ಈಗಾಗಲೇ ರಾಜ್ಯಾದ್ಯಂತ ಶಾಲೆಗಳು ಮತ್ತೆ ಆರಂಭವಾಗಬೇಕಾಗಿತ್ತು. ನಾಲ್ಕು ತಿಂಗಳಿನಿಂದೀಚೆಗೆ ದೇಶವ್ಯಾಪಿ ಹಬ್ಬುತ್ತಿರುವ ಕೊರೋನಾ ಸೋಂಕಿನ ಅಪಾಯವನ್ನರಿತು ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಸರಕಾರ ರಾಜ್ಯ ಸರಕಾರ ಶಾಲೆಗಳು ಪುನರಾರಂಭಗೊಳಿಸುವ ಆದೇಶವನ್ನು ಮಾಡಿಲ್ಲ . ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಮಕ್ಕಳ ಪೋಷಕರ ಆತಂಕವೇ ಹೆಚ್ಚಾಗುತ್ತಲೇ ಇದೆ.ಇದುವರೆಗೆ ಶಾಲಾ ಕಾಲೇಜುಗಳಿಗೆ ಯಾವ ಭಯ ಭೀತಿಯೂ ಇಲ್ಲದೇ ಶಿಕ್ಷಣ ಕಲಿಕೆ ನಿರಾಂತಕವಾಗಿ ನಡೆಯುತ್ತಿತ್ತು. ಆದರೆ ಕೋವಿಡ್ 19 ವೈರಸ್ ಹರಡುವಿಕೆಯಿಂದ ಆಬಾಲವೃದ್ಧರಾದಿಯಾಗಿ ಆತಂಕಕ್ಕೊಳಗಾಗಿ ಜನಜೀವನವು ಸ್ತಬ್ಧವಾದ ಬಗೆಯನ್ನು ಕಂಡಿದ್ದೇವೆ. ಅನುಭವಿಸಿದ್ದೇವೆ.ಇದೀಗ ಕೊರೋನಾ ಸೋಂಕು ಸಂಪೂರ್ಣವಾಗಿ ಹತೋಟಿಗೂ ಬಂದಿಲ್ಲ . ನಿಯಂತ್ರಣದಲ್ಲಿದೆಯಾದರೂ ದಿನೇ ದಿನೇ ಮತ್ತೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ.
ಇದೀಗ ಮತ್ತೆ ಲಾಕ್ ಡೌನ್ ಹೋಗಿ ಸಹಜವಾದ ಅನ್ ಲಾಕ್ ಆದರೂ ಶಾಲಾ ಕಾಲೇಜು ವಿಶ್ವವಿದ್ಯಾಲಯಗಳು ಇನ್ನೂ ತೆರೆದಿಲ್ಲ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇದ್ದಕ್ಕಿದಂತೆ ಇದೀಗ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ವರದಿಯಾಗಿದೆ. ಇಲ್ಲೆಲ್ಲಾ ಜಿಲ್ಲಾಡಳಿತವು ಸಮುದಾಯಕ್ಕೆ ಹಬ್ಬದಂತೆ ಕಟ್ಟಿನಿಟ್ಟಿನ ಕ್ರಮಕೈಗೊಂಡಿದೆ. ಇವುಗಳ ಮಧ್ಯೆ ಗುಣಮುಖರಾಗಿಯೂ ಮನೆ ಸೇರಿರುವ ವರದಿಯನ್ನು ಅಲ್ಲಗಳೆಯುವಂತಿಲ್ಲ.
