ADVERTISEMENT
Monday, March 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅಹಂಕಾರದ ಪತನ.. ಆತ್ಮವಿಶ್ವಾಸದ ಉದಯ..! ಲಕ್ಷ್ಮಣ್ -ದ್ರಾವಿಡ್ ಮಹೋನ್ನತ ಇನಿಂಗ್ಸ್ ಗೆ ಬೆಳ್ಳಿ ಗರಿಯ ಹರುಷ..!

admin by admin
March 16, 2026
in Newsbeat, Sports, ಕ್ರಿಕೆಟ್
vvs lakshman and rahul dravid

vvs lakshman and rahul dravid

Share on FacebookShare on TwitterShare on WhatsappShare on Telegram

ಅಹಂಕಾರದ ಪತನ.. ಆತ್ಮವಿಶ್ವಾಸದ ಉದಯ..! ಲಕ್ಷ್ಮಣ್ -ದ್ರಾವಿಡ್ ಮಹೋನ್ನತ ಇನಿಂಗ್ಸ್ ಗೆ ಬೆಳ್ಳಿ ಗರಿಯ ಹರುಷ..!

ಅದು 2001. ಮಾರ್ಚ್ 15. ಭಾರತ – ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಐದನೇ ದಿನ. ಹೂಗ್ಲಿ ನದಿಯ ಸನೀಹದಲ್ಲಿರುವ ಭಾರತದ ಕ್ರಿಕೆಟ್ ಕಾಶಿ ಕೋಲ್ಕತ್ತಾದ ಈಡನ್ ಗಾರ್ಡನ್ ಅಂಗಣದಲ್ಲಿ ಇಳಿ ಸಂಜೆಯ ವೇಳೆ ತಂಪಾದ ಗಾಳಿ ಬೀಸುತ್ತಿತ್ತು. ಇತ್ತ ಟೀಮ್ ಇಂಡಿಯಾ ಹುಡುಗರ ಗೆಲುವಿನ ನಗೆ ಘಮ ಘಮಿಸುವ ಮಲ್ಲಿಗೆಯಂತೆ ಪಸರಿಸುತ್ತಿತ್ತು. ಅತ್ತ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹರ್ಷೋದ್ಗಾರ ಝೇಂಕಾರದಂತೆ ಇಡೀ ವಿಶ್ವ ಕ್ರಿಕೆಟ್‍ನಲ್ಲಿ ಮಾರ್ದನಿಸುತ್ತಿತ್ತು.

Related posts

ಇರಾನ್‌ನ 45 ನಾವಿಕರ ಮೃತದೇಹ ಹಸ್ತಾಂತರ

ಇರಾನ್‌ನ 45 ನಾವಿಕರ ಮೃತದೇಹ ಹಸ್ತಾಂತರ

March 14, 2026
ಹೋಟೆಲ್ ಬಿಲ್‌ನಲ್ಲಿ GST ಜೊತೆ ‘ಗ್ಯಾಸ್ ಶುಲ್ಕ’ ಸೇರಿಕೆ!

ಹೋಟೆಲ್ ಬಿಲ್‌ನಲ್ಲಿ GST ಜೊತೆ ‘ಗ್ಯಾಸ್ ಶುಲ್ಕ’ ಸೇರಿಕೆ!

March 14, 2026

ಹೌದು, ಸರಿಯಾಗಿ 25 ವರ್ಷಗಳ ಹಿಂದೆ
ವಿಶ್ವ ಕ್ರಿಕೆಟ್ ಚರಿತ್ರೆಯಲ್ಲಿ ಟೀಮ್ ಇಂಡಿಯಾ ಅಂತಹುದ್ದೊಂದು ಐತಿಹಾಸಿಕ ಗೆಲುವು ದಾಖಲಿಸುತ್ತೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ. ಅದು ಕೂಡ ಆಸ್ಟ್ರೇಲಿಯಾ ಎಂಬ ರಣಬೇಟೆಗಾರ ತಂಡದ ವಿರುದ್ಧ. ಯಾಕಂದ್ರೆ ಅವತ್ತಿನ ಆಸ್ಟ್ರೇಲಿಯಾ ಟೀಮ್ ಅಂದ್ರೆ ಊಹೆ ಕೂಡ ಮಾಡಲು ಅಸಾಧ್ಯವಾಗಿದ್ದ ತಂಡವಾಗಿತ್ತು. ಆಸ್ಟ್ರೇಲಿಯಾ ವಿರುದ್ಧ ಆಡುವುದು ಅಂದ್ರೆ ಎದುರಾಳಿ ತಂಡಗಳಿಗೆ ಸೋಲು ಕಟ್ಟಿಟ್ಟ ಬುತ್ತಿಯಾಗಿತ್ತು. ಕಾರಣ ಸ್ಟೀವ್ ವಾ ನಾಯಕತ್ವದ ಆಸೀಸ್ ತಂಡದ ದರ್ಬಾರು ಆಗ ಹಾಗೇನೇ ಇತ್ತು.

