ಕಲಬುರಗಿ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಂಸತ್ತಿನಲ್ಲಿ ಬಿಜೆಪಿ ಸಂಖ್ಯಾಬಲದ ಮೆಜಾರಿಟಿ ಹೊಂದಿದೆ. ಹೀಗಿರುವಾಗ ದಲಿತರು, ಅಲ್ಪಸಂಖ್ಯಾತರು ಮತ್ತು ಆದಿವಾಸಿಗಳು ನಮ್ಮ ದೇಶದವರಲ್ಲ ಎಂದು ಅವರು ಬಹಿರಂಗವಾಗಿ ಘೋಷಿಸಲಿ ಎಂದು ಖರ್ಗೆ ಕಟುವಾಗಿ ಸವಾಲು ಹಾಕಿದ್ದಾರೆ.
ಬಿಜೆಪಿಯ ಇಬ್ಬಗೆ ನೀತಿಯನ್ನು ಲೇವಡಿ ಮಾಡಿದ ಸಚಿವರು, ವಿದೇಶಿ ವ್ಯವಹಾರಗಳ ವಿಚಾರದಲ್ಲಿ ಬಿಜೆಪಿ ನಾಯಕರು ದ್ವಂದ್ವ ನಿಲುವು ಹೊಂದಿದ್ದಾರೆ ಎಂದು ಆರೋಪಿಸಿದರು. ಪ್ರಧಾನಿ ಮೋದಿಯವರು ಯುಎಇ ನಾಯಕರನ್ನು ಅಪ್ಪಿಕೊಳ್ಳುತ್ತಾರೆ. ನಮಗೆ ಅವರಿಂದ ಪೆಟ್ರೋಲ್ ಬೇಕು, ಯೂರಿಯಾ ಬೇಕು, ಅಷ್ಟೇ ಏಕೆ ಕೇಸರಿ ಕೂಡ ಹೆಚ್ಚಿನ ಪ್ರಮಾಣದಲ್ಲಿ ಮುಸ್ಲಿಂ ರಾಷ್ಟ್ರವಾದ ಯುಎಇ ಇಂದಲೇ ಬರುತ್ತದೆ. ಹಾಗಿದ್ದರೆ ಮುಸ್ಲಿಂ ರಾಷ್ಟ್ರಗಳ ಜೊತೆಗಿನ ಎಲ್ಲಾ ವ್ಯಾಪಾರ ವ್ಯವಹಾರಗಳನ್ನು ನಿಲ್ಲಿಸುವ ಧೈರ್ಯ ಬಿಜೆಪಿ ತೋರಿಸಲಿ ಎಂದು ಟಾಂಗ್ ನೀಡಿದರು. ಕೊರೋನಾ ಸಂಕಷ್ಟದ ಸಮಯದಲ್ಲಿ ಅಮಿತ್ ಶಾ ಅವರ ಪುತ್ರ ಐಪಿಎಲ್ ನಡೆಸಿದ್ದು ಕೂಡ ಇದೇ ದುಬೈನಲ್ಲಿ ಎಂಬುದನ್ನು ಮರೆಯಬಾರದು ಎಂದು ಅವರು ಕುಟುಕಿದರು.
ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ವಿಷಸರ್ಪ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪ್ರಿಯಾಂಕ್, ಆರ್ಎಸ್ಎಸ್ ಸಂಘಟನೆಗೆ ತಾಕತ್ತಿದ್ದರೆ ತನ್ನ ಸ್ವಂತ ಲೆಟರ್ ಹೆಡ್ ಬಳಸಿ ದೂರು ದಾಖಲಿಸಲಿ. ಮೋಹನ್ ಭಾಗವತ್ ಅವರು ತಮಗೆ ಯಾರ ಸಹಾಯವೂ ಬೇಡ ಎಂದು ಹೇಳಿದ್ದಾರೆ, ಹಾಗಾಗಿ ಅವರೇ ನೇರವಾಗಿ ದೂರು ನೀಡಲಿ. ವಿಷಸರ್ಪ ಎದುರಾದಾಗ ಹಾಲು ಎರೆಯಲು ಸಾಧ್ಯವೇ? ಸರ್ವರಿಗೂ ಸಮಪಾಲು, ಸಮಬಾಳು ಎಂಬುದು ನಮ್ಮ ಸಿದ್ಧಾಂತ. ಆದರೆ ಸಂವಿಧಾನ ವಿರೋಧಿ ಸಿದ್ಧಾಂತ ಹೊಂದಿರುವವರ ವಿರುದ್ಧ ನಮ್ಮ ಹೋರಾಟ ನಿರಂತರ ಎಂದು ಸ್ಪಷ್ಟಪಡಿಸಿದರು.
ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವಿರುದ್ಧವೂ ಕಿಡಿಕಾರಿದ ಪ್ರಿಯಾಂಕ್ ಖರ್ಗೆ, ಸೋಲಿನ ಭೀತಿಯಿಂದ ಶರ್ಮಾ ಅವರು ರಾಹುಲ್ ಗಾಂಧಿ ಮತ್ತು ಖರ್ಗೆ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಶರ್ಮಾ ಅವರ ಪತ್ನಿಯ ಹೆಸರಲ್ಲಿ ಮೂರು ಪಾಸ್‌ಪೋರ್ಟ್‌ಗಳಿವೆ ಎಂಬ ಆರೋಪವಿದೆ, ಅಂತಹವರು ನಮಗೆ ದೇಶಭಕ್ತಿಯ ಪಾಠ ಹೇಳಬೇಕಿಲ್ಲ. ಆಸ್ಸಾಂ ಮೂಲಕ ಬಾಂಗ್ಲಾದೇಶದವರು ನುಸುಳುತ್ತಿದ್ದಾರೆ ಎಂದರೆ ಅಲ್ಲಿನ ಮುಖ್ಯಮಂತ್ರಿ ಮತ್ತು ದೇಶದ ಗೃಹ ಸಚಿವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಇನ್ನು ಸಂಸದ ಪ್ರತಾಪ್ ಸಿಂಹ ಅವರನ್ನು ನಡೆಯದ ನಾಣ್ಯ ಎಂದು ಕರೆದ ಸಚಿವರು, ಮೈಸೂರಿನಲ್ಲೇ ಬೆಲೆ ಇಲ್ಲದ ಅವರ ಬಗ್ಗೆ ಇಲ್ಲಿ ಚರ್ಚೆ ಅನಗತ್ಯ. ಸಂಸತ್ತಿನಲ್ಲಿ ಸ್ಮೋಕ್ ಬಾಂಬ್ ಹಾಕಿದವರಿಗೆ ಪಾಸ್ ನೀಡಿದ್ದು ಯಾರು? ಪ್ರತಾಪ್ ಸಿಂಹ ಅವರ ಮೊಬೈಲ್ ಸೀಜ್ ಆದಾಗ ಏನಿತ್ತು ಎಂಬುದು ಮೊದಲು ಬಹಿರಂಗವಾಗಲಿ ಎಂದು ಸವಾಲು ಹಾಕಿದರು.
ಕೊನೆಯದಾಗಿ, ತಮ್ಮನ್ನು ಜೈಲಿಗೆ ಹಾಕುತ್ತೇವೆ ಎಂದಿದ್ದ ಛಲವಾದಿ ನಾರಾಯಣಸ್ವಾಮಿ ಅವರಿಗೆ ತಿರುಗೇಟು ನೀಡಿದ ಪ್ರಿಯಾಂಕ್, ತಾಕತ್ತಿದ್ದರೆ ನಮ್ಮನ್ನು ಬಂಧಿಸಲಿ. ನಾವು ಬಸವಣ್ಣನವರ ಸಿದ್ಧಾಂತ ಪಾಲಿಸುವವರು. ನಾರಾಯಣಸ್ವಾಮಿ ಅವರು ಕಾಂಗ್ರೆಸ್‌ನಲ್ಲಿದ್ದಾಗ ಇದೇ ತತ್ವ ಹೊಂದಿದ್ದರು, ಆದರೆ ಯಾವಾಗ ಬಿಜೆಪಿಗೆ ಹೋಗಿ ಆರ್ಎಸ್ಎಸ್ ಚಡ್ಡಿ ತೊಟ್ಟರೋ ಅಂದಿನಿಂದ ಅವರ ವಿಚಾರಗಳೇ ಬದಲಾಗಿವೆ ಎಂದು ವ್ಯಂಗ್ಯವಾಡಿದರು.







