ಬೆಂಗಳೂರು: ಲಾಕ್ಡೌನ್ ಹಾಗೂ ಕೊರೊನಾ ಸಂಕಷ್ಟದಿಂದಾಗಿ ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದ್ದರೂ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಜಿಎಸ್ಟಿ ಪಾಲು ನೀಡಲು ನಿರಾಕರಿಸಿರುವುದಕ್ಕೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯ ಮತ್ತು ಕೇಂದ್ರ ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ಟ್ವಿಟರ್ನಲ್ಲಿ ಸರಣಿ ಟೀಕಾ ಪ್ರಹಾರ ನಡೆಸಿದ್ದಾರೆ.
ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಭಾಗ್ಯದ ಬಾಗಿಲು ತೆರೆಯಲಿದೆ ಎಂದು ಬಿಜೆಪಿ ರಾಜ್ಯದ ಜನತೆಗೆ ಭರವಸೆ ನೀಡಿತ್ತು. ಇದನ್ನು ನಂಬಿದ ಜನತೆ 25 ಸಂಸದರನ್ನು ಆರಿಸಿ ಕಳಿಸಿದ್ದರು. ಇವರೆಲ್ಲ ಪ್ರಧಾನಿ ಎದುರು ಮಾತು ಬಾರದ ಕೀಲಿ ಗೊಂಬೆಗಳಂತೆ ವರ್ತಿಸುತ್ತಾ ರಾಜ್ಯದ ಹಿತ ಶತ್ರುಗಳಾಗಿ ಹೋಗಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಜಿಎಸ್ಟಿ ಮಂಡಳಿ ಸಭೆಯಲ್ಲಿ ಭಾಗವಹಿಸಿದ್ದ ಗೃಹ ಸಚಿವರು ರಾಜ್ಯದಲ್ಲಿ ಜಿಎಸ್ ಟಿ ಸಂಗ್ರಹ ಶೇಕಡಾ 71ರಷ್ಟಾಗಿದೆ ಎಂದು ಹೇಳಿದ್ದಾರೆ. ಹೀಗಿದ್ದರೂ ನಮ್ಮ ತೆರಿಗೆ ಹಣವನ್ನು ನಮಗೆ ನೀಡಲು ನಿರಾಕರಿಸುತ್ತಿರುವುದು ರಾಜ್ಯದ ಜನರಿಗೆ ಮಾಡುತ್ತಿರುವ ಮೋಸ ಅಲ್ಲವೇ? ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ರಾಜ್ಯಕ್ಕೆ ಬರಬೇಕಾಗಿರುವ ಅನುದಾನಗಳು ಕಡಿತಗೊಳ್ಳುತ್ತಲೇ ಬಂದಿದೆ.
14ನೇ ಹಣಕಾಸು ಆಯೋಗದಡಿ ಕೇಂದ್ರ ತೆರಿಗೆಯಲ್ಲಿ ಶೇಕಡಾ 4.7ರಷ್ಟು ಪಾಲು ಕರ್ನಾಟಕಕ್ಕೆ ಸಿಗುತ್ತಿದ್ದರೆ, 15ನೇ ಹಣಕಾಸು ಆಯೋಗ ಅದನ್ನು ಶೇಕಡಾ 3.6ಕ್ಕೆ ಇಳಿಸಿದೆ. ಈಗ ಇನ್ನೊಂದು ಅನ್ಯಾಯ.
ಮತ್ತೊಂದು ಟ್ವಿಟರ್ನಲ್ಲಿ ನಾಲ್ಕು ತಿಂಗಳ ಒಟ್ಟು ಜಿಎಸ್ಟಿ ಪರಿಹಾರ ರೂ.13,764 ಕೋಟಿ ರಾಜ್ಯಕ್ಕೆ ಬರಬೇಕಾಗಿದೆ. ಇದು ಕೇಂದ್ರ ಮತ್ತು ರಾಜ್ಯಗಳು ಮಾಡಿಕೊಂಡ ಒಡಂಬಡಿಕೆ. ಈಗ ನಮ್ಮ ಖಜಾನೆಯಲ್ಲಿ ದುಡ್ಡಿಲ್ಲ, ನೀವು ಬೇಕಿದ್ದರೆ ಆರ್ಬಿಐನಲ್ಲಿ ಸಾಲ ಮಾಡಿ ತೀರಿಸಿಕೊಳ್ಳಿ ಎಂದರೆ ಇದು ಯಾವೂರ ನ್ಯಾಯ ಎಂದು ಪ್ರಶ್ನಿಸಿದ್ದಾರೆ.

ಸಂವಿಧಾನದ 101ನೇ ತಿದ್ದುಪಡಿ ಮೂಲಕ ಜಾರಿಗೆ ಬಂದಿರುವ ಜಿಎಸ್ಟಿ ಕಾಯ್ದೆಯ ಸೆಕ್ಷನ್ 18ರ ಪ್ರಕಾರ ಜಿಎಸ್ಟಿಯಿಂದ ಆಗುವ ನಷ್ಟಕ್ಕೆ ಐದು ವರ್ಷಗಳ ಕಾಲ ಪರಿಹಾರ ನೀಡಬೇಕಾಗಿರುವುದು ಕೇಂದ್ರದ ಸಂವಿಧಾನಾತ್ಮಕ ಕರ್ತವ್ಯ.
ಈ ಪರಿಹಾರದ ನಿರಾಕರಣೆಯೆಂದರೆ ರಾಜ್ಯದ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆ. ಪ್ರವಾಹ ಪೀಡಿತ ಜನರಿಗೆ ಪರಿಹಾರ ನೀಡಲು ದುಡ್ಡಿಲ್ಲ ಎಂದು ಒಂದು ಕಡೆ ಮುಖ್ಯಮಂತ್ರಿ ಯಡಿಯೂರಪ್ಪ ಕಣ್ಣೀರು ಹಾಕುತ್ತಿದ್ದಾರೆ. ಇನ್ನೊಂದೆಡೆ ನಮಗೆ ನೀಡಬೇಕಾಗಿರುವ ನ್ಯಾಯಬದ್ಧ ಜಿಎಸ್ ಟಿ ಪರಿಹಾರವನ್ನು ಕೊಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಕರ್ನಾಟಕದ ಜನ ಏನು ಮಾಡಬೇಕು? ಮಣ್ಣು ತಿನ್ನಬೇಕಾ? ಎಂದು ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದಾರೆ.

ಜಿಎಸ್ ಟಿ ಪರಿಹಾರವನ್ನು ನೀಡುವುದಿಲ್ಲ ಎಂಬ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ನಿಲುವು ರಾಜ್ಯಕ್ಕೆ ಮಾಡಿರುವ ಘೋರ ಅನ್ಯಾಯ. ಈ ಅನ್ಯಾಯವನ್ನು ಪ್ರತಿಭಟಿಸದೆ ಬಾಯಿ ಮುಚ್ಚಿಕೊಂಡು ಒಪ್ಪಿಕೊಂಡ ರಾಜ್ಯ ಸರ್ಕಾರ ರಾಜ್ಯದ ಜನತೆಗೆ ದ್ರೋಹ ಎಸಗಿದೆ. ಇದನ್ನು ಸಹಿಸಲು ಸಾಧ್ಯ ಇಲ್ಲ ಎಂದು ಸರಣಿ ಟ್ವೀಟ್ ಮಾಡಿ ಟೀಕಿಸಿದ್ದಾರೆ.