ಸತತ 16 ಟೆಸ್ಟ್ ಪಂದ್ಯಗಳನ್ನು ಗೆದ್ದು ಭಾರತದ ಕ್ರಿಕೆಟ್ ಕಾಶಿ ಕೊಲ್ಕತ್ತಾದ ಈಡನ್ ಗಾರ್ಡನ್‍ನಲ್ಲೂ ಗೆಲುವು ನಮ್ಮದೇ ಅಂತ ಬೀಗುತ್ತಿದ್ದ ಆಸ್ಟ್ರೇಲಿಯನ್ನ
ರಿಗೆ ಮಾಸ್ಟರ್ ಸ್ಟ್ರೋಕ್ ಕೊಟ್ಟಿರುವುದು ಆಗಿನ ಯಂಗ್ ಆಂಡ್ ಎನರ್ಜಿಟಿಕ್ ಕ್ಯಾಪ್ಟನ್ ಸೌರವ್ ಗಂಗೂಲಿ ಸಾರಥ್ಯದ ಟೀಮ್ ಇಂಡಿಯಾ.

ಬಹುಶಃ ಈ ಸೋಲು ಆಗಿನ ಆಸ್ಟ್ರೇಲಿಯಾ ಆಟಗಾರರಿಗೆ ಕನಸಿನಲ್ಲಿ ಈಗಲೂ ಕಾಡುತ್ತಿರಬಹುದು.. ಗೆದ್ದೇ ಗೆಲ್ಲುತ್ತೇವೆ ಎಂಬ ಅಹಂಕಾರದಿಂದ ಟೀಮ್ ಇಂಡಿಯಾಗೆ ಫಾಲೋ ಆನ್ ನೀಡಿದ್ದ ಆಸ್ಟ್ರೇಲಿಯನ್ನರು ಮೈದಾನದಲ್ಲಿ ಚಡಪಡಿಸುತ್ತಿದ್ದ ಪರಿಯನ್ನು ಕ್ರಿಕೆಟ್ ಜಗತ್ತು ಎಂದೂ ಮರೆಯಲು ಸಾಧ್ಯವಿಲ್ಲ. ಯಾಕಂದ್ರೆ ಈ ಪಂದ್ಯದಲ್ಲಿ ಆಸೀಸ್ ಆಟಗಾರರು ಸೋಲುತ್ತೇವೆ ಎಂದು ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ. ಬಲಿಷ್ಠ ತಂಡ, ಸಮರ್ಥ ನಾಯಕತ್ವ..ಆಕ್ರಮಣಕಾರಿ ಪ್ರವೃತ್ತಿ, ದಿಟ್ಟ ಹೋರಾಟ, ಎದುರಾಳಿ ತಂಡಗಳನ್ನು ಮಾನಸಿಕವಾಗಿ ಕುಗ್ಗಿಸುವಂತಹ ತಂತ್ರ ಹೀಗೆ ಆಟದ ಎಲ್ಲಾ ವಿಭಾಗದಲ್ಲೂ ಆಸ್ಟ್ರೇಲಿಯ ತಂಡದ ಸಾಮಥ್ರ್ಯ ಬೇರೆ ತಂಡಗಳಿಗಿಂತ ಭಿನ್ನವಾಗಿತ್ತು.

ಆದ್ರೆ ಆಸ್ಟ್ರೇಲಿಯನ್ನರ ಗೆಲುವಿನ ಕನಸನ್ನು ಭಗ್ನಗೊಳಿಸಿದ್ದು ಟೀಮ್ ಇಂಡಿಯಾದ ಇಬ್ಬರು ಕಲಾತ್ಮಕ ದಾಂಡಿಗರು. ಕ್ರಿಕೆಟ್‍ನ ಬುದ್ಧ ಖ್ಯಾತಿಯ ರಾಹುಲ್ ದ್ರಾವಿಡ್ ಮತ್ತು ವೆರಿ ವೆರಿ ಸ್ಪೇಷಲ್ ಖ್ಯಾತಿಯ ವಿವಿಎಸ್ ಲಕ್ಷ್ಮಣ್ ಅವರ ಮ್ಯಾರಾಥನ್ ಇನಿಂಗ್ಸ್. ಟೆಸ್ಟ್ ಕ್ರಿಕೆಟ್ ಅನ್ನು ಅದರಲ್ಲೂ ಒತ್ತಡದ ಜೊತೆಗೆ ವಿಶ್ವದ ಬಲಿಷ್ಠ ತಂಡದ ವಿರುದ್ಧ ಹೀಗೂ ಆಡಬಹುದು ತೋರಿಸಿಕೊಟ್ಟವರು ಲಕ್ಷ್ಮಣ್ ಮತ್ತು ದ್ರಾವಿಡ್. ವಿಶ್ವ ಚಾಂಪಿಯನ್ನರು ಎಂದು ಹೆಮ್ಮೆಯಿಂದ ಬೀಗುತ್ತಿದ್ದ ಆಸ್ಟ್ರೇಲಿಯನ್ನರ ಗರ್ವಭಂಗ ಮಾಡಿದ್ದ ಟೀಮ್ ಇಂಡಿಯಾದ ಸಂಘಟಿತ ಹೋರಾಟವನ್ನು ಕ್ರಿಕೆಟ್ ಜಗತ್ತು ಎಂದೆಂದಿಗೂ ಮರೆಯೋಕೆ ಸಾಧ್ಯನೇ ಇಲ್ಲ. ಅಂದಿನ ಕಿಚ್ಚಿನ ಹೋರಾಟದ ಪ್ರತಿಫಲವನ್ನು ಇಂದು ಟೀಮ್ ಇಂಡಿಯಾ ಅನುಭವಿಸುತ್ತಿದೆ. ಹಾಗಾಗಿಯೇ ಟೀಮ್ ಇಂಡಿಯಾ ಇಂದು ವಿಶ್ವ ಕ್ರಿಕೆಟ್‍ನ ಅಸಾಮಾನ್ಯ ತಂಡವಾಗಿ ಹೊರಹೊಮ್ಮಿದೆ.

