ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅನಿಲ್ ಕುಮಾರ್ ಅವರು ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಇದರಿಂದಾಗಿ ಉಪಮುಖ್ಯಮಂತ್ರಿ ಬಿಜೆಪಿ ಅಭ್ಯರ್ಥಿ ಲಕ್ಷ್ಮಣ್ ಸವದಿ ಗೆಲುವು ಖಚಿತವಾಗಿದ್ದು, ಸವದಿಗೆ ಲಡ್ಡು ಬಂದು ಬಾಯಿಗೆ ಬಿದ್ದಂತಾಗಿದೆ.
ಕೆಲ ದಿನಗಳ ಹಿಂದೆ ಡಿ.ಕೆ ಶಿವಕುಮಾರ್ ಹಾಗೂ ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್-ಜೆಡಿಎಸ್ ಬೆಂಬಲ ದಿಂದ ಪಕ್ಷೇತರ ಅಭ್ಯರ್ಥಿಯಾಗಿ ಅನಿಲ್ ಕುಮಾರ್ ಅವರನ್ನು ಕಣಕ್ಕೆ ಇಳಿಸಿದ್ದರು. ಆದರೆ ಕಾಂಗ್ರೆಸ್ನಿಂದ ಪೂರ್ಣಪ್ರಮಾಣದ ಬೆಂಬಲ ಸಿಗದ ಕಾರಣ ಅನಿಲ್ ಕುಮಾರ್, ವಿಧಾನಸಭೆ ಕಾರ್ಯದರ್ಶಿ ಚುನಾವಣಾಧಿಕಾರಿ ವಿಶಾಲಾಕ್ಷಿ ಅವರನ್ನು ಭೇಟಿ ಮಾಡಿ ಚುನಾವಣಾ ನಿವೃತ್ತಿ ಘೋಷಿಸಿ ಪತ್ರ ಸಲ್ಲಿಸಿದ್ದಾರೆ.
ಉಪಮುಖ್ಯಮಂತ್ರಿ, ಸಚಿವರಾಗಿ ಮುಂದುವರಿಯಲು ಫೆ.18 ರೊಳಗೆ ವಿಧಾನಸಭೆ ಅಥವಾ ವಿಧಾನ ಪರಿಷತ್ ಗೆ ಲಕ್ಷ್ಮಣ ಸವದಿ ಸದಸ್ಯರಾಗಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಅನಿಲ್ ಕುಮಾರ್ ಸ್ಪರ್ಧೆ ಆರಂಭದಲ್ಲಿ ಲಕ್ಷ್ಮಣ್ ಸವದಿಗೆ ಅಡ್ಡಿಯಾಗಿತ್ತಾದರೂ ಈಗ ಅನಿಲ್ ಕುಮಾರ್ ಸ್ಪರ್ಧೆಯಿಂದ ಹಿಂದೆ ಸರಿದಿರುವುದರಿಂದ ಸವದಿ ಅವರಿಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿದೆ.