ಬಿಜೆಪಿ ಮತ್ತು ಆರ್ಎಸ್ಎಸ್ ಅನ್ನು ವಿಷ ಸರ್ಪಕ್ಕೆ ಹೋಲಿಕೆ ಮಾಡಿ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ವಿಚಾರವಾಗಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಕುರಾನ್ ಉಲ್ಲೇಖಿಸಿ ನೀಡಿದ ಹೇಳಿಕೆಯು ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ನಮಾಜ್ ಮಾಡುವಾಗ ವಿಷ ಸರ್ಪ ಕಂಡರೆ ಅದನ್ನು ಕೊಲ್ಲುವುದು ಮುಖ್ಯ ಎಂಬರ್ಥದಲ್ಲಿ ಅವರು ನೀಡಿದ ಹೇಳಿಕೆಗೆ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹ, ಮಗ ಪ್ರಿಯಾಂಕ್ ಖರ್ಗೆಗೆ ಆರ್ಎಸ್ಎಸ್ ಬಗ್ಗೆ ಇರುವ ದ್ವೇಷದ ಹುಚ್ಚು ಇದೀಗ ತಂದೆ ಮಲ್ಲಿಕಾರ್ಜುನ ಖರ್ಗೆಯವರಿಗೂ ಅಂಟಿಕೊಂಡಿದೆ ಎಂದು ವ್ಯಂಗ್ಯವಾಡಿದ್ದಾರೆ. ಆರ್ಎಸ್ಎಸ್ ಅನ್ನು ಬೈಯದಿದ್ದರೆ ಇವರಿಗೆ ಅನ್ನ ಅರಗುವುದಿಲ್ಲವೇ ಎಂದು ಪ್ರಶ್ನಿಸಿರುವ ಅವರು, ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿರುವವರು ಇಷ್ಟೊಂದು ಕೀಳುಮಟ್ಟದ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದು ಶೋಭೆಯಲ್ಲ ಎಂದಿದ್ದಾರೆ.
ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಹತಾಶರಾಗಿ ಖರ್ಗೆ ಇಂತಹ ಹೇಳಿಕೆಗಳನ್ನು ನೀಡುತ್ತಿರಬಹುದು. ಒಂದು ರಾಷ್ಟ್ರೀಯ ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದುಕೊಂಡು, ಬಿಜೆಪಿ ಮತ್ತು ಆರ್ಎಸ್ಎಸ್ ಅನ್ನು ವಿಷ ಸರ್ಪಕ್ಕೆ ಹೋಲಿಸಿ, ಮುಸಲ್ಮಾನರನ್ನು ಪ್ರಚೋದನೆ ಮಾಡುವ ಕೆಲಸವನ್ನು ಖರ್ಗೆ ಮಾಡುತ್ತಿದ್ದಾರೆ. ಇದು ಅತ್ಯಂತ ಆಕ್ಷೇಪಾರ್ಹ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಪ್ರಸ್ತಾಪಿಸಿದ ಪ್ರತಾಪ್ ಸಿಂಹ, ಮುಸ್ಲಿಂ ಮತದಾರರನ್ನು ಓಲೈಕೆ ಮಾಡಲು ಸಿದ್ದರಾಮಯ್ಯ ಅವರು ಏನೆಲ್ಲಾ ಮಾಡುತ್ತಾರೆ ಎಂದು ನಾವೆಲ್ಲರೂ ಭಾವಿಸಿದ್ದೆವು. ಆದರೆ ಈಗ ನಿಮ್ಮ ಹೇಳಿಕೆಗಳನ್ನು ನೋಡಿದರೆ, ಸಿದ್ದರಾಮಯ್ಯ ಅವರಿಗಿಂತ ನೀವು ಎರಡು ಪಟ್ಟು ಹೆಚ್ಚಾಗಿ ಮುಸ್ಲಿಮರನ್ನು ಓಲೈಸಲು ಹೋಗಿ ಇಂತಹ ಕೆಟ್ಟ ಹೇಳಿಕೆ ನೀಡುತ್ತಿದ್ದೀರಿ. ಸತ್ಯ ಹೇಳಬೇಕೆಂದರೆ ಸಿದ್ದರಾಮಯ್ಯ ಅವರೆ ನಿಮಗೆ ಹೋಲಿಸಿದರೆ ಉತ್ತಮ ಎಂದು ಲೇವಡಿ ಮಾಡಿದ್ದಾರೆ.
ಖರ್ಗೆಯವರ ಈ ಹೇಳಿಕೆಯು ಕಾಂಗ್ರೆಸ್ ಪಕ್ಷದ ಹತಾಶೆಯನ್ನು ಎತ್ತಿ ತೋರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ವಿವಾದ ಮತ್ತಷ್ಟು ರಾಜಕೀಯ ತಿರುವು ಪಡೆಯುವ ಸಾಧ್ಯತೆ ದಟ್ಟವಾಗಿದೆ.