ಅದಿರಲಿ, ಈಗ ಐತಿಹಾಸಿಕ ಪಂದ್ಯದ ಬಗ್ಗೆ ಸಿಂಹಾವಲೋಕನ ಮಾಡೋಣ. 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೈಕೆಲ್ ಸ್ಲೇಟರ್ (42 ರನ್) ಹಾಗೂ ಶತಕ ವಂಚಿತ ಮ್ಯಾಥ್ಯೂ ಹೇಡನ್ (97 ರನ್) ಮೊದಲ ವಿಕೆಟ್‍ಗೆ 103 ರನ್ ಪೇರಿಸಿದ್ರು. ಹಾಗೇ ಜಸ್ಟಿನ್ ಲ್ಯಾಂಜರ್ (58) ನಂತ್ರ ಸ್ಟೀವ್ ವಾ (110) ಶತಕ ದಾಖಲಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದ್ರು. ಇನ್ನುಳಿದಂತೆ ಮಾರ್ಕ್ ವಾ (22) ರಿಕಿ ಪಾಂಟಿಂಗ್ (6), ಗಿಲ್ ಕ್ರಿಸ್ಟ್ (0), ಶೇನ್ ವಾರ್ನ್ (0), ಮೈಕೆಲ್ ಕಾಸ್ಪ್ರೋವಿಚ್ (7) ಅಲ್ಪ ಮೊತ್ತಕ್ಕೆ ಪೆವಿಲಿಯನ್‍ಗೆ ಹಿಂತಿರುಗಿದ್ರೂ ಜೇಸನ್ ಗಿಲೆಸ್ಪಿ (46) ಮತ್ತು ಮೆಕ್ ಗ್ರಾಥ್ (ಅಜೇಯ 21) ಟೀಮ್ ಇಂಡಿಯಾ ಬೌಲರ್‍ಗಳನ್ನು ಕಾಡಿರುವುದರಿಂದ ಆಸೀಸ್ ಮೊದಲ ಇನಿಂಗ್ಸ್‍ನಲ್ಲಿ 445 ರನ್ ದಾಖಲಿಸಿ ಮೇಲುಗೈ ಸಾಧಿಸಿತ್ತು.

ಈ ನಡುವೆ ಭರವಸೆಯ ಸ್ಪಿನ್ನರ್ ಹರ್ಭಜನ್ ಸಿಂಗ್ ಏಳು ವಿಕೆಟ್ ಉರುಳಿಸಿ ಟೀಮ್ ಇಂಡಿಯಾದ ಟರ್ಬನೇಟರ್ ಆಗಿ ಹೊರಹೊಮ್ಮಿದ್ರು. ಜಹೀರ್ ಖಾನ್ ಎರಡು ವಿಕೆಟ್ ಉರುಳಿಸಿ ಆಸ್ಟ್ರೇಲಿಯನ್ನರ ರನ್ ಓಟಕ್ಕೆ ಸ್ವಲ್ಪ ಮಟ್ಟಿಗೆ ಕಡಿವಾಣ ಹಾಕಿದ್ರು.

ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ್ದ ಟೀಮ್ ಇಂಡಿಯಾ 58.1 ಓವರ್‍ಗಳಲ್ಲಿ 2.93 ಸರಾಸರಿಯಲ್ಲಿ 171 ರನ್‍ಗೆ ಆಲೌಟ್ ಆಯ್ತು. ಭಾರತದ ಪರ ಲಕ್ಷ್ಮಣ್ (59) ಅರ್ಧಶತಕ ದಾಖಲಿಸಿ ಆಸೀಸ್ ದಾಳಿಗೆ ಕೊಂಚ ಮಟ್ಟಿಗೆ ಪ್ರತಿರೋಧ ಒಡ್ಡಿದ್ದರು. ಆದ್ರೆ, ರಾಹುಲ್ (25), ಗಂಗೂಲಿ (23), ಶಿವಸುಂದರ್ ದಾಸ್ (20), ಸಚಿನ್ (10) ನಿರಾಸೆ ಮೂಡಿಸಿದ್ದರು.
ಗ್ಲೇನ್ ಮೆಕ್‍ಗ್ರಾಥ್ (4ವಿಕೆಟ್) ಹಾಗೂ ಜೇಸನ್ ಗಿಲೆಸ್ಪಿ, ಕಾಸ್ಪ್ರೋವಿಚ್, ಶೇನ್ ವಾರ್ನ್ ತಲಾ ಎರಡು ವಿಕೆಟ್ ಉರುಳಿಸಿ ಟೀಮ್ ಇಂಡಿಯಾದ ಬ್ಯಾಟಿಂಗ್ ಬುಡವನ್ನು ಧ್ವಂಸಗೊಳಿಸಿದ್ರು. 274 ರನ್‍ಗಳ ಮುನ್ನಡೆ ಸಾಧಿಸಿದ್ದ ಆಸ್ಟ್ರೇಲಿಯಾ ಸುಲಭವಾಗಿ ಗೆಲ್ಲಬಹುದು ಎಂಬ ಲೆಕ್ಕಚಾರದಲ್ಲಿ ಟೀಮ್ ಇಂಡಿಯಾಗೆ ಫಾಲೋ ಆನ್ ಹೇರಿತ್ತು.

ಆದ್ರೆ ಫಾಲೋ ಆನ್ ಅಂದ್ರೆ ಸೋಲು ಅಲ್ಲ. ಗೆಲುವು ಕೂಡ ಸಾಧಿಸಬಹುದು ಎಂಬ ಆತ್ಮವಿಶ್ವಾಸದಿಂದಲೇ 2ನೇ ಇನಿಂಗ್ಸ್ ಅನ್ನು ಟೀಮ್ ಇಂಡಿಯಾ ಆರಂಭಿಸಿತ್ತು. ಆರಂಭಿಕರಾದ ಶಿವ ಸುಂದರ್ ದಾಸ್ (39) ಮತ್ತು ಸಡಗೋಪನ್ ರಮೇಶ್ (30) ಮೊದಲ ವಿಕೆಟ್‍ಗೆ 52 ರನ್ ಪೇರಿಸಿದ್ರು. ಸಚಿನ್ (10) ರನ್‍ಗೆ ಸೀಮಿತವಾದ್ರೆ, ಸೌರವ್ ಗಂಗೂಲಿ 48 ರನ್‍ಗೆ ಸುಸ್ತಾದ್ರು. ಅಲ್ಲಿಗೆ ಟೀಮ್ ಇಂಡಿಯಾ 4 ವಿಕೆಟ್‍ಗೆ 232 ರನ್ ಗಳಿಸಿ ಸೋಲಿನ ದವಡೆಗೆ ಸಿಲುಕಿತ್ತು.

ಆದ್ರೆ ಎಲ್ಲರ ಊಹೆ, ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದ್ದು ವಿವಿಎಸ್ ಲಕ್ಷ್ಮಣ್ ಮತ್ತು ರಾಹುಲ್ ದ್ರಾವಿಡ್ ಅವರ ಬ್ಯಾಟಿಂಗ್ ಜುಗುಲ್‍ಬಂದಿ. 5ನೇ ವಿಕೆಟ್ ಆಡಿದ್ದ ಜೊತೆಯಾಟ (376ರನ್) ಇದೆಯಲ್ವಾ ಅದು ಇಂದಿಗೂ ನೆನಪಿನಲ್ಲಿ ಉಳಿಯುವಂತೆ ಮಾಡಿದೆ. ಟೆಸ್ಟ್ ಕ್ರಿಕೆಟ್ ಆಟದ ಎಲ್ಲಾ ಗ್ರಾಮರ್‍ಗಳನ್ನು ವಿಶ್ವ ಚಾಂಪಿಯನ್ ಆಸ್ಟ್ರೇಲಿಯನ್ನರಿಗೆ ಮಾತ್ರವಲ್ಲ ವಿಶ್ವ ಕ್ರಿಕೆಟ್‍ಗೆ ಪಾಠ ಮಾಡಿದಂತೆ ಬ್ಯಾಟಿಂಗ್ ಮಾಡಿದ್ದರು. ಕ್ರಿಕೆಟಿಗನಿಗೆ ಬೇಕಾಗಿರುವ ತಾಳ್ಮೆ, ಏಕಾಗ್ರತೆ, ಕೌಶಲ್ಯ, ಬದ್ಧತೆ, ಪರಿಶ್ರಮ, ಶಿಸ್ತು ಹೇಗಿರಬೇಕು ಎಂಬುದನ್ನು ಲಕ್ಷ್ಮಣ್ ಮತ್ತು ದ್ರಾವಿಡ್ ವಿಶ್ವ ಕ್ರಿಕೆಟ್‍ಗೆ ತಮ್ಮ ಬ್ಯಾಟಿಂಗ್ ಮೂಲಕ ಪರಿಚಯಿಸಿದ್ದರು.

