ಬೆಂಗಳೂರು: ಕರ್ನಾಟಕದ ಹೆಮ್ಮೆಯ ಪ್ರತೀಕವಾಗಿರುವ ಕೆಎಂಎಫ್ ನ ನಂದಿನಿ ಬ್ರ್ಯಾಂಡ್ ಇದೀಗ ಕ್ರಿಕೆಟ್ ಜಗತ್ತಿನ ರಣಕಣಕ್ಕೆ ಇಳಿದಿದೆ. ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದೊಂದಿಗೆ ಕೈಜೋಡಿಸಿರುವ ಕೆಎಂಎಫ್, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿಯ ಅಧಿಕೃತ ಡೈರಿ ಪಾರ್ಟ್ನರ್ ಆಗಿ ಕಾಣಿಸಿಕೊಳ್ಳಲಿದೆ. ಈ ಮೂಲಕ ನಂದಿನಿ ಬ್ರ್ಯಾಂಡ್ ತನ್ನ ಮಾರುಕಟ್ಟೆಯನ್ನು ಕೇವಲ ರಾಜ್ಯ ಅಥವಾ ದೇಶಕ್ಕೆ ಸೀಮಿತಗೊಳಿಸದೆ, ಅಂತರರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸುವ ಮಹತ್ವಾಕಾಂಕ್ಷೆಯ ಹೆಜ್ಜೆಯನ್ನು ಇಟ್ಟಿದೆ.
ಜಾಗತಿಕ ಮಟ್ಟದಲ್ಲಿ ನಂದಿನಿ ಹವಾ
ಈ ಕುರಿತು ಮಾಹಿತಿ ನೀಡಿರುವ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ, ನಂದಿನಿ ಕೇವಲ ಒಂದು ಹಾಲಿನ ಬ್ರ್ಯಾಂಡ್ ಅಲ್ಲ, ಅದು ಕನ್ನಡಿಗರ ಭಾವನೆ. ಈಗಾಗಲೇ ರಾಜ್ಯದ ಗಡಿ ದಾಟಿ ಹೊರರಾಜ್ಯಗಳಲ್ಲಿಯೂ ಉತ್ತಮ ಹೆಸರು ಗಳಿಸಿರುವ ನಂದಿನಿ, ಈಗ ಐಪಿಎಲ್‌ನಂತಹ ಬೃಹತ್ ವೇದಿಕೆಯ ಮೂಲಕ ತನ್ನ ಕೀರ್ತಿಯನ್ನು ವಿಶ್ವದಾದ್ಯಂತ ಪಸರಿಸಲು ಸಜ್ಜಾಗಿದೆ ಎಂದಿದ್ದಾರೆ. ಯುವಜನತೆ ಹೆಚ್ಚಾಗಿ ಕ್ರೀಡೆಯತ್ತ ಆಕರ್ಷಿತರಾಗುತ್ತಿದ್ದು, ಅವರಿಗೆ ಉತ್ತಮ ಆರೋಗ್ಯ ಮತ್ತು ಪೌಷ್ಟಿಕಾಂಶಯುಕ್ತ ನಂದಿನಿ ಉತ್ಪನ್ನಗಳ ಬಗ್ಗೆ ಅರಿವು ಮೂಡಿಸುವುದು ಈ ಒಪ್ಪಂದದ ಪ್ರಮುಖ ಉದ್ದೇಶವಾಗಿದೆ.
ನಂದಿನಿ ಪ್ಯಾಕೆಟ್ ಮೇಲೆ ರಾರಾಜಿಸಲಿದ್ದಾರೆ ಕೊಹ್ಲಿ
ಸುಮಾರು 4 ಕೋಟಿ 80 ಲಕ್ಷ ರೂಪಾಯಿಗಳ ಬೃಹತ್ ಮೊತ್ತದ ಟೆಂಡರ್ ಮೂಲಕ ಈ ಪ್ರಾಯೋಜಕತ್ವವನ್ನು ಕೆಎಂಎಫ್ ಪಡೆದುಕೊಂಡಿದೆ. ಈ ಒಪ್ಪಂದದನ್ವಯ, ಆರ್‌ಸಿಬಿ ತಂಡದ ಪ್ರಮುಖ ಆಟಗಾರರಾದ ರನ್ ಮಷಿನ್ ವಿರಾಟ್ ಕೊಹ್ಲಿ, ರಜತ್ ಪಟೀದಾರ್ ಮತ್ತು ದೇವದತ್ ಪಡಿಕಲ್ ಅವರ ಭಾವಚಿತ್ರಗಳು ನಂದಿನಿ ಹಾಲಿನ ಪ್ಯಾಕೆಟ್ ಹಾಗೂ ಇತರೆ ಉತ್ಪನ್ನಗಳ ಮೇಲೆ ರಾರಾಜಿಸಲಿವೆ. ತಂಡದ ಜೆರ್ಸಿ ಅಥವಾ ಕ್ಯಾಪ್‌ಗಳ ಮೇಲೆ ಕೆಎಂಎಫ್ ಲೋಗೋ ಇಲ್ಲದಿದ್ದರೂ, ಉತ್ಪನ್ನಗಳ ಪ್ಯಾಕೇಜಿಂಗ್ ಮೂಲಕ ಪ್ರತಿಯೊಬ್ಬರ ಮನೆ ಬಾಗಿಲಿಗೆ ಆರ್‌ಸಿಬಿ ತಾರೆಯರು ನಂದಿನಿ ಮೂಲಕ ತಲುಪಲಿದ್ದಾರೆ.
ದೇಶದ ಮೂಲೆ ಮೂಲೆಗೂ ನಂದಿನಿ ಕಂಪಿನ ವಿಸ್ತರಣೆ
ಮಾರ್ಚ್ 28ರಿಂದ ಆರಂಭವಾಗುವ ಐಪಿಎಲ್ ಹಬ್ಬದೊಂದಿಗೆ ಈ ಒಪ್ಪಂದ ಜಾರಿಗೆ ಬರಲಿದ್ದು, ಒಂದು ವರ್ಷದ ಅವಧಿಗೆ ಚಾಲ್ತಿಯಲ್ಲಿರುತ್ತದೆ. ಕೇವಲ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವಷ್ಟೇ ಅಲ್ಲದೆ, ಆರ್‌ಸಿಬಿ ಆಡಲಿರುವ ದೇಶದ ಇತರೆ ಕ್ರೀಡಾಂಗಣಗಳಲ್ಲಿಯೂ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಮೂಲಕ ಅಮೂಲ್ ನಂತಹ ದಿಗ್ಗಜ ಬ್ರ್ಯಾಂಡ್ ಗಳಿಗೆ ಸೆಡ್ಡು ಹೊಡೆದು, ಉತ್ತರ ಭಾರತ ಸೇರಿದಂತೆ ದೇಶದಾದ್ಯಂತ ನಂದಿನಿ ಮಾರುಕಟ್ಟೆಯನ್ನು ವಿಸ್ತರಿಸಲು ಕೆಎಂಎಫ್ ಸಜ್ಜಾಗಿದೆ.
ಒಂದೆಡೆ ಜಾಗತಿಕ ಮಟ್ಟದ ವಿಸ್ತರಣೆಯ ಸಂಭ್ರಮವಾದರೆ, ಇನ್ನೊಂದೆಡೆ ಸ್ಥಳೀಯವಾಗಿ ಉತ್ಪಾದನಾ ಸವಾಲುಗಳು ಎದುರಾಗಿವೆ. ಸಿಲಿಂಡರ್ ಪೂರೈಕೆಯಲ್ಲಿ ಉಂಟಾಗಿರುವ ಅಭಾವವು ಹಾಲು ಉತ್ಪಾದನೆ ಮತ್ತು ಮಾರಾಟದ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಶಿವಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ. ಹಾಲಿನ ಉತ್ಪನ್ನಗಳ ತಯಾರಿಕೆಗೆ ದಿನನಿತ್ಯ 15 ಸಿಲಿಂಡರ್‌ಗಳ ಅಗತ್ಯವಿದ್ದು, ಸದ್ಯ ಕೇವಲ 7 ರಿಂದ 8 ಸಿಲಿಂಡರ್‌ಗಳು ಮಾತ್ರ ಪೂರೈಕೆಯಾಗುತ್ತಿವೆ. ಇದರಿಂದಾಗಿ ಪ್ರತಿನಿತ್ಯದ ಹಾಲು ಮಾರಾಟದಲ್ಲಿ ಶೇ. 2ರಷ್ಟು (ಸುಮಾರು 5 ರಿಂದ 6 ಲಕ್ಷ ಲೀಟರ್) ಕುಸಿತ ಕಂಡಿದ್ದು, ಬೆಂಗಳೂರು ನಗರದಲ್ಲಿ ಇದರ ಬಿಸಿ ಹೆಚ್ಚು ತಟ್ಟಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಉತ್ಪಾದನೆಯನ್ನು ಕಡಿತಗೊಳಿಸುವ ಅನಿವಾರ್ಯತೆ ಎದುರಾಗಬಹುದು ಎಂದು ಎಚ್ಚರಿಸಿದ್ದಾರೆ.