ಕಳೆದ ಮಾರ್ಚ್ ತಿಂಗಳಿನಿಂದಲೇ ಮನೆಯೊಳಗಿರುವ ಮಕ್ಕಳ ಮುಂದಿನ ಶಿಕ್ಷಣ ಭವಿಷ್ಯ ವೇನೂ? ಎಂಬ ಗಹನವಾದ ಚರ್ಚೆ ಎಲ್ಲೆಡೆಯಲ್ಲೂ ಕೇಳಿ ಬರುತ್ತಿದೆ. ಆದರೆ ಹೆಚ್ಚಿನ ಪೋಷಕರು ಸದ್ಯ ಶಾಲೆಗಳು ಪ್ರಾರಂಭಿಸುವುದು ಬೇಡ ಎನ್ನುವ ಅಭಿಪ್ರಾಯವನ್ನು ತಿಳಿಸುತ್ತಿದ್ದಾರೆ. ಔಪಚಾರಿಕ ವಾದ ಶಿಕ್ಷಣವನ್ನು ನೀಡುವ ಶಾಲಾ ಕಾಲೇಜು ವಿಶ್ವವಿದ್ಯಾಲಯಗಳು ಮತ್ತೆ ಪುನರಾರಂಭಗೊಳ್ಳುವ ಬಗ್ಗೆ ಎಲ್ಲರಿಗೂ ಬಹಳ ದೊಡ್ಡ ನಿರೀಕ್ಷೆ ಹಾಗೂ ಪ್ರಶ್ನೆಗಳು ಕಾಡಲಾರಂಭಿಸಿದೆ. ಈ ಬಗ್ಗೆ ಪ್ರತಿಯೊಬ್ಬ ಪೋಷಕರು ಸರಕಾರ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಣಯವನ್ನು ಗಮನಿಸುತ್ತಿದ್ದಾರೆ. ಹಾಗಾಗಿ ಕೊರೋನಾ ಸೋಂಕಿಗೆ ವಿದ್ಯಾರ್ಥಿಗಳ ಆರೋಗ್ಯ ಏರುಪೇರಾಗಬಾರದೆಂಬ ನಿಟ್ಟಿನಲ್ಲಿ ಸರಕಾರವು ತೆಗೆದುಕೊಳ್ಳುವ ನಿರ್ಣಯವು ವಿದ್ಯಾರ್ಥಿಗಳ ಪೋಷಕರ ಪಾಲಿಗೆ ಮಹತ್ತರವಾದುದಾಗಿದೆ.
ಈ ಮಧ್ಯೆ ನಾಲ್ಕು ತಿಂಗಳಿನಿಂದ ಮನೆಯಲ್ಲಿರುವ ಮಕ್ಕಳಿಗೆ ಹೇಗೆ ಶಿಕ್ಷಣದ ವ್ವವಸ್ಥೆಯನ್ನು ಮಾಡಬಹುದು ಎಂದು ಯೋಚಿಸುತ್ತಿರುವಾಗಲೇ ಆನ್ ಲೈನ್ ಶಿಕ್ಷಣದ ಚಿಂತನೆಯನ್ನು ಮಾಡುತ್ತಿದೆ. ಅದರ ಸಾಧಕ ಬಾಧಕ ಕುರಿತಂತೆಯೂ ಗಂಭೀರವಾದ ಚರ್ಚೆಗಳು ನಡೆಯುತ್ತಿದೆ. ತಂತ್ರಜ್ಞಾನ ಯುಗದಲ್ಲಿರುವ ನಾವುಗಳು ಮತ್ತೆ ಹೊಸ ಆವಿಷ್ಕಾರದ ಕಡೆಹೆಜ್ಜೆ ಹಾಕುತ್ತಲೇ ಇದ್ದೇವೆ. ಆದರೆ ಭಾವನಾತ್ಮಕವಾದ ತರಗತಿ ಕೋಣೆ ವಿದ್ಯಾರ್ಥಿ ಶಿಕ್ಷಕ ಕರಿಹಲಗೆ ಮುಂದುವರಿದು ಸ್ಮಾರ್ಟ್ ಕ್ಲಾಸ್ ಇವುಗಳ ಮೂಲಕ ನೀಡುವ ಶಿಕ್ಷಣವೂ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ನೀಡುತ್ತಿತ್ತು.. ಅಲ್ಲದೇ ಗುರು ಶಿಷ್ಯರು ನೇರನೇರವಾಗಿ ವಿಷಯಗಳ ಬಗ್ಗೆ ಚರ್ಚಿಸುವುದಕ್ಕೂ ಸೂಕ್ತವಾಗಿತ್ತು. ಆದರೆ ಈಗ ಅನ್ ಲೈನ್ ಶಿಕ್ಷಣ ಕುರಿತಂತೆ ತಮ್ಮ ಮಕ್ಕಳು ಪರವಾಗಿ ಪರ ವಿರೋಧ ಧ್ವನಿಗಳು ಕೇಳಲಾರಂಭಿಸಿದೆ ಇದರಲ್ಲಿ ಬೇಡವೆನ್ನುವ ಅಭಿಪ್ರಾಯವೇ ಹೆಚ್ಚಾಗಿ ಎಲ್ಲಾ ಕಡೆಯಿಂದ ಕೇಳಿಬರುತ್ತಿದೆ.ಈ ಆನ್ ಲೈನ್ ಕ್ರಮ ತರುವುದೇನೋ ಸರಿ ಆ ಕ್ಷಣದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಇದು ಸಾಧ್ಯ ವೇ? ಹಾಗೂ ಇದು ಸಾಧುವೇ? ಎನ್ನುವುದು ಪೋಷಕರ ಪ್ರಶ್ನೆ ಯಾಗಿದೆ. ಇದಕ್ಕೆ ಕೆಲವೊಂದು ಕಾರಣಗಳು ಸ್ಪಷ್ಟವಾಗಿದೆ. ನಗರ ಮತ್ತು ಹಳ್ಳಿಯ ಮಕ್ಕಳು, ಖಾಸಗಿ ಮತ್ತೆ ಸರಕಾರಿ ಶಾಲೆಯ ಮಕ್ಕಳು, ಬಡವ, ಮಧ್ಯಮ ಹಾಗೂ ಶ್ರೀಮಂತ ವರ್ಗದ ಮಕ್ಕಳು ಎನ್ನುವಲ್ಲಿ ಆನ್ ಲೈನ್ ಶಿಕ್ಷಣವೂ ವಿದ್ಯಾರ್ಥಿಗಳಿಗೆಲ್ಲರಿಗೂ ಸಮಾನ ಎಂದರೂ ಈ ರೀತಿಯ ಶಿಕ್ಷಣ ಪಡೆಯುವಲ್ಲ್ಗಿ ಕೆಲವು ಮಕ್ಕಳು ಅವಕಾಶ ವಂಚಿತರಾಗುತ್ತಿದ್ದಿಲ್ಲವೇ? ಮತ್ತೆ ನಗರ ಮತ್ತು ಹಳ್ಳಿ ಗಳಲ್ಲಿ ನೆಟ್ ವರ್ಕ್ ಸಮಸ್ಯೆ ಹಾಗೆಯೇ ಎಲ್ಲಾ ವಿದ್ಯಾರ್ಥಿಗಳ ಪೋಷಕರಿಗೆ ಮೊಬೈಲ್ ಕಂಪ್ಯೂಟರ್ ಲ್ಯಾಪ್ಟಾಪ್ ಗಳನ್ನು ಸಾವಿರ ಸಾವಿರ ಹಣಕೊಟ್ಟು ಕೊಂಡುಕೊಳ್ಳಲು ಈ ಪರಿಸ್ಥಿತಿಯಲ್ಲಿ ಸಾಧ್ಯವಾಗುವುದೇ? ಎನ್ನುವ ಪ್ರಶ್ನೆಗಳು ಸವಾಲುಗಳು ಒಂದೊಂದಾಗಿ ಪ್ರಾರಂಭವಾಗುತ್ತಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಕೊಂಡುಕೊಳ್ಳಲು ಸಾಧ್ಯವಾದರೂ ಅದರ ಮೂಲಕ ಮಕ್ಕಳಿಗೆ ನೀಡುವ ಶಿಕ್ಷಣ ಎಷ್ಟು ಸಮರ್ಪಕವಾಗಿ ಅರ್ಥ ವಾಗುವುದು? ಹಾಗೆಯೇ ನಿರಂತರ ವೀಕ್ಷಣೆಯಿಂದ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರದಿರುವುದೇ ಎನ್ನುವ ಆತಂಕವೇ ಪೋಷಕರ ವಿರೋಧಕ್ಕೆ ಪ್ರಮುಖ ಕಾರಣವಾಗಿದೆ. ಅದರೊಂದಿಗೆ ಮಕ್ಕಳ ಮಧ್ಯೆ ಒಂದು ರೀತಿಯ ಅಸಮಾನತೆಯನ್ನು ಸೃಷ್ಟಿಯಾಗುವ ಸಾಧ್ಯತೆಯೂ ಇದೆ ಎನ್ನುವುದನ್ನು ಬಲ್ಲವರು ಅಭಿಪ್ರಾಯ ಪಡುತ್ತಿದ್ದಾರೆ.
