ಪ್ರಜಾಪ್ರಭುತ್ವದಲ್ಲಿ ವಾಕ್ ಸ್ವಾತಂತ್ರ್ಯವಿದೆ ಎಂಬ ಒಂದೇ ಕಾರಣಕ್ಕೆ ದೇಶದ ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ಗಣ್ಯವ್ಯಕ್ತಿಗಳ ತಂದೆ ತಾಯಿ ಮತ್ತು ಕುಟುಂಬದವರ ಬಗ್ಗೆ ಅತ್ಯಂತ ಕೀಳಾಗಿ ಮಾತನಾಡುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ವಿಕೃತಿ ಮೆರೆಯುವವರ ಸಂಖ್ಯೆ ಮಿತಿಮೀರಿದೆ. ಯಾರು ಏನು ಬೇಕಾದರೂ ಮಾತನಾಡಬಹುದು, ನಮ್ಮನ್ನು ಕೇಳುವವರು ಯಾರು ಎಂಬ ಅಹಂಕಾರದಲ್ಲಿ ತೇಲುವವರಿಗೆ ಉತ್ತರ ಪ್ರದೇಶ ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಾಯಿಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದ ಬಿಹಾರ ಮೂಲದ ಮೌಲ್ವಿಯೊಬ್ಬ ಅರೆಸ್ಟ್ ಆಗಿದ್ದು, ಇದೀಗ ಜೈಲು ಕಂಬಿ ಎಣಿಸುತ್ತಾ ಪಶ್ಚಾತ್ತಾಪ ಪಡುತ್ತಿದ್ದಾನೆ.
ಉತ್ತರ ಪ್ರದೇಶ ಪೊಲೀಸ್ ಪಡೆಯ ವಿಶೇಷ ಕಾರ್ಯಪಡೆ ಕಾರ್ಯಾಚರಣೆ ನಡೆಸಿ ಬಿಹಾರದ ಮೌಲ್ವಿ ಮೌಲಾನಾ ಅಬ್ದುಲ್ ಸಲೀಂ ಚತುರ್ವೇದಿ ಯಾನೆ ಖಾಸ್ಮಿಯನ್ನು ಹೆಡೆಮುರಿ ಕಟ್ಟಿದೆ. ನಿನ್ನೆಯವರೆಗೂ ವೇದಿಕೆಗಳ ಮೇಲೆ ಉದ್ರೇಕಕಾರಿಯಾಗಿ ಭಾಷಣ ಮಾಡುತ್ತಿದ್ದ ಈತ, ಪೊಲೀಸರ ಅತಿಥಿಯಾಗುತ್ತಿದ್ದಂತೆಯೇ ತನ್ನ ವರಸೆ ಬದಲಿಸಿದ್ದಾನೆ. ಇದೀಗ ತನ್ನ ತಪ್ಪಿನ ಅರಿವಾಗಿದೆ, ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ ಎಂದು ಸಾರ್ವಜನಿಕರ ಮುಂದೆ ಕೈಮುgridು ಬೇಡಿಕೊಳ್ಳುವ ಸ್ಥಿತಿಗೆ ತಲುಪಿದ್ದಾನೆ.
ಘಟನೆಯ ಹಿನ್ನೆಲೆ ಮತ್ತು ಜನಾಕ್ರೋಶ
ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಈ ಮೌಲಾನಾ ಅಬ್ದುಲ್ ಸಲೀಂ ಖಾಸ್ಮಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಬಿಹಾರದ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುವ ಭರದಲ್ಲಿ ಈತ ನೇರವಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ತಾಯಿಯ ಬಗ್ಗೆ ಅತ್ಯಂತ ಅವಹೇಳನಕಾರಿ ಹಾಗೂ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ವಯಸ್ಸಾದ ತಾಯಂದಿರ ಬಗ್ಗೆ ಕೀಳಾಗಿ ಮಾತನಾಡುವ ಈತನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಮಾರ್ಚ್ 8ರಂದು ವಿಶ್ವ ಹಿಂದೂ ಪರಿಷತ್ ವಕೀಲರಾದ ಅಜಿತ್ ಪ್ರತಾಪ್ ಸಿಂಗ್ ಅವರು ಕೊಟ್ವಾಲಿ ನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದರು.
ಬಿಹಾರದಲ್ಲಿ ಅಡಗಿದ್ದವನಿಗೆ ಯುಪಿ ಪೊಲೀಸರ ಬಿಸಿ
ದೂರು ದಾಖಲಿಸಿಕೊಂಡ ಉತ್ತರ ಪ್ರದೇಶದ ಎಸ್‌ಟಿಎಫ್ ಅಧಿಕಾರಿಗಳು ಆರೋಪಿಗಾಗಿ ತೀವ್ರ ಶೋಧ ಆರಂಭಿಸಿದ್ದರು. ಖಚಿತ ಮಾಹಿತಿ ಮೇರೆಗೆ ಬಿಹಾರದ ಪೂರ್ಣಿಯಾ ಜಿಲ್ಲೆಗೆ ದಿಢೀರ್ ದಾಳಿ ನಡೆಸಿದ ಅಧಿಕಾರಿಗಳು ಆತನನ್ನು ಬಂಧಿಸಿ, ತಡರಾತ್ರಿ ಉತ್ತರ ಪ್ರದೇಶದ ಬಹ್ರೈಚ್‌ಗೆ ಕರೆತಂದರು. ತೀವ್ರ ವಿಚಾರಣೆಯ ನಂತರ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಕೋರ್ಟ್ ಅಗತ್ಯ ಕಾನೂನು ಪ್ರಕ್ರಿಯೆಗಳ ನಂತರ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿ ಜೈಲಿಗೆ ಕಳುಹಿಸಿದೆ.
ಭಂಡತನ ಬಿಟ್ಟು ಸಾರ್ವಜನಿಕವಾಗಿ ಕ್ಷಮೆ ಕೇಳಿದ ಮೌಲ್ವಿ
ಪೊಲೀಸರ ಬಲೆಗೆ ಬೀಳುವ ಮುನ್ನ ಮೆರೆಯುತ್ತಿದ್ದ ಮೌಲಾನಾ, ಬಂಧನದ ನಂತರ ಹತಾಶನಾಗಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ಕೊಟ್ವಾಲಿ ನಗರದ ಪೊಲೀಸರ ಎದುರು ತನ್ನ ತಪ್ಪನ್ನು ಒಪ್ಪಿಕೊಂಡು ವಿಡಿಯೋ ಮೂಲಕ ಸಾರ್ವಜನಿಕ ಕ್ಷಮೆಯಾಚಿಸಿದ್ದಾನೆ.
ನಾನು ನನ್ನ ಅಪರಾಧವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ. 2024ರ ಮೇ 5ರಂದು ಬಿಹಾರದ ಭಾಗಲ್ಪುರ ಜಿಲ್ಲೆಯ ಕೊಳೆಗೇರಿಯಲ್ಲಿ ನಡೆದ ಶೈಕ್ಷಣಿಕ ಜಾಗೃತಿ ಸಮಾವೇಶದಲ್ಲಿ ನಾನು ಭಾಷಣ ಮಾಡುವಾಗ ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ತಾಯಿಯ ಬಗ್ಗೆ ಕೆಲವು ಅಸಭ್ಯ ಪದಗಳನ್ನು ಬಳಸಿದ್ದೆ. ಆ ರೀತಿ ನಾನು ಖಂಡಿತಾ ಹೇಳಬಾರದಿತ್ತು. ನನ್ನ ತಪ್ಪಿನ ಅರಿವು ನನಗೀಗ ಸಂಪೂರ್ಣವಾಗಿ ಆಗಿದೆ. ನನ್ನ ಅಂತರಾಳದಿಂದ ನಾನು ಕ್ಷಮೆ ಕೇಳುತ್ತಿದ್ದೇನೆ. ವಿಶೇಷವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಿಗೆ ನಾನು ನೋವುಂಟು ಮಾಡಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸುವಂತೆ ವಿನಂತಿಸುತ್ತೇನೆ ಎಂದು ಆತ ಹೇಳಿದ್ದಾನೆ.
ಸಹಚರರಿಗೆ ಮೌಲ್ವಿಯ ಎಚ್ಚರಿಕೆ ಸಂದೇಶ
ಬಂಧನದ ಬಿಸಿ ತಟ್ಟಿದ ಬಳಿಕ ಬುದ್ಧಿ ಕಲಿತಿರುವ ಮೌಲ್ವಿ, ಭವಿಷ್ಯದಲ್ಲಿ ನನ್ನಿಂದ ಇಂತಹ ತಪ್ಪು ಎಂದಿಗೂ ಸಂಭವಿಸುವುದಿಲ್ಲ ಎಂದು ಭರವಸೆ ನೀಡಿದ್ದಾನೆ. ಅಷ್ಟೇ ಅಲ್ಲದೆ ತನ್ನ ಅನುಯಾಯಿಗಳು, ಸಹೋದ್ಯೋಗಿಗಳು ಮತ್ತು ದೇಶವಾಸಿಗಳಿಗೆ ಒಂದು ಸಂದೇಶವನ್ನು ನೀಡಿದ್ದು, ಯಾರ ಬಗ್ಗೆಯೂ ಕೀಳಾಗಿ ಅಥವಾ ಕೆಟ್ಟದ್ದಾಗಿ ಮಾತನಾಡಬೇಡಿ ಎಂದು ಬುದ್ಧಿವಾದ ಹೇಳಿದ್ದಾನೆ.
ಮಾತನಾಡುವ ಸ್ವಾತಂತ್ರ್ಯವಿದೆ ಎಂದು ಯಾರದೋ ತಾಯಂದಿರ ಬಗ್ಗೆ ನಾಲಿಗೆ ಹರಿಬಿಟ್ಟರೆ ಕಾನೂನು ತನ್ನದೇ ಆದ ರೀತಿಯಲ್ಲಿ ಉತ್ತರ ಕೊಡುತ್ತದೆ ಎಂಬುದಕ್ಕೆ ಈ ಘಟನೆ ಸ್ಪಷ್ಟ ನಿದರ್ಶನವಾಗಿದೆ. ಜಾಲತಾಣಗಳಲ್ಲಿ ವಿಕೃತಿ ಮೆರೆಯುವವರಿಗೆ ಈ ಪ್ರಕರಣ ತಕ್ಕ ಪಾಠವಾಗಿದೆ.







