆಯುವ ಬದಲು ಕಚ್ಚುವಿಕೆ ಎನ್ನಲು ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಬಳಕೆದಾರರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಕೆಲವರು ಕಂಪನಿಯ ಅಜ್ಞಾನವನ್ನು ವ್ಯಂಗ್ಯವಾಡಿದ್ದು ಕೇವಲ ಕಚ್ಚುವಿಕೆ ಎಂದು ಬರೆದಿದ್ದೀರಿ, ಪುಣ್ಯಕ್ಕೆ ಪ್ರತಿ ಕಡಿತದಲ್ಲೂ ಆನಂದ ಎಂದು ಬರೆಯಲಿಲ್ಲ, ಅಷ್ಟರಮಟ್ಟಿಗೆ ಕನ್ನಡವನ್ನು ಉಳಿಸಿದಿರಲ್ಲ ಎಂದು ಕಾಲೆಳೆದಿದ್ದಾರೆ.
ಬಹುರಾಷ್ಟ್ರೀಯ ಕಂಪನಿಗಳ ಅಸಡ್ಡೆಗೆ ಇದು ಕನ್ನಡಿ
ಇದು ಕೇವಲ ಬ್ಯಾಟರ್ ಬಾಕ್ಸ್ ಕಂಪನಿಯ ತಪ್ಪಲ್ಲ, ಬಹುತೇಕ ಹೊಸ ಸ್ಟಾರ್ಟ್ ಅಪ್ ಗಳು ಮತ್ತು ಕಾರ್ಪೊರೇಟ್ ಕಂಪನಿಗಳ ನಿರ್ಲಕ್ಷ್ಯದ ಸಂಕೇತವಾಗಿದೆ. ಕರ್ನಾಟಕದಲ್ಲಿ ನೆಲೆಸಿ, ಕನ್ನಡಿಗರ ಹಣದಿಂದಲೇ ಬೆಳೆಯುವ ಈ ಕಂಪನಿಗಳಿಗೆ ಕನ್ನಡ ಭಾಷೆಯನ್ನು ಗೌರವಯುತವಾಗಿ ಬಳಸುವ ಸೌಜನ್ಯವಿಲ್ಲ ಎಂಬುದು ಈ ಘಟನೆಯಿಂದ ಮತ್ತೆ ಸಾಬೀತಾಗಿದೆ.
ಹಣ ಉಳಿಸುವ ಉದ್ದೇಶದಿಂದ ಕೇವಲ ಯಾಂತ್ರಿಕ ಭಾಷಾಂತರವನ್ನು ನಂಬಿಕೊಳ್ಳುವ ಇಂತಹ ಕಂಪನಿಗಳು, ಭಾಷೆಯ ಸೂಕ್ಷ್ಮತೆ ಮತ್ತು ಭಾವನೆಗಳನ್ನು ಕೊಲೆ ಮಾಡುತ್ತಿವೆ. ತುತ್ತು ಎಂಬ ಪದವು ಊಟದ ಮೇಲಿನ ಭಾವನಾತ್ಮಕ ಬೆಸುಗೆಯನ್ನು ಸೂಚಿಸಿದರೆ, ಕಚ್ಚುವಿಕೆ ಎಂಬುದು ಯಾಂತ್ರಿಕ ಹಾಗೂ ಒರಟು ಅರ್ಥವನ್ನು ನೀಡುತ್ತದೆ ಎಂಬ ಕನಿಷ್ಠ ಅರಿವು ಇವರಿಗೆ ಇಲ್ಲದಿರುವುದು ದುರಂತ. ಇದು ಕೇವಲ ಭಾಷಾ ದೋಷವಲ್ಲ, ಆ ಭಾಷೆಯ ಸಂವೇದನೆಯನ್ನೇ ಕೊಂದಂತೆ ಎನ್ನುವುದು ಭಾಷಾಭಿಮಾನಿಗಳ ವಾದ.
ಬ್ರ್ಯಾಂಡ್ ಮೌಲ್ಯ ಕಚ್ಚಿ ತಿನ್ನುವ ಮುನ್ನ ಎಚ್ಚರವಿರಲಿ
ಬೆಂಗಳೂರಿನಂತಹ ಜಾಗತಿಕ ಮಟ್ಟದ ಮಹಾನಗರದಲ್ಲಿ ವ್ಯವಹಾರ ಮಾಡುವಾಗ ಸ್ಥಳೀಯ ಸಂಸ್ಕೃತಿ ಮತ್ತು ಭಾಷೆಗೆ ಮನ್ನಣೆ ನೀಡುವುದು ಪ್ರತಿಯೊಂದು ಕಂಪನಿಯ ಆದ್ಯತೆಯಾಗಬೇಕು. ಕೇವಲ ಹಣ ಗಳಿಕೆಯಷ್ಟೇ ಗುರಿಯಾಗದೆ, ಗ್ರಾಹಕರ ಭಾಷೆಯ ಮೇಲಿನ ಗೌರವವೂ ಅಷ್ಟೇ ಮುಖ್ಯವಾಗುತ್ತದೆ.
ಯಾಂತ್ರಿಕ ಅನುವಾದದ ಮೊರೆ ಹೋಗುವ ಮುನ್ನ ಭಾಷೆಯ ಸೊಗಡು ತಿಳಿದಿರುವ ತಜ್ಞರಿಂದ ಅದನ್ನು ಪರಿಶೀಲಿಸುವುದು ಅತ್ಯಗತ್ಯ. ಇಲ್ಲವಾದರೆ ಇಂತಹ ಕಚ್ಚುವಿಕೆಯಂಥ ಭಾಷಾ ಪ್ರಯೋಗಗಳು ಕೇವಲ ನೆಟ್ಟಿಗರ ಆಕ್ರೋಶಕ್ಕೆ ಮಾತ್ರ ಸೀಮಿತವಾಗದೆ, ಕಂಪನಿಯ ವಿಶ್ವಾಸಾರ್ಹತೆ ಮತ್ತು ಬ್ರ್ಯಾಂಡ್ ಮೌಲ್ಯವನ್ನೇ ಕಚ್ಚಿ ತಿನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಸ್ಥಳೀಯ ಭಾಷೆಯನ್ನು ಅಗೌರವಿಸುವ ಕಂಪನಿಗಳಿಗೆ ಕನ್ನಡಿಗರು ತಕ್ಕ ಪಾಠ ಕಲಿಸುವ ದಿನ ದೂರವಿಲ್ಲ ಎಂಬುದಕ್ಕೆ ಈ ಘಟನೆ ಮುನ್ಸೂಚನೆಯಾಗಿದೆ.







