ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನ ಅತ್ಯಂತ ಮಹತ್ವದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಮತ್ತೊಮ್ಮೆ ತೀವ್ರ ನಿರಾಸೆ ಮೂಡಿಸಿದ್ದಾರೆ. ಕೇವಲ 7 ಎಸೆತಗಳನ್ನು ಎದುರಿಸಿ 9 ರನ್ ಗಳಿಸಿ ಪೆವಿಲಿಯನ್ ಸೇರುವ ಮೂಲಕ, ನಿರ್ಣಾಯಕ ಪಂದ್ಯದಲ್ಲಿ ತಂಡವನ್ನು ಆರಂಭಿಕ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಇವರ ಈ ಬೇಜವಾಬ್ದಾರಿಯುತ ಪ್ರದರ್ಶನ ಕಂಡು ಮೈದಾನದಲ್ಲಿದ್ದ ಹಾಗೂ ಟಿವಿ ಮುಂದೆ ಕುಳಿತಿದ್ದ ಕೋಟ್ಯಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವಾಂಖೆಡೆಯಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಸವಾಲು ಸ್ವೀಕರಿಸಿದ ಭಾರತ ತಂಡಕ್ಕೆ ಭದ್ರ ಬುನಾದಿ ಹಾಕಿಕೊಡುವ ಜವಾಬ್ದಾರಿ ಆರಂಭಿಕರ ಮೇಲಿತ್ತು. ಆದರೆ ಎರಡನೇ ಓವರ್ನಲ್ಲೇ ಟೀಂ ಇಂಡಿಯಾಗೆ ದೊಡ್ಡ ಆಘಾತ ಎದುರಾಯಿತು. ಇಂಗ್ಲೆಂಡ್ ತಂಡದ ಪಾರ್ಟ್-ಟೈಮ್ ಆಫ್ ಸ್ಪಿನ್ನರ್ ವಿಲ್ ಜಾಕ್ಸ್ ಅವರನ್ನು ಎದುರಿಸಿದ ಅಭಿಷೇಕ್, ಓವರ್ನ ಐದನೇ ಎಸೆತದಲ್ಲಿ ಮಿಡ್-ಆಫ್ನತ್ತ ಭರ್ಜರಿ ಬೌಂಡರಿ ಬಾರಿಸಿದ್ದರು. ಇದೇ ಉತ್ಸಾಹದಲ್ಲಿ ಮುಂದಿನ ಎಸೆತದಲ್ಲೂ ಅಂತಹದ್ದೇ ಬೃಹತ್ ಸಾಹಸಕ್ಕೆ ಕೈಹಾಕಿದರು. ಆದರೆ ಜಾಕ್ಸ್ ಚೆಂಡಿನ ವೇಗವನ್ನು ತಗ್ಗಿಸಿ ಹಾಕಿದ ತಂತ್ರವನ್ನು ಅರಿಯುವಲ್ಲಿ ವಿಫಲರಾದ ಅಭಿಷೇಕ್, ಗಾಳಿಯಲ್ಲಿ ಚೆಂಡನ್ನು ಹಾರಿಸಿ ಲಾಂಗ್ ಆನ್ನಲ್ಲಿದ್ದ ಫಿಲ್ ಸಾಲ್ಟ್ಗೆ ಅತ್ಯಂತ ಸುಲಭ ಕ್ಯಾಚ್ ನೀಡಿ ನಿರ್ಗಮಿಸಿದರು.
ಒಂದೆಡೆ ಮತ್ತೋರ್ವ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಅತ್ಯಂತ ಎಚ್ಚರಿಕೆಯಿಂದ ಬ್ಯಾಟ್ ಬೀಸುತ್ತಿದ್ದರೆ, ಅಭಿಷೇಕ್ ಶರ್ಮಾ ಅವರಿಗೆ ಸ್ಟ್ರೈಕ್ ಬದಲಾಯಿಸುವ ಬದಲು ಅನಗತ್ಯವಾಗಿ ದೊಡ್ಡ ಹೊಡೆತಕ್ಕೆ ಯತ್ನಿಸಿದ್ದು ಅಭಿಮಾನಿಗಳ ಕೋಪಕ್ಕೆ ತುಪ್ಪ ಸುರಿದಂತಾಗಿದೆ. ಕ್ರೀಸ್ನಲ್ಲಿ ಸ್ವಲ್ಪ ಸಮಯ ಕಳೆದು ಪಿಚ್ ಅರ್ಥಮಾಡಿಕೊಳ್ಳುವ ತಾಳ್ಮೆ ಅವರಲ್ಲಿ ಕಾಣಿಸಲಿಲ್ಲ ಎಂಬುದು ಕ್ರೀಡಾ ಪಂಡಿತರ ವಿಶ್ಲೇಷಣೆಯಾಗಿದೆ.