ಅನೂಕೂಲಸ್ಥರ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಕ್ಕೆ ಬೇಕಾದ ವ್ಯವಸ್ಥೆ ಯನ್ನು ಕಲ್ಪಿಸಿಕೊಡುವ ಸಾಮರ್ಥ್ಯ ವಿದ್ದರೂ ತಿಂಗಳೂ ಪೂರ್ತಿ ಅದರ ಮೂಲಕ ಕಲಿಕೆಯಲ್ಲಿ ತೊಡಗಿಕೊಳ್ಳುವ ಮಕ್ಕಳ ಬೌದ್ಧಿಕ ಸಾಮರ್ಥ್ಯ ಎಷ್ಟು ಗಟ್ಟಿಯಾಗಿದೆ ಪೂರ್ಣ ಪ್ರಮಾಣದಲ್ಲಿ ಇದರ ಸದುಪಯೋಗವನ್ನು ಪಡೆದುಕೊಳ್ಳಲು ಸಾಧ್ಯವೇ ಎನ್ನುವ ಪ್ರಶ್ನೆ ಯೂ ಇದೆ
ಆದರೆ ಕೆಲವು ಪೋಷಕರು ನಮ್ಮೆಲ್ಲರ ಮಕ್ಕಳು ನಾವಿಣ್ಯತೆಯ ಕಲಿಕೆ ಪ್ರವೇಶಿಸುವಂತಾಗಬೇಕು. ಆ ಮೂಲಕ ಈ ಸಂದಿಗ್ಧ ಸಮಯದಲ್ಲಿ ಹೊಸ. ತಂತ್ರಜ್ಞಾನ ಆವಿಷ್ಕಾರಗಳ ಕಲಿಕೆಯ ಅನಿವಾರ್ಯತೆ ಇದೆ ಎಂದು ಕೆಲವು ಪೋಷಕರು ಅಭಿಪ್ರಾಯ ಪಡುತ್ತಿದ್ದಾರೆ ಈ ಬಗ್ಗೆಯೂ ಗಮನಹರಿಸಬೇಕಾದದ್ದು ಇದೆ. ಹೇಗೆ ಇರಲಿ ವಿದ್ಯಾರ್ಥಿಗಳಿಗೂ ಈ ವ್ಯವಸ್ಥೆಯನ್ನು ಹೊಂದಿಸಿಕೊಡುವುದು ಕಷ್ಟವಾಗಲೂಬಹುದು ಆದರೆ ಈಗಾಗಲೇ ಕರ್ನಾಟಕ ರಾಜ್ಯ ಸರಕಾರ ಪೋಷಕರ ಶಿಕ್ಷಣ ತಜ್ಞರ ಮನೋವೈದ್ಯರ ಅಭಿಪ್ರಾಯ ಗಳನ್ನೆಲ್ಲ ಸಂಗ್ರಹಿಸಿ ಯಾವ ತರಗತಿ ಹೇಗೆ ಯೋಜಿಸಬಹುದೆಂಬ ಯೋಚನೆಯನ್ನು ಮಾಡುತ್ತಿದೆ. ಈಗಾಗಲೇ ಈ ಎಲ್ಲಾ ವಿಚಾರಗಳನ್ನು ಗಮನಿಸಿ ಒಂದರಿಂದ ಏಳನೆಯ ತರಗತಿಯವರೆಗೆ ಆನ್ ಲೈನ್ ಶಿಕ್ಷಣ ನೀಡಬೇಕೇ ಬೇಡವೇ ಎನ್ನುವ ನಿರ್ಣಯಕ್ಕೆ ಬರಬಹುದು. ಎಂಟನೆಯ ತರಗತಿಯಿಂದ ಮೇಲ್ಪಟ್ಟ ವಿದ್ಯಾರ್ಥಿಗಳಿಗೂ ಸದ್ಯದ ಪರಿಸ್ಥಿತಿಯಲ್ಲಿ ಮುಂದಿನ ಸೂಚನೆಯನ್ನು ತರಬಹುದಾದ ಪರ್ಯಾಯ ವ್ಯವಸ್ಥೆಯ ಬಗ್ಗೆ ಹೇಳಬಹುದು. .ಈ ಎಲ್ಲಾ ವಿಷಯಗಳ ಕುರಿತು ಚಿಂತಕರು ಶಿಕ್ಷಣ ತಜ್ಞರು ವೈದ್ಯರು ಪೋಷಕರು ಹಿರಿಯ ಅನುಭವಿಗಳು ನಾಡಿನ ಪ್ರಜ್ಞಾವಂತ ನಾಗರಿಕರೆಲ್ಲರ ಸದಾಭಿಪ್ರಾಯಗಳನ್ನು ಸ್ವೀಕರಿಸಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಅನೂಕೂಲಕರ ವ್ಯವಸ್ಥೆಯನ್ನು ಮಾಡಬಹುದು.
