ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಹುದ್ದೆಯ ಚರ್ಚೆ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಗುರಿಯಾಗಿಸಿ ಮಾಜಿ ಶಾಸಕ ರಾಜುಗೌಡ ತೀವ್ರ ವಾಗ್ದಾಳಿ ನಡೆಸಿದ್ದು, ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ನಡೆದಾಗ ಸಚಿವರು ಯಾಕೆ ತುಟಿ ಬಿಚ್ಚಲಿಲ್ಲ ಎಂದು ನೇರ ಪ್ರಶ್ನೆ ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಜುಗೌಡ, ಸತೀಶ್ ಜಾರಕಿಹೊಳಿ ಅವರ ಬೆಂಬಲಿಗರು ತಮ್ಮ ನಾಯಕನೇ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುತ್ತಾ ಕಾಂಗ್ರೆಸ್ ಪಕ್ಷಕ್ಕೆ ಮತ ಕೇಳುತ್ತಿದ್ದಾರೆ. ಇದು ಜನರಿಗೆ ನೀಡುತ್ತಿರುವ ಸುಳ್ಳು ಭರವಸೆಯಾಗಿದೆ. ನಿಜಕ್ಕೂ ಸತೀಶ್ ಜಾರಕಿಹೊಳಿ ಅವರು ಮುಂದಿನ ಮುಖ್ಯಮಂತ್ರಿಯಾಗುವುದೇ ಹೌದಾದರೆ, ಅದನ್ನು ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಯಿಂದಲೇ ಹೇಳಿಸಲಿ ಎಂದು ಸವಾಲು ಎಸೆದರು.
ಒಂದು ವೇಳೆ ಸಿದ್ದರಾಮಯ್ಯನವರೇ ಸತೀಶ್ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿ ಎಂದು ಅಧಿಕೃತವಾಗಿ ಘೋಷಣೆ ಮಾಡಿದರೆ ನಾವೂ ಕೂಡ ಅತ್ಯಂತ ಖುಷಿಪಡುತ್ತೇವೆ. ಕೇವಲ ಖುಷಿಪಡುವುದು ಮಾತ್ರವಲ್ಲ, ನಮ್ಮನ್ನು ನಮ್ಮ ಪಕ್ಷದಿಂದ ಹೊರಹಾಕಿದರೂ ಚಿಂತೆಯಿಲ್ಲ, ಸತೀಶ್ ಜಾರಕಿಹೊಳಿ ಅವರಿಗೆ ಮತ ಹಾಕಿ ಎಂದು ನಾವೇ ಬಹಿರಂಗವಾಗಿ ಜನರ ಬಳಿ ಕೇಳಿಕೊಳ್ಳುತ್ತೇವೆ ಎಂದು ಮಾರ್ಮಿಕವಾಗಿ ನುಡಿದರು.
ಇದೇ ವೇಳೆ ವಾಲ್ಮೀಕಿ ಸಮುದಾಯದ ಜ್ವಲಂತ ಸಮಸ್ಯೆಗಳ ವಿಚಾರದಲ್ಲಿ ಸತೀಶ್ ಜಾರಕಿಹೊಳಿ ಅವರ ನಿಲುವನ್ನು ರಾಜುಗೌಡ ಕಟುವಾಗಿ ಟೀಕಿಸಿದರು. ಸಮುದಾಯದ ಏಳಿಗೆಗಾಗಿ ಮೀಸಲಾಗಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ನುಂಗಿ ಹಾಕಿದಾಗ, ಇಷ್ಟೊಂದು ದೊಡ್ಡ ಹಗರಣ ರಾಜ್ಯದಲ್ಲಿ ಸದ್ದು ಮಾಡಿದಾಗ ಸತೀಶ್ ಜಾರಕಿಹೊಳಿ ಏಕೆ ಮೌನ ವಹಿಸಿದ್ದರು ಎಂದು ಪ್ರಶ್ನಿಸಿದರು.
ಅಲ್ಲದೆ, ರಾಜ್ಯದಲ್ಲಿ ಒಳಮೀಸಲಾತಿ ಪ್ರಮಾಣವನ್ನು ತಗ್ಗಿಸಿದಾಗ ಮತ್ತು ಸಮುದಾಯದ ಪ್ರಬಲ ನಾಯಕ ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಾಗ ಜಾರಕಿಹೊಳಿ ಅವರು ಸಮುದಾಯದ ಪರವಾಗಿ ಏಕೆ ಧ್ವನಿ ಎತ್ತಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇವಲ ಚುನಾವಣೆ ಬಂದಾಗ ಮಾತ್ರ ಸಮುದಾಯದ ನೆನಪಾಗುತ್ತದೆಯೇ ಎಂದು ಚಾಟಿ ಬೀಸಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಗಿತ್ತು. ಆದರೆ ಆ ಮೀಸಲಾತಿಯನ್ನು ಉಳಿಸಿಕೊಳ್ಳುವಲ್ಲಿ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಹಾಗೂ ಅದರ ನಾಯಕರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದ ರಾಜುಗೌಡ, ಸಮುದಾಯದ ಹಿತಾಸಕ್ತಿ ಕಾಯುವಲ್ಲಿ ಎಡವಿರುವ ಕಾಂಗ್ರೆಸ್ಸಿಗರಿಗೆ ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಜನತೆಗೆ ಕರೆ ನೀಡಿದರು.