ಸುಲಭವಾಗಿ ಜಯ ಸಾಧಿಸುತ್ತೇವೆ ಎಂದು ಅಂದುಕೊಂಡಿದ್ದ ಆಸೀಸ್ ನಾಯಕ ಸ್ಟೀವ್ ವಾ ಅವರ ರಣತಂತ್ರಗಳನ್ನು ಲೀಲಾಜಾಲವಾಗಿ ಭೇದಿಸಿದ್ದ ಲಕ್ಷ್ಮಣ್ ಮತ್ತು ದ್ರಾವಿಡ್ ಟೀಮ್ ಇಂಡಿಯಾದ ರನ್ ಗತಿಯನ್ನು ಏರಿಸಿದ್ದ ಪರಿಯನ್ನು ಕೊಂಡಾಡಲು ಪದಗಳೇ ಸಾಕಾಗಲ್ಲ. ಇವರಿಬ್ಬರ ವಿಕೆಟ್ ಪಡೆಯಲು ಆಸ್ಟ್ರೇಲಿಯಾದ ಘಾತಕ ವೇಗಿ ಗ್ಲೇನ್ ಮೆಕ್‍ಗ್ರಾಥ್ ಹರಸಾಹಸಪಟ್ಟಿದ್ದರು. ವಿಶ್ವದ ಅಗ್ರಗಣ್ಯ ಸ್ಪಿನ್ನರ್ ಶೇನ್ ವಾರ್ನ್ ಮ್ಯಾಜಿಕ್ ಕೂಡ ನಡೆಯಲೇ ಇಲ್ಲ. ಜೇಸನ್ ಗಿಲೆಸ್ಪಿ ಕೂಡ ಮಂಕಾಗಿ ಹೋಗಿದ್ದರು.

ಪರಿಣಾಮ ಒಂದೇ ಒಂದು ಬ್ರೇಕ್ ನೀಡಲು ಸ್ಟೀವ್ ವಾ ತನ್ನ ತಂಡದ ಪಾರ್ಟ್ ಟೈಮ್ ಬೌಲರ್‍ಗಳನ್ನು ಕಣಕ್ಕಿಳಿಸಿದ್ರೂ ವರ್ಕ್‍ಔಟ್ ಆಗಲಿಲ್ಲ. 9 ಬೌಲರ್‍ಗಳನ್ನು ದಾಳಿಗಿಳಿಸಿದ್ರೂ ಲಕ್ಷ್ಮಣ್ ಮತ್ತು ದ್ರಾವಿಡ್ ಗೋಡೆಯಂತೆ ನಿಂತಿದ್ದರು. ನಾಯಕ ಸ್ಟೀವ್ ವಾ ಮತ್ತು ವಿಕೆಟ್ ಕೀಪರ್ ಗಿಲ್‍ಕ್ರಿಸ್ಟ್ ಹೊರತು ಪಡಿಸಿ ಇನ್ನುಳಿದ 9 ಬೌಲರ್‍ಗಳ ದಾಳಿಗೂ ಲಕ್ಷ್ಣಣ್ ಮತ್ತು ದ್ರಾವಿಡ್ ಬ್ಯಾಟ್‍ನಿಂದ ರನ್‍ಗಳು ಸರಾಗವಾಗಿ ಹರಿದುಬರುತ್ತಿದ್ದವು.

ಈ ನಡುವೆ 631 ನಿಮಿಷಗಳಲ್ಲಿ 452 ಎಸೆತಗಳಲ್ಲಿ 44 ಬೌಂಡರಿಗಳ ಸಹಾಯದಿಂದ (ಮಾರ್ಚ್ 14)À 281 ರನ್ ಗಳಿಸಿದ್ದ ಲಕ್ಷ್ಮಣ್ ವಿಕೆಟ್ ಒಪ್ಪಿಸಿದಾಗ ಟೀಮ್ ಇಂಡಿಯಾದ ಮೊತ್ತ 5 ವಿಕೆಟ್‍ಗೆ 608. ಅಂದ ಮೇಲೆ ಆಸೀಸ್ ಬೌಲರ್‍ಗಳನ್ನು ಲಕ್ಷ್ಮಣ್ ಯಾವ ರೀತಿ ಕಾಡಿರಬಹುದು ಎಂಬುದನ್ನು ಜಸ್ಟ್ ಊಹಿಸಿಕೊಳ್ಳಿ.

