ಶಾಸಕ ಯು.ಟಿ ಖಾದರ್ ಗನ್ ಮ್ಯಾನ್ ಗೆ ಕೊರೊನಾ ಸೋಂಕು
ಮಂಗಳೂರು, ಜುಲೈ 9: ಮಾಜಿ ಸಚಿವ ಯು.ಟಿ ಖಾದರ್ ಅವರ ಗನ್‍ಮ್ಯಾನ್ ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಉಳ್ಳಾಲ ಕ್ಷೇತ್ರದ ಕಾಂಗ್ರೆಸ್ ಶಾಸಕ ಯು.ಟಿ ಖಾದರ್ ಅವರ ಬೆಂಗಾವಲು ವಾಹನದಲ್ಲಿ ಕಾರ್ಯನಿರ್ವಹಿಸುತಿದ್ದ ಗನ್ ಮ್ಯಾನ್ ಗೆ ಕೊರೊನಾ ಸೋಂಕು ಪತ್ತೆಯಾಗಿದೆ.
ಗನ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಂಗಳೂರು ಡಿಎಆರ್ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಶಾಸಕ ಖಾದರ್ ಕೂಡ ಕೊರೋನಾ ಪರೀಕ್ಷೆಗೆ ಒಳಗಾದರು. ಅವರ ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಎಂದು ಬಂದಿದೆ.
ಮಾಹಿತಿಗಳ ಪ್ರಕಾರ ಕಳೆದ 10 ದಿನಗಳಿಂದ ಇವರು ರಜೆಯಲ್ಲಿ ಇದ್ದು, ಸಿಟಿ ಸ್ಪೆಷಲ್ ಬ್ರಾಂಚ್ (CSB) ಸಿಬ್ಬಂದಿ ಜೊತೆ ರಜೆಯಲ್ಲಿ ತನ್ನ ಊರಾದ ರಾಯಚೂರಿಗೆ ಹೋಗಿ ಬಂದಿದ್ದರು ಎನ್ನಲಾಗಿದೆ. ಜುಲೈ 6 ರಂದು ಕೊರೋನಾ ಪರೀಕ್ಷೆಗೆ ಒಳಪಡಿಸಿದ್ದು, ಬುಧವಾರ ಬಂದ ಪರೀಕ್ಷಾ ವರದಿ ಇಬ್ಬರಿಗೂ ಕೊರೊನಾ ಸೋಂಕು ತಗುಲಿರುವುದನ್ನು ಖಚಿತ ಪಡಿಸಿದೆ. ಅವರ ಜೊತೆ ಕಾರ್ಯನಿರ್ವಹಿಸುತ್ತಿದ್ದ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಇದೀಗ ಕ್ವಾರಂಟೈನ್ ಮಾಡಲಾಗಿದೆ.








