ನವದೆಹಲಿ: ಶತಮಾನದ ಇತಿಹಾಸವಿರುವ, ದೇಶದ ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಈಗ ಶನಿ ದೆಸೆ ಆವರಿಸಿದಂತಿದೆ. ಒಂದೆಡೆ 2026ರ ಬಹುಮುಖ್ಯ ವಿಧಾನಸಭಾ ಚುನಾವಣೆಗಳು ಹೊಸ್ತಿಲಲ್ಲಿ ಬಂದು ನಿಂತಿವೆ. ಆದರೆ, ಯುದ್ಧಕ್ಕೆ ಸಜ್ಜಾಗಬೇಕಿದ್ದ ಸೈನಿಕರೇ ಈಗ ಸೇನಾಧಿಪತಿಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಸ್ಸಾಂನಿಂದ ಹಿಡಿದು ಕೇರಳದವರೆಗೂ, ತಮಿಳುನಾಡಿನಿಂದ ಪಶ್ಚಿಮ ಬಂಗಾಳದವರೆಗೂ ಕಾಂಗ್ರೆಸ್ ಪಾಳಯದಲ್ಲಿ ಭುಗಿಲೆದ್ದಿರುವ ಅಸಮಾಧಾನದ ಜ್ವಾಲೆ ಹೈಕಮಾಂಡ್ ನಿದ್ದೆಗೆಡಿಸಿದೆ. ಮುಳುಗುತ್ತಿರುವ ಹಡಗನ್ನು ಕಾಪಾಡಲು ದೆಹಲಿ ನಾಯಕರು ಹೆಣಗಾಡುತ್ತಿದ್ದರೆ, ರಾಜ್ಯ ನಾಯಕರು ಹಡಗಿಗೆ ತೂತು ಕೊರೆಯುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ.
ಕೇರಳದಲ್ಲಿ ಹಿರಿಯ ನಾಯಕನಿಂದಲೇ ಸೆಲ್ಫ್ ಗೋಲ್!
ದೇವರ ನಾಡು ಕೇರಳದಲ್ಲಿ ಕಾಂಗ್ರೆಸ್ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಪಕ್ಷದ ಹಿರಿಯ ಮುತ್ಸದ್ದಿ, ಗಾಂಧಿ ಕುಟುಂಬದ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಮಣಿಶಂಕರ್ ಅಯ್ಯರ್ ಅವರು ಎಲೆಕ್ಷನ್ ಹೊತ್ತಲ್ಲೇ ಸ್ವಪಕ್ಷದ ಮೇಲೆ ಬಾಂಬ್ ಹಾಕಿದ್ದಾರೆ. ಇತ್ತೀಚೆಗೆ ನೀಡಿದ ಹೇಳಿಕೆಯೊಂದರಲ್ಲಿ, ಮುಂದಿನ ಬಾರಿಯೂ ಕೇರಳದಲ್ಲಿ ಎಡಪಕ್ಷಗಳ ನೇತೃತ್ವದ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ಪಿಣರಾಯಿ ವಿಜಯನ್ ಅವರೇ ಮತ್ತೆ ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಅಷ್ಟೇ ಅಲ್ಲದೆ, ಕೇರಳ ಕಾಂಗ್ರೆಸ್ ನಾಯಕರು ಕಮ್ಯುನಿಸ್ಟರನ್ನ ದ್ವೇಷಿಸುವುದಕ್ಕಿಂತ ಹೆಚ್ಚಾಗಿ, ತಮ್ಮ ಪಕ್ಷದವರನ್ನೇ ಒಬ್ಬರಿಗೊಬ್ಬರು ದ್ವೇಷಿಸುತ್ತಾರೆ ಎಂದು ಹೇಳುವ ಮೂಲಕ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನೇ ಕುಗ್ಗಿಸಿದ್ದಾರೆ. ಜೈರಾಮ್ ರಮೇಶ್ ಹಾಗೂ ಪವನ್ ಖೇರಾ ಅವರಂತಹ ನಾಯಕರು ಈ ಹೇಳಿಕೆಗೆ ತೇಪೆ ಹಚ್ಚುವ ಪ್ರಯತ್ನ ಮಾಡಿದರೂ, ವಿರೋಧ ಪಕ್ಷಗಳಿಗೆ ಇದು ಪ್ರಬಲ ಅಸ್ತ್ರವಾಗಿ ಪರಿಣಮಿಸಿದೆ.