ಆ ನಂತರ ವಿಕೆಟ್ ಕೀಪರ್ ನಯನ್ ಮೊಂಗಿಯಾ ನಾಲ್ಕು ರನ್‍ಗೆ ಮೆಕ್‍ಗ್ರಾಥ್‍ಗೆ ಬಲಿಯಾದ್ರು. ಹಾಗೇ, 446 ನಿಮಿಷಗಳಲ್ಲಿ 353 ಎಸೆತಗಳಲ್ಲಿ 20 ಬೌಂಡರಿಗಳ ಸಹಾಯದಿಂದ ರಾಹುಲ್ ದ್ರಾವಿಡ್ 180 ರನ್ ಗಳಿಸಿ ರನೌಟ್ ಆದಾಗ ಟೀಮ್ ಇಂಡಿಯಾದ ಮೊತ್ತ ಏಳು ವಿಕೆಟ್‍ಗೆ 629 ರನ್. ಜಹೀರ್ ಖಾನ್ ಅಜೇಯ 23 ಮತ್ತು ಹರ್ಭಜನ್ ಸಿಂಗ್ ಅಜೇಯ 8 ರನ್ ಗಳೊಂದಿಗೆ ಟೀಮ್ ಇಂಡಿಯಾ 7 ವಿಕೆಟ್‍ಗೆ 657 ರನ್‍ಗೆ ಡಿಕ್ಲೇರ್ ಮಾಡಿಕೊಂಡಿತ್ತು.

ಮೊದಲ ಇನಿಂಗ್ಸ್‍ನಲ್ಲಿ 494 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿ 171 ರನ್ ಗಳಿಸಿದ್ದ ಟೀಮ್ ಇಂಡಿಯಾ ಎರಡನೇ ಇನಿಂಗ್ಸ್‍ನಲ್ಲಿ 737 ನಿಮಿಷಗಳ ಕಾಲ ಆಸೀಸ್ ತಂಡವನ್ನು ಕಾಡಿ ಗೆಲ್ಲಲು 384 ರನ್‍ಗಳ ಗುರಿಯನ್ನು ನೀಡಿತ್ತು. ಅಚ್ಚರಿ ಅಂದ್ರೆ ಟೀಮ್ ಇಂಡಿಯಾದ 2ನೇ ಇನಿಂಗ್ಸ್‍ನಲ್ಲಿ ಒಂದೇ ಒಂದು ಸಿಕ್ಸರ್ ದಾಖಲಾಗಿಲ್ಲ. ಬದಲಾಗಿ 91 ಬೌಂಡರಿಗಳಿದ್ದವು.

ಹಾಗಂತ ಟೀಮ್ ಇಂಡಿಯಾದ ಸವಾಲಿಗೆ ಆಸೀಸ್ ದಿಟ್ಟ ಉತ್ತರ ನೀಡುವ ಸೂಚನೆಯನ್ನು ನೀಡಿತ್ತು. ಕೊನೆಯ ದಿನ ಬ್ಯಾಟಿಂಗ್ ಮಾಡೋದು ಅಷ್ಟೊಂದು ಸುಲಭವಿರಲಿಲ್ಲ. ಮ್ಯಾಥ್ಯೂ ಹೇಡನ್ (67), ಮೈಕೆಲ್ ಸ್ಲೇಟರ್ (43) ಹಾಗೂ ಜಸ್ಟಿನ್ ಲ್ಯಾಂಜರ್ (28) ಹಾಗೂ ಸ್ಟೀವ್ (24) ತುಸು ಹೋರಾಟವನ್ನು ನೀಡಿದ್ರೂ ಟರ್ಬನೇಟರ್ ಸ್ಪಿನ್ ಮೋಡಿಗೆ ಕಕ್ಕಾಬಿಕ್ಕಿಯಾದ್ರು. ಅಲ್ಲದೆ ಈ ಪಂದ್ಯದಲ್ಲಿ ಹರ್ಭಜನ್ ಸಿಂಗ್ ಹ್ಯಾಟ್ರಿಕ್ ವಿಕೆಟ್‍ನೊಂದಿಗೆ ಆರು ವಿಕೆಟ್ ಕಬಳಿಸಿ ಆಸ್ಟ್ರೇಲಿಯನ್ನರ ಗೆಲುವಿನ ಕನಸನ್ನು ಭಗ್ನಗೊಳಿಸಿದ್ರು. ಇನ್ನೊಂದೆಡೆ, ಬ್ಯಾಟಿಂಗ್‍ನಲ್ಲಿ ನಿರಾಸೆ ಮೂಡಿಸಿದ್ದ ಸಚಿನ್ ತೆಂಡುಲ್ಕರ್ ಪಾರ್ಟ್ ಟೈಮ್ ಬೌಲರ್ ಆಗಿ ಮೂರು ವಿಕೆಟ್ ಉರುಳಿಸಿದ್ರು.