ಸುಂದರ ಸಮಾಜದ ನಿರ್ಮಾಣಕ್ಕೆ ಶಿಕ್ಷಣ ಬಳಷ್ಟು ಅತ್ಯಗತ್ಯ ಎಂಬುದನ್ನರಿತು ಸೂಕ್ತ ವ್ಯವಸ್ಥೆಯಲ್ಲಿ ಸೂಕ್ತ ಕ್ರಮಗಳೊಂದಿಗೆ ಸೂಕ್ತ ಸಮಯದಲ್ಲಿ ಶಾಲೆಗಳು ಮತ್ತೆ ಆರಂಭಗೊಳ್ಳುವುದು ಎನ್ನುವ ನಿರೀಕ್ಷೆ ನಮ್ಮದು. ಶಿಕ್ಷಣದ ಕಲಿಕೆಯ ವ್ವವಸ್ಥೆಗೆ ಸೇತುವಾಗಿ ಸರಕಾರ ತರುವ ಪರ್ಯಾಯ ವ್ಯವಸ್ಥೆಗೆ ಪೂರಕವಾಗಿ ಶಿಕ್ಷಣ ಇಲಾಖೆ ನೀಡುವ ನಿರ್ದೇಶನಕ್ಕೆ ಸಕರಾತ್ಮಕವಾಗಿ ನಮ್ಮ ಅಭಿಪ್ರಾಯಗಳನ್ನು ತಿಳಿಸೋಣ. ಈಗಾಗಲೇ ಕೇಂದ್ರ ಸರಕಾರ ಸೂಚಿಸಿದಂತೆ ರಾಜ್ಯ ಸರಕಾರವು ಎಲ್ಲವನ್ನೂ ಸುಧಾರಿಸಿಕೊಂಡು ನೈಜ ಕಲಿಕೆಯ ವಾತಾವರಣದ ಶಾಲೆಗಳು ಮತ್ತೆ ಆಗಸ್ಟ್ ತಿಂಗಳಾಂತ್ಯದಲ್ಲಿ ಇಲ್ಲವೇ ಸೆಷ್ಟಂಬರ್ ಪ್ರಾರಂಭವಾಗಲಿದೆಯೆಂದು ಸೂಚನೆಯನ್ನು ನೀಡಿದಂತಿದೆ ಎಲ್ಲವೂ ಪರಿಸ್ಥಿತಿಯ ನಿಯಂತ್ರಣ ವನ್ನು. ನೋಡಿಕೊಂಡು ಸುಧಾರಿಸಬಹುದು.ಒಟ್ಟಿನಲ್ಲಿ.ಆದಷ್ಟು ಬೇಗ ಕೊರೋನಾ ಮರೆಯಾಗಲಿ ಶಾಲಾ ಕಾಲೇಜುಗಳ ವಾತಾವರಣ ಸಂತಸದಾಯಕವಾ ಗಲಿ.ಆರೋಗ್ಯ ಭಾಗ್ಯವೊಂದಿದ್ದರೆ ತಾನೇ ಮತ್ತೆ ಉಳಿದ ಭಾಗ್ಯಗಳಲ್ಲವೇ?
ಗಣೇಶ್ ಜಾಲ್ಸೂರ್