ಕರ್ನಾಟಕದ ಜನತೆಗೆ ವಿದ್ಯುತ್ ದರ ಏರಿಕೆಯ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆ ಕಾಣಿಸಿಕೊಂಡಿದೆ. ಈ ಸಂಬಂಧ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಇಂದು ಮಹತ್ವದ ಸಭೆ ಕರೆದಿದೆ.
2024-25 ಆರ್ಥಿಕ ವರ್ಷದಲ್ಲಿ ಸುಮಾರು ₹2,800 ಕೋಟಿ ನಷ್ಟ ಅನುಭವಿಸಿರುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM), ಈ ನಷ್ಟವನ್ನು ಸರಿದೂಗಿಸಲು ದರ ಪರಿಷ್ಕರಣೆಗೆ KERCಗೆ ಮನವಿ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ. ಇದನ್ನು ಪರಿಗಣಿಸಲು KERC ಕಚೇರಿಯಲ್ಲಿ ಅಧಿಕಾರಿಗಳು ಸಭೆ ನಡೆಸಲಿದ್ದಾರೆ.
ಇದರ ಮಧ್ಯೆ, ವಿದ್ಯುತ್ ದರ ಏರಿಕೆ ವಿಚಾರ ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನತೆಗೆ ಮತ್ತೊಂದು ಆರ್ಥಿಕ ಹೊರೆ ಬೀಳುವ ಸಾಧ್ಯತೆ ಬಗ್ಗೆ ಚರ್ಚೆ ನಡೆಯುತ್ತಿದೆ.
ಸಭೆಯ ಬಳಿಕ KERC ಯಾವ ರೀತಿಯ ನಿರ್ಧಾರ ಕೈಗೊಳ್ಳುತ್ತದೆ ಎಂಬುದರ ಮೇಲೆ ರಾಜ್ಯದ ಲಕ್ಷಾಂತರ ಗ್ರಾಹಕರ ಗಮನ ಕೇಂದ್ರೀಕೃತವಾಗಿದೆ.