ಒಟ್ಟಾರೆ ಈ ಪಂದ್ಯದ ಗೆಲುವಿನ ಮೂಲಕ ಟೀಮ್ ಇಂಡಿಯಾದ ಆತ್ಮವಿಶ್ವಾಸ ಇಮ್ಮಡಿಗೊಂಡಿತ್ತು. ಅಷ್ಟೇ ಅಲ್ಲ, ಮ್ಯಾಚ್ ಫಿಕ್ಸಿಂಗ್ ಕಳಂಕದಿಂದ ಹೊರಬಂದು ವಿಶ್ವದ ಶ್ರೇಷ್ಠ ತಂಡವಾಗಿ ಹೊರಹೊಮ್ಮಲು ಭದ್ರ ಬುನಾದಿಯನ್ನು ಹಾಕಿಕೊಂಡಿತ್ತು. ಅಂದು ನಾಯಕ ಸೌರವ್ ಗಂಗೂಲಿ ಹಾಕಿಕೊಟ್ಟ ಅಡಿಪಾಯವೇ ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾ ವಿಶ್ವದ ಬಲಿಷ್ಠ ತಂಡವಾಗಿ ರೂಪುಗೊಳ್ಳಲು ಸಾಧ್ಯವಾಯ್ತು. ಆಸ್ಟ್ರೇಲಿಯಾ ವಿರುದ್ದದ ಈ ಒಂದು ಐತಿಹಾಸಿಕ ಗೆಲುವು ಟೀಮ್ ಇಂಡಿಯಾದ ಚಿತ್ರಣವನ್ನೇ ಬದಲಾಯಿಸಿಬಿಟ್ಟಿತ್ತು. ಈ ಕಾರಣಕ್ಕಾಗಿಯೇ ಇವತ್ತಿಗೂ 2001ರ ಕೊಲ್ಕತ್ತಾದ ಈಡನ್ ಗಾರ್ಡನ್ ಟೆಸ್ಟ್ ಮ್ಯಾಚ್‍ನ ಗೆಲುವು ಟೀಮ್ ಇಂಡಿಯಾದ ಅದ್ಭುತ ವಿಜಯಯಾತ್ರೆಯಾಗಿದೆ. ಈ ಗೆಲುವಿಗೆ 25 ವರ್ಷವಾದ್ರೂ ಇಂದಿಗೂ ನೆನಪಿನ ಪುಟದಲ್ಲಿ ಮತ್ತೆ ಮತ್ತೆ ನೆನಪಿಸುತ್ತಿದೆ.

ಅಂದ ಹಾಗೇ ಅಂದಿನ ಹೀರೋಗಳಾದ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಇಂದಿನ ಟೀಮ್ ಇಂಡಿಯಾದ ಯಶಸ್ಸಿನ ರೂವಾರಿಗಳಾಗಿದ್ದಾರೆ. ಇವರಿಬ್ಬರ ಕ್ರಿಕೆಟ್ ಪ್ರೀತಿಗೊಂದು ಸಲಾಂ. ಒಟ್ಟಿನಲ್ಲಿ ಕನಸು ಕಾಣುವುದು ಸಹಜ. ಆದ್ರೆ ಅದನ್ನು ನನಸು ಮಾಡಲು ಹಠವಿರಬೇಕು. ಅಂದು ಟೀಮ್ ಇಂಡಿಯಾ ಮಾಡಿದ್ದು ಅದನ್ನೇ.. ಇಂದು ಮಾಡುತ್ತಿರುವುದು ಕೂಡ ಅದೇ ಅಲ್ವಾ..!

ಸನತ್ ರೈ

Tags: #edangardans#vvs lakshmanaustreliarahuldravidteamindiaworldcricket
ShareTweetSendShare
Join us on:

Related Posts

ಇರಾನ್‌ನ 45 ನಾವಿಕರ ಮೃತದೇಹ ಹಸ್ತಾಂತರ

ಇರಾನ್‌ನ 45 ನಾವಿಕರ ಮೃತದೇಹ ಹಸ್ತಾಂತರ

by Shwetha
March 14, 2026
0

ಹಿಂದೂ ಮಹಾಸಾಗರದಲ್ಲಿ ಇರಾನ್ ಯುದ್ಧನೌಕೆಯ ಮೇಲೆ ನಡೆದ ದಾಳಿಯಲ್ಲಿ ಸಾವನ್ನಪ್ಪಿದ 45 ನಾವಿಕರ ಮೃತದೇಹಗಳನ್ನು ಶ್ರೀಲಂಕಾ ಸರ್ಕಾರವು ಇರಾನ್ ರಾಯಭಾರ ಕಚೇರಿಗೆ ಹಸ್ತಾಂತರಿಸಿದೆ. ಈ ಘಟನೆ ಹಿಂದೂ...