ಅಸ್ಸಾಂನಲ್ಲಿ ನಾಯಕತ್ವದ ಸಂಘರ್ಷ ಮತ್ತು ರಾಜೀನಾಮೆ ಪ್ರಹಸನ
ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಕಾಂಗ್ರೆಸ್ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕರಾಗಿರುವ ಗೌರವ್ ಗೋಗೊಯ್ ಅವರ ಸರ್ವಾಧಿಕಾರಿ ಧೋರಣೆಗೆ ಬೇಸತ್ತು, ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭೂಪೇನ್ ಬೋರಾ ಅವರು ದಿಢೀರ್ ರಾಜೀನಾಮೆ ನೀಡಿದ್ದು ಹೈಡ್ರಾಮಾ ಸೃಷ್ಟಿಸಿತ್ತು. ಬರೋಬ್ಬರಿ 32 ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ನಾಯಕನೊಬ್ಬ, ಗೌರವ್ ಗೋಗೊಯ್ ನಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ಕಣ್ಣೀರು ಹಾಕಿದ್ದು ಪಕ್ಷದ ಆಂತರಿಕ ಶಿಸ್ತಿನ ವೈಫಲ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಮಧ್ಯಾಹ್ನದ ಹೊತ್ತಿಗೆ ಹೈಕಮಾಂಡ್ ಮಧ್ಯಪ್ರವೇಶಿಸಿ ರಾಜೀನಾಮೆ ವಾಪಸ್ ಪಡೆಯುವಂತೆ ಮಾಡಿತಾದರೂ, ಗೌರವ್ ಗೋಗೊಯ್ ಮತ್ತು ಸ್ಥಳೀಯ ನಾಯಕರ ನಡುವಿನ ಶೀತಲ ಸಮರ ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಭಾರೀ ಪೆಟ್ಟು ನೀಡುವ ಸಾಧ್ಯತೆಯಿದೆ.
ತಮಿಳುನಾಡಿನಲ್ಲಿ ದೋಸ್ತಿ ಧರ್ಮಕ್ಕೆ ಬಿರುಕು: ದಳಪತಿ ವಿಜಯ್ ಮೇಲೆ ಕಣ್ಣು?
ದಕ್ಷಿಣದ ಪ್ರಬಲ ರಾಜ್ಯ ತಮಿಳುನಾಡಿನಲ್ಲಿಯೂ ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕಿದೆ. ಇಷ್ಟು ದಿನ ಡಿಎಂಕೆ ಹೆಗಲ ಮೇಲೆ ಕುಳಿತು ಸವಾರಿ ಮಾಡುತ್ತಿದ್ದ ಕಾಂಗ್ರೆಸ್ಗೆ ಈಗ ಸಿಎಂ ಸ್ಟಾಲಿನ್ ಶಾಕ್ ಕೊಟ್ಟಿದ್ದಾರೆ. 2026ರ ಚುನಾವಣೆಯಲ್ಲಿ ಅಧಿಕಾರ ಹಂಚಿಕೆ ಅಥವಾ ಮೈತ್ರಿ ಕೂಟದಲ್ಲಿ ಹೆಚ್ಚಿನ ಪಾಲು ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಟಾಲಿನ್ ಕಡ್ಡಿ ಮುರಿದಂತೆ ಹೇಳಿರುವುದು ಕೈ ನಾಯಕರ ಕಣ್ಣು ಕೆಂಪಾಗಿಸಿದೆ. ಸಂಸದ ಮಾಣಿಕ್ಕಂ ಟ್ಯಾಗೋರ್ ಅವರು ಡಿಎಂಕೆಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ, ತಮಿಳುನಾಡು ರಾಜಕೀಯಕ್ಕೆ ಹೊಸದಾಗಿ ಎಂಟ್ರಿ ಕೊಟ್ಟಿರುವ ನಟ ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದತ್ತ ಕಾಂಗ್ರೆಸ್ ಒಲವು ತೋರುತ್ತಿದೆ. ಒಂದು ವೇಳೆ ಡಿಎಂಕೆ ಕೈಕೊಟ್ಟರೆ ವಿಜಯ್ ಜೊತೆ ಮೈತ್ರಿ ಮಾಡಿಕೊಳ್ಳುವ ಲೆಕ್ಕಾಚಾರ ಕಾಂಗ್ರೆಸ್ ಪಾಳಯದಲ್ಲಿದೆ. ಇದು ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ಸಂಬಂಧವನ್ನು ಮತ್ತಷ್ಟು ಹಳಸುವಂತೆ ಮಾಡಿದೆ.
