ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಹಂಚಿಕೆಯ ಕಿತ್ತಾಟ ಜೋರಾಗಿರುವ ಹೊತ್ತಿನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ರಾಜಕೀಯ ಎದುರಾಳಿಗಳಿಗೆ ಮತ್ತು ಸ್ವಪಕ್ಷೀಯ ನಾಯಕರಿಗೆ ಪರೋಕ್ಷವಾಗಿ ಪ್ರಬಲ ಸಂದೇಶವೊಂದನ್ನು ರವಾನಿಸಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಎಂಬ ಊಹಾಪೋಹಗಳು ದಟ್ಟವಾಗಿ ಹಬ್ಬಿರುವ ಸಂದರ್ಭದಲ್ಲೇ, ಸಿಎಂ ತಮ್ಮ ಅಧಿಕೃತ ನಿವಾಸ ಕಾವೇರಿಯನ್ನು ನವೀಕರಣಗೊಳಿಸುವ ಮೂಲಕ ಪೂರ್ಣಾವಧಿಗೂ ನಾನೇ ಬಾಸ್ ಎಂಬುದನ್ನು ಸಾಬೀತುಪಡಿಸಲು ಮುಂದಾಗಿದ್ದಾರೆ.
ಪವರ್ ಫೈಟ್ ನಡುವೆ ಕಾವೇರಿ ನವೀಕರಣದ ಮರ್ಮವೇನು
ಪ್ರಸ್ತುತ ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರದ ಚರ್ಚೆಗಳು ಮುನ್ನೆಲೆಯಲ್ಲಿವೆ. ಇಂತಹ ಅನಿಶ್ಚಿತತೆಯ ವಾತಾವರಣದಲ್ಲಿ ಮುಖ್ಯಮಂತ್ರಿಗಳು ತಮ್ಮ ಸರ್ಕಾರಿ ನಿವಾಸದ ಗ್ರೌಂಡ್ ಫ್ಲೋರ್ ನವೀಕರಣಕ್ಕೆ ಕೈಹಾಕಿರುವುದು ಅಚ್ಚರಿ ಮೂಡಿಸಿದೆ. ಸಾಮಾನ್ಯವಾಗಿ ಸರ್ಕಾರ ಅಧಿಕಾರಕ್ಕೆ ಬಂದ ಹೊಸದರಲ್ಲಿ ನವೀಕರಣ ಮಾಡುವುದು ವಾಡಿಕೆ. ಸಿದ್ದರಾಮಯ್ಯನವರು ಅಧಿಕಾರ ಸ್ವೀಕರಿಸಿದ ಆರಂಭದಲ್ಲೇ ಒಮ್ಮೆ ನವೀಕರಣ ಮಾಡಿಸಿದ್ದರು. ಆದರೆ ಈಗ ಅಧಿಕಾರ ಹಂಚಿಕೆಯ ಕೂಗು ಜೋರಾಗಿರುವಾಗಲೇ ಮತ್ತೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನವೀಕರಣ ಕಾರ್ಯ ಭರದಿಂದ ಸಾಗುತ್ತಿರುವುದು, ನಾನು ಕುರ್ಚಿ ಬಿಟ್ಟು ಕದಲುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದಂತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ದಲಿತ ಸಿಎಂ ಅಸ್ತ್ರ ಪ್ರಯೋಗಿಸಿದ ಸಿಎಂ ಆಪ್ತ ವಲಯ
ಒಂದೆಡೆ ಸಿದ್ದರಾಮಯ್ಯ ಪೂರ್ಣಾವಧಿಯ ಸಂದೇಶ ನೀಡುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಒಳಾಂಗಣದಲ್ಲಿ ದಲಿತ ಸಿಎಂ ಕೂಗು ಮತ್ತೆ ಪ್ರಬಲವಾಗಿ ಕೇಳಿಬರುತ್ತಿದೆ. ಇದು ಕೇವಲ ಕೂಗಲ್ಲ, ಬದಲಾಗಿ ಸಿಎಂ ಬದಲಾವಣೆಯ ಅನಿವಾರ್ಯತೆ ಎದುರಾದರೆ ಅಧಿಕಾರ ಬೇರೆಯವರ ಪಾಲಾಗಬಾರದು ಎಂಬ ರಣತಂತ್ರದ ಭಾಗವಾಗಿದೆ.
ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯನವರೇ ಮುಂದುವರಿಯಬೇಕು ಎಂಬುದು ದಲಿತ ನಾಯಕರ ಮೊದಲ ನಿಲುವಾಗಿದೆ. ಒಂದು ವೇಳೆ ಹೈಕಮಾಂಡ್ ಬದಲಾವಣೆಗೆ ಮುಂದಾದರೆ ಅಥವಾ ಕಾನೂನು ಸಂಕಷ್ಟಗಳಿಂದ ಅನಿವಾರ್ಯತೆ ಸೃಷ್ಟಿಯಾದರೆ, ಆ ಸ್ಥಾನ ದಲಿತರಿಗೆ ಸಿಗಬೇಕು ಎಂದು ಹಕ್ಕು ಮಂಡಿಸಲು ಸಿದ್ಧತೆ ನಡೆದಿದೆ. ಈ ಮೂಲಕ ಒಕ್ಕಲಿಗ ಸಮುದಾಯದ ಡಿ.ಕೆ. ಶಿವಕುಮಾರ್ ಅವರ ಸಿಎಂ ಕನಸಿಗೆ ತಡೆ ಒಡ್ಡುವುದು ಈ ತಂತ್ರದ ಹಿಂದಿನ ಉದ್ದೇಶ ಎನ್ನಲಾಗುತ್ತಿದೆ.
ಡಾ ಜಿ ಪರಮೇಶ್ವರ್ ಪರ ನಿಂತ ಪ್ರಭಾವಿ ಸಚಿವರು
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ರಾಜಕಾರಣಕ್ಕೆ ಮರಳದಿದ್ದರೆ, ದಲಿತ ಕೋಟಾದ ಅಡಿಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರೇ ಮುಂದಿನ ಮುಖ್ಯಮಂತ್ರಿಯಾಗಬೇಕು ಎಂದು ದಲಿತ ಸಮುದಾಯದ ನಾಯಕರು ನಿರ್ಧರಿಸಿದ್ದಾರೆ. ಸಚಿವರಾದ ಎಚ್.ಸಿ. ಮಹದೇವಪ್ಪ, ಸತೀಶ್ ಜಾರಕಿಹೊಳಿ ಮತ್ತು ಕೆ.ಎನ್. ರಾಜಣ್ಣ ಸೇರಿದಂತೆ ಪ್ರಭಾವಿ ನಾಯಕರು ಪರಮೇಶ್ವರ್ ಅವರಿಗೆ ಬೆಂಬಲ ಸೂಚಿಸಿದ್ದು, ಈ ಕುರಿತು ಹೈಕಮಾಂಡ್ ಮೇಲೆ ಒತ್ತಡ ಹೇರಲು ರಹಸ್ಯ ಸಭೆಗಳನ್ನು ನಡೆಸಿ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.
2028ರ ಅಧಿಕಾರದ ಗದ್ದುಗೆ ಮೇಲೆ ಕುಮಾರಸ್ವಾಮಿ ಕಣ್ಣು
ಕಾಂಗ್ರೆಸ್ ಮನೆಯಲ್ಲಿ ಅಧಿಕಾರಕ್ಕಾಗಿ ಕುಸ್ತಿ ನಡೆಯುತ್ತಿದ್ದರೆ, ಇತ್ತ ಎನ್ಡಿಎ ಮೈತ್ರಿಕೂಟದಲ್ಲಿಯೂ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆ ಶುರುವಾಗಿದೆ. ಮುಂಬರುವ 2 ಒ 2 8ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಅಧಿಕಾರಕ್ಕೆ ಬರಲಿದ್ದು, ಆಗ ಎಚ್.ಡಿ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸ್ವತಃ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಕೂಡ, ಮುಖ್ಯಮಂತ್ರಿ ರೇಸ್ ನಲ್ಲಿ ಬಹಳ ಜನ ಇದ್ದಾರೆ, ನಾನೂ ಕೂಡ ಆಕಾಂಕ್ಷಿ ಎಂದು ಹೇಳುವ ಮೂಲಕ ತಮ್ಮ ಮನದಾಳದ ಇಚ್ಛೆಯನ್ನು ಬಹಿರಂಗಪಡಿಸಿದ್ದಾರೆ.
ಒಟ್ಟಾರೆಯಾಗಿ, ಕಾವೇರಿ ನಿವಾಸದ ನವೀಕರಣ, ದಲಿತ ಸಿಎಂ ದಾಳ ಮತ್ತು ವಿರೋಧ ಪಕ್ಷದ ಭವಿಷ್ಯದ ಲೆಕ್ಕಾಚಾರಗಳು ರಾಜ್ಯ ರಾಜಕಾರಣವನ್ನು ಕುತೂಹಲದ ಘಟ್ಟಕ್ಕೆ ತಂದು ನಿಲ್ಲಿಸಿವೆ.