ಹೋಟೆಲ್ ಬಿಲ್‌ನಲ್ಲಿ GST ಜೊತೆ ‘ಗ್ಯಾಸ್ ಶುಲ್ಕ’ ಸೇರಿಕೆ!

ಹೋಟೆಲ್ ಬಿಲ್‌ನಲ್ಲಿ GST ಜೊತೆ ‘ಗ್ಯಾಸ್ ಶುಲ್ಕ’ ಸೇರಿಕೆ!

by Shwetha
March 14, 2026
0

ದೇಶಾದ್ಯಂತ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆ ಕೆಲವು ಹೋಟೆಲ್‌ಗಳು ಗ್ರಾಹಕರಿಗೆ ಹೆಚ್ಚುವರಿ ಶುಲ್ಕ ವಿಧಿಸುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ಯುದ್ಧದ ಪರಿಣಾಮವಾಗಿ ಸಿಲಿಂಡರ್‌ಗಳ...

ಇರಾನ್ ಯುದ್ಧದ ಎಫೆಕ್ಟ್: ಪೆಟ್ರೋಲ್ ಡೀಸೆಲ್ ಸೇಫ್, ಆದರೆ ಗ್ಯಾಸ್ ಸಿಲಿಂಡರ್ ಗಾಗಿ ಮುಗಿಬಿದ್ದ ಜನತೆ

ಇರಾನ್ ಯುದ್ಧದ ಎಫೆಕ್ಟ್: ಪೆಟ್ರೋಲ್ ಡೀಸೆಲ್ ಸೇಫ್, ಆದರೆ ಗ್ಯಾಸ್ ಸಿಲಿಂಡರ್ ಗಾಗಿ ಮುಗಿಬಿದ್ದ ಜನತೆ

by Shwetha
March 14, 2026
0

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಭುಗಿಲೆದ್ದಿರುವ ಯುದ್ಧ ಹಾಗೂ ಇರಾನ್ ದೇಶವು ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವ ಪರಿಣಾಮ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರೀ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಈ...

ರಾಜ್ಯಾದ್ಯಂತ ಮಾರ್ಚ್ 18 ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ಮಹಾಪರ್ವ ಆರಂಭ: ವಿದ್ಯಾರ್ಥಿಗಳು ಮತ್ತು ಪೋಷಕರು ತಿಳಿಯಲೇಬೇಕಾದ ಕಟ್ಟುನಿಟ್ಟಿನ ನಿಯಮಗಳೇನು ಗೊತ್ತಾ?

ರಾಜ್ಯಾದ್ಯಂತ ಮಾರ್ಚ್ 18 ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ಮಹಾಪರ್ವ ಆರಂಭ: ವಿದ್ಯಾರ್ಥಿಗಳು ಮತ್ತು ಪೋಷಕರು ತಿಳಿಯಲೇಬೇಕಾದ ಕಟ್ಟುನಿಟ್ಟಿನ ನಿಯಮಗಳೇನು ಗೊತ್ತಾ?

by Shwetha
March 14, 2026
0

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಿಗೆ ಅಧಿಕೃತ ಚಾಲನೆ ನೀಡಲು ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಅತಿ...

ಸ್ವಪಕ್ಷೀಯರ ಆಕ್ರೋಶಕ್ಕೆ ಕ್ಯಾರೇ ಎನ್ನದ ಶಾಸಕ: ರಾಮನಗರದ ಹಿತವೇ ಮುಖ್ಯ; ಬಜೆಟ್ ನಿರಾಸೆ ಬಗ್ಗೆ ಗುಡುಗಿದ ಇಕ್ಬಾಲ್ ಹುಸೇನ್

ಸ್ವಪಕ್ಷೀಯರ ಆಕ್ರೋಶಕ್ಕೆ ಕ್ಯಾರೇ ಎನ್ನದ ಶಾಸಕ: ರಾಮನಗರದ ಹಿತವೇ ಮುಖ್ಯ; ಬಜೆಟ್ ನಿರಾಸೆ ಬಗ್ಗೆ ಗುಡುಗಿದ ಇಕ್ಬಾಲ್ ಹುಸೇನ್

by Shwetha
March 14, 2026
0

ರಾಜ್ಯ ಬಜೆಟ್ ಕುರಿತು ಅಸಮಾಧಾನ ವ್ಯಕ್ತಪಡಿಸಿ ಸ್ವಪಕ್ಷೀಯ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ತಮ್ಮ ಹೇಳಿಕೆಗೆ ಅಂಟಿಕೊಂಡಿದ್ದಾರೆ. ಪಕ್ಷದೊಳಗಿನ ಟೀಕೆಗಳಿಗೆ ಕಿವಿಗೊಡದ ಅವರು,...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram