ದೇವರಿಗೆ ಸಮರ್ಪಿಸಿದ ಹೂ, ಪತ್ರೆಗಳಿಂದ ಬಣ್ಣ, ಧೂಪ ತಯಾರಿಕೆ
ಹೋಳಿ ಹಬ್ಬಕ್ಕೆ ದೇಶ ಸಂಭ್ರಮದಿಂದ ತಯಾರಾಗುತ್ತಿದೆ. ಹೋಳಿ ಹಬ್ಬದ ನಂತರ ನೀರಿನ ಮೂಲಗಳನ್ನು ಸ್ವಚ್ಛವಾಗಿಡಲು, ಹಲವು ಕಡೆಗಳಲ್ಲಿ ವಿವಿಧ ತಯಾರಿಗಳನ್ನ ನಡೆಸಲಾಗುತ್ತಿದೆ. ಜಾರ್ಖಂಡ್‌ನ ರಾಮಗಢ ಜಿಲ್ಲೆ ರಾಜ್ರಪ್ಪ ದೇವಸ್ಥಾನದಲ್ಲಿ ಚಿನ್ನಮಾಸ್ತಿಕಾ ದೇವಿಗೆ ಅರ್ಪಿಸುವ ಹೂವುಗಳು ಮತ್ತು ‘ಬೆಲ್ವಪತ್ರೆಗಳ ಜೊತೆಗೆ ಸಾವಯವ ‘ಗುಲಾಲ್’ ಬಣ್ಣಗಳು ಮತ್ತು ಅಗರಬತ್ತಿಗಳ ತಯಾರಿಕೆಯನ್ನ ಕೈಗೆತ್ತಿಕೊಂಡಿದೆ.
ಈ ದೇವಿಗೆ ಸಮರ್ಪಿಸುವ ಹೂ, ಪತ್ರೆಗಳನ್ನ ದೇವಾಲಯದ ಕಟ್ಟಡದ ಬಳಿ ಇರುವ ದೋಮೋದರ್ ಮತ್ತು ಭೈರವಿ ನದಿಗಳ ಸಂಗಮಕ್ಕೆ ಎಸೆಯೆಲಾಗುತ್ತದೆ.
ಪ್ರತಿದಿನ ಸಾವಿರಾರು ಜನರು ದೇವಾಲಯಕ್ಕೆ ಭೇಟಿ ನೀಡಿ ದೇವಿಯನ್ನ ಪೂಜಿಸುತ್ತಾರೆ. ಇದರ ಪರಿಣಾಮವಾಗಿ ಟನ್‌ಗಟ್ಟಲೆ ಹೂವುಗಳು, ಬಿಲ್ವ ಪತ್ರೆಗಳು, ಬಳೆಗಳು, ಮತ್ತು ಇತರ ಹಲವು ಪೂಜಾ ವಸ್ತುಗಳು ಎರಡು ನದಿಗಳ ಸಂಗಮದ ಸ್ಥಳದಲ್ಲಿ ಸಿಲುಕಿ ಜಲ ಮಾಲಿನ್ಯವನ್ನು ಸೃಷ್ಟಿಸುತ್ತಿವೆ. ಹಾಗಾಗಿ ಜಿಲ್ಲಾಡಳಿತ ಹೊಸ ಪ್ರಯೋಗಕ್ಕೆ ಮುಂದಾಗಿದೆ.
ಜಿಲ್ಲಾ ಮಿನರಲ್ ಫೌಂಡೇಶನ್ ನಿಧಿಯನ್ನು ಬಳಸಿಕೊಂಡು ಮಾತಂಗಿ ಯೋಜನೆಯಡಿ ಹೊಸ ಕಾರ್ಯಕ್ಕೆ ಕೈಗೆತ್ತಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಈ ಯೋಜನೆಯ ಮೂಲಕ ಹೂವುಗಳು ಮತ್ತು ಬಿಲ್ ಪತ್ರೆಗಳನ್ನ ಪ್ರತ್ಯೇಕಿಸಿ ಒಣಗಿಸುವ ಗುರಿಯನ್ನ ಜಿಲ್ಲಾಡಳಿತ ಹೊಂದಿದೆ.
ಹೂವುಗಳ ಒಣಗಿದ ಭಾಗವನ್ನು ಸ್ಥಳೀಯ ಮಹಿಳೆಯರನ್ನು ಸೇರಿಸಿ ಸಂಸ್ಕರಿಸಲಾಗುತ್ತದೆ ಮತ್ತು ನಂತರ ಇವುಗಳಿಂದ ಸಾವಯವ ಗುಲಾಲ್ ಮತ್ತು ಇತರ ಬಣ್ಣಗಳನ್ನು ತಯಾರಿಸಲಾಗುತ್ತದೆ ಎಂದು ರಾಮಗಢ ಡೆಪ್ಯುಟಿ ಕಮಿಷನರ್ ಮಾಧವಿ ಮಿಶ್ರಾ ಹೇಳಿದರು.
ಅಂತೆಯೇ, ಒಣಗಿದ ಎಲೆಗಳನ್ನು ಸಂಸ್ಕರಿಸಿದ ನಂತರ ಧೂಪದ್ರವ್ಯವನ್ನು ತಯಾರಿಸಲು ಬಿಲ್ಪತ್ರೆಯನ್ನ ಬಳಸಲಾಗುತ್ತದೆ ಎಂದು ಅವರು ತಿಳಿಸಿದರು.
“ಒಮ್ಮೆ ಉತ್ಪಾದನೆಯು ಮುಗಿದ ನಂತರ, ನಾವು ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್‌ಗಾಗಿ ಜಾರ್ಖಂಡ್ ಸ್ಟೇಟ್ ಲೈವ್ಲಿಹುಡ್ ಪ್ರಮೋಷನ್ ಸೊಸೈಟಿ (ಜೆಎಸ್‌ಎಲ್‌ಪಿಎಸ್) ನ ಬ್ರ್ಯಾಂಡ್ ಪಲಾಶ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತೇವೆ” ಎಂದು ಮಿಶ್ರಾ ಹೇಳಿದರು.
ಹೋಳಿಗೆ ಮೊದಲು ಗುಲಾಲ್ ಮತ್ತು ಇತರ ಬಣ್ಣಗಳನ್ನು ತಯಾರಿಸುವುದರೊಂದಿಗೆ ಅಗರಬತ್ತಿಗಳ ಉತ್ಪಾದನೆಯು ಪ್ರಾರಂಭವಾಗಿದೆ ಎಂದು ಅವರು ಹೇಳಿದರು.ಸದ್ಯಕ್ಕೆ ಸುಮಾರು 25 ಸ್ಥಳೀಯ ಮಹಿಳೆಯರನ್ನು ಈ ಯೋಜನೆಯಲ್ಲಿ ಬಳಸಿಕೊಳ್ಳಲಾಗಿದೆ ಎಂದು ತಿಳಿಸಿದರು.
“ದೇವಸ್ಥಾನದ ಆವರಣದಲ್ಲಿ ಈಗಾಗಲೇ ಸ್ವಚ್ಛತೆ ಮತ್ತು ಇತರ ಸಣ್ಣ ಕೆಲಸಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಲು ಅರೆ-ಯಾಂತ್ರೀಕೃತ ವ್ಯವಸ್ಥೆಯನ್ನು ಉತ್ಪಾದನೆಗೆ ಆಯ್ಕೆ ಮಾಡಲಾಗಿದೆ” ಎಂದು ಜಿಲ್ಲಾಧಿಕಾರಿ ತಿಳಿಸಿದರು.