ಬೆಂಗಾಲ್ನಲ್ಲಿ ಮಮತಾ ಒಂಟಿ ಸಲಗ: ಕಾಂಗ್ರೆಸ್ ಕಂಗಾಲು
ಪಶ್ಚಿಮ ಬಂಗಾಳದಲ್ಲಿ ದೀದಿ ಅಲಿಯಾಸ್ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ಗೆ ಬಾಗಿಲು ಮುಚ್ಚಿದ್ದಾರೆ. ದೆಹಲಿಯಲ್ಲಿ ಇಂಡಿಯಾ ಒಕ್ಕೂಟದ ಜೊತೆ ಚಹಾ ಕುಡಿಯುವ ಮಮತಾ, ಕೋಲ್ಕತ್ತಾದಲ್ಲಿ ಮಾತ್ರ ಕಾಂಗ್ರೆಸ್ ಮುಖ ನೋಡಲು ಇಷ್ಟಪಡುತ್ತಿಲ್ಲ. ಮುಂದಿನ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಘೋಷಿಸುವ ಮೂಲಕ ಮಮತಾ ಅವರು ಕಾಂಗ್ರೆಸ್ಗೆ ಮರ್ಮಾಘಾತ ನೀಡಿದ್ದಾರೆ. ಇದರಿಂದಾಗಿ ಅನಿವಾರ್ಯವಾಗಿ ಕಾಂಗ್ರೆಸ್ 294 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಂಘಟನಾತ್ಮಕವಾಗಿ ಸೊರಗಿರುವ ಬಂಗಾಳ ಕಾಂಗ್ರೆಸ್ಗೆ ಇದು ದೊಡ್ಡ ಸವಾಲಾಗಿದೆ.
ಹೈಕಮಾಂಡ್ ಅಸಹಾಯಕತೆ
ಒಂದು ಕಾಲದಲ್ಲಿ ಇಡೀ ದೇಶವನ್ನೇ ಆಳಿದ್ದ ಕಾಂಗ್ರೆಸ್, ಇಂದು ಪ್ರಾದೇಶಿಕ ಪಕ್ಷಗಳ ಮುಂದೆ ಮಂಡಿಯೂರುವ ಪರಿಸ್ಥಿತಿ ಬಂದೊದಗಿದೆ. ರಾಹುಲ್ ಗಾಂಧಿ ನೇತೃತ್ವದ ಬಗ್ಗೆ ಸ್ವಪಕ್ಷೀಯರೇ ಅಪಸ್ವರ ಎತ್ತುತ್ತಿರುವುದು, ಮಲ್ಲಿಕಾರ್ಜುನ ಖರ್ಗೆ ಅವರ ತವರು ರಾಜ್ಯದಲ್ಲಿನ ಗೊಂದಲಗಳು ಮತ್ತು ರಾಜ್ಯ ನಾಯಕರ ಬಂಡಾಯವನ್ನು ಶಮನ ಮಾಡಲು ಹೈಕಮಾಂಡ್ ವಿಫಲವಾಗುತ್ತಿರುವುದು 2026ರ ಚುನಾವಣಾ ಫಲಿತಾಂಶದ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿದೆ. ಚುನಾವಣೆ ಬರುವಷ್ಟರಲ್ಲಿ ಒಡೆದ ಮನೆಯನ್ನು ಒಂದುಗೂಡಿಸಿ, ಮುಳುಗುತ್ತಿರುವ ಹಡಗನ್ನು ದಡ ಸೇರಿಸುವ ಚಾಕಚಕ್ಯತೆ ಕಾಂಗ್ರೆಸ್ ನಾಯಕರಿಗೆ ಇದೆಯೇ ಎಂಬುದೇ ಈಗಿನ ಯಕ್ಷಪ್ರಶ್ನೆ.