ದುರ್ಬಲರ ವಿರುದ್ಧ ಮಾತ್ರ ಸಿಡಿದೆದ್ದರೆ ಸಾಕಾ ಎಂದು ಪ್ರಶ್ನಿಸುತ್ತಿರುವ ಫ್ಯಾನ್ಸ್
ಈ ಟೂರ್ನಿಯುದ್ದಕ್ಕೂ ಅಭಿಷೇಕ್ ಶರ್ಮಾ ಅವರ ಫಾರ್ಮ್ ತೀರಾ ಕಳಪೆಯಾಗಿದೆ. ಟಿ20 ವಿಶ್ವಕಪ್ನಂತಹ ಬೃಹತ್ ವೇದಿಕೆಯಲ್ಲಿ ಆಡಿದ 7 ಪಂದ್ಯಗಳಿಂದ ಅವರು ಕಲೆಹಾಕಿದ್ದು ಕೇವಲ 89 ರನ್ ಮಾತ್ರ. ಈ 89 ರನ್ಗಳಲ್ಲಿ 55 ರನ್ಗಳು ದುರ್ಬಲ ಜಿಂಬಾಬ್ವೆ ವಿರುದ್ಧ ಬಂದಿವೆ ಎಂಬುದೇ ವಿಪರ್ಯಾಸ. ಉಳಿದ 6 ಇನ್ನಿಂಗ್ಸ್ಗಳಲ್ಲಿ ಒಮ್ಮೆಯೂ 20 ರನ್ಗಳ ಗಡಿ ದಾಟಿಲ್ಲ ಎನ್ನುವುದು ಅವರ ಕಳಪೆ ಪ್ರದರ್ಶನಕ್ಕೆ ಕನ್ನಡಿ ಹಿಡಿಯುತ್ತದೆ.
ಟೂರ್ನಿಯ ಆರಂಭಿಕ ಮೂರು ಪಂದ್ಯಗಳಲ್ಲಿ ಖಾತೆ ತೆರೆಯುವ ಮುನ್ನವೇ ಔಟಾಗಿ ಪೆವಿಲಿಯನ್ ಪೆರೇಡ್ ನಡೆಸಿದ್ದ ಅವರು, ಸೂಪರ್-8 ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 15 ರನ್ ಗಳಿಸಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲೂ 10 ರನ್ಗೆ ಔಟಾಗಿ ಕೈಕೊಟ್ಟಿದ್ದರು. ಇದೀಗ ಅತಿಮುಖ್ಯವಾದ ಸೆಮಿಫೈನಲ್ ಪಂದ್ಯದಲ್ಲೂ ಕೇವಲ 9 ರನ್ ಗಳಿಸಿರುವುದು ತಂಡದಲ್ಲಿ ಅವರ ಸ್ಥಾನದ ಬಗ್ಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಮೂಡುವಂತೆ ಮಾಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಅಭಿಷೇಕ್ ವಿರುದ್ಧ ಟೀಕೆಗಳ ಸುರಿಮಳೆಯೇ ಹರಿಯುತ್ತಿದೆ. ಇವರು ನಂಬರ್ 1 ಬ್ಯಾಟರ್ ಅಲ್ಲ, ಬರೀ ಫ್ರಾಡ್ ಎಂದು ಅಭಿಮಾನಿಗಳು ಜರಿದಿದ್ದಾರೆ. ಒತ್ತಡದ ಪಂದ್ಯಗಳಲ್ಲಿ ನಿಂತು ಆಡುವ ಮನಸ್ಥಿತಿ ಮತ್ತು ತಂತ್ರಗಾರಿಕೆ ಅಭಿಷೇಕ್ ಶರ್ಮಾ ಅವರಿಗೆ ಇನ್ನೂ ಕರಗತವಾಗಿಲ್ಲ ಎಂಬುದು ಈ ವಿಶ್ವಕಪ್ನಿಂದ ಸ್ಪಷ್ಟವಾಗಿದೆ.