ಇಷ್ಟೆಲ್ಲಾ ಸವಾಲುಗಳ ನಡುವೆಯೂ ಕೆಎಂಎಫ್ ತನ್ನ ಮಾರುಕಟ್ಟೆ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತಿದೆ. ಪವಿತ್ರ ಯಾತ್ರಾಸ್ಥಳ ತಿರುಪತಿ ತಿಮ್ಮಪ್ಪನ ಲಡ್ಡು ತಯಾರಿಕೆಗೆ ತುಪ್ಪ ಪೂರೈಸುವ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಅಂತಿಮ ನಿರ್ಧಾರಕ್ಕಾಗಿ ಕಾಯಲಾಗುತ್ತಿದೆ. ಟಿಟಿಡಿಗೆ ಅಗತ್ಯವಿರುವಷ್ಟು ಗುಣಮಟ್ಟದ ತುಪ್ಪ ಪೂರೈಸಲು ಕೆಎಂಎಫ್ ಸಮರ್ಥವಾಗಿದೆ.
ಇದಲ್ಲದೆ ರಂಜಾನ್ ಹಬ್ಬದ ಸಂದರ್ಭದಲ್ಲಿ ಹಾಲಿನ ಬೇಡಿಕೆ ಗಣನೀಯವಾಗಿ ಏರಿಕೆಯಾಗಿದ್ದು, ಒಂದೇ ದಿನದಲ್ಲಿ 51.26 ಲಕ್ಷ ಲೀಟರ್ ಹಾಲು ಮಾರಾಟವಾಗಿರುವುದು ದಾಖಲೆಯಾಗಿದೆ. ಅತ್ತ ಸೌದಿ ಅರೇಬಿಯಾ ಮತ್ತು ದುಬೈನಂತಹ ಕೊಲ್ಲಿ ರಾಷ್ಟ್ರಗಳಿಗೂ ನಂದಿನಿ ಉತ್ಪನ್ನಗಳು ರಫ್ತಾಗುತ್ತಿದ್ದು, ಕರ್ನಾಟಕದ ರೈತರ ಶ್ರಮದ ಫಲ ಈಗ ವಿದೇಶಿಯರ ಮನೆಗೂ ತಲುಪಿದೆ.
ನಂದಿನಿ ಬ್ರ್ಯಾಂಡ್ ಆರ್‌ಸಿಬಿಯ ಜೊತೆಗೂಡಿ ಹೊಸ ಇನಿಂಗ್ಸ್ ಆರಂಭಿಸಿದೆ. ಸ್ಥಳೀಯ ಸಮಸ್ಯೆಗಳನ್ನು ಮೆಟ್ಟಿ ನಿಂತು, ಜಾಗತಿಕ ಮಾರುಕಟ್ಟೆಯಲ್ಲಿ ಕನ್ನಡದ ಬಾವುಟ ಹಾರಿಸಲು ಕೆಎಂಎಫ್ ಸಕಲ ರೀತಿಯಲ್ಲೂ ಸಜ್ಜಾಗಿದೆ.







