ಬೆಳಗಾವಿ: ವಿಧಾನಸಭೆಯ ಕಲಾಪವು ಗಂಭೀರ ವಿಷಯಗಳ ಚರ್ಚೆಯ ಜೊತೆಗೆ ಆಗಾಗ ರಾಜಕೀಯದ ಸ್ವಾರಸ್ಯಕರ ಟೀಕೆ ಟಿಪ್ಪಣಿಗಳಿಗೂ ಸಾಕ್ಷಿಯಾಗುತ್ತದೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ನಡೆಯುತ್ತಿದ್ದ ಗಂಭೀರ ಚರ್ಚೆಯ ನಡುವೆಯೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮುಖ್ಯಮಂತ್ರಿಯಾಗುವ ಮಹತ್ವಾಕಾಂಕ್ಷೆಯ ಕುರಿತು ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು ಸಿ. ಅಶ್ವಥ್ ಅವರ ಜನಪ್ರಿಯ ಭಾವಗೀತೆಯ ಸಾಲುಗಳನ್ನು ಬದಲಿಸಿ ಹಾಡುವ ಮೂಲಕ ಸದನದಲ್ಲಿ ನಗೆಯುಕ್ಕಿಸಿದ ಪ್ರಸಂಗ ನಡೆಯಿತು.
ಉತ್ತರ ಕರ್ನಾಟಕದ ವಿಷಯಗಳ ಚರ್ಚೆಯ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ, ರಾಜ್ಯ ಸರ್ಕಾರದ ಮೇಕೆದಾಟು ಯೋಜನೆಯ ವಿಳಂಬದ ಬಗ್ಗೆ ಪ್ರಶ್ನೆ ಎತ್ತಿದರು. ತಮಿಳುನಾಡಿನ ಡಿಎಂಕೆ ಜೊತೆಗಿನ ಇಂಡಿಯಾ ಒಕ್ಕೂಟದ ಮೈತ್ರಿಯ ಕಾರಣಕ್ಕಾಗಿ ಕಾಂಗ್ರೆಸ್ ಸರ್ಕಾರ ಮೇಕೆದಾಟು ಯೋಜನೆಯ ಬಗ್ಗೆ ಮೌನ ವಹಿಸಿದೆಯೇ ಎಂದು ಬೆಲ್ಲದ ಅವರು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡಿದರು.
ಈ ಪ್ರಶ್ನೆಗೆ ಉತ್ತರಿಸಲು ಎದ್ದು ನಿಂತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತಮ್ಮ ಸಹಜವಾದ ಆಕ್ರಮಣಕಾರಿ ಶೈಲಿಯನ್ನು ಬದಿಗಿಟ್ಟು ಅತ್ಯಂತ ಸೌಮ್ಯವಾಗಿ ಪ್ರತಿಕ್ರಿಯಿಸಿದರು. ಬೆಲ್ಲದ ಅವರ ಅನುಭವವನ್ನು ಶ್ಲಾಘಿಸಿದ ಡಿಕೆಶಿ, ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಮತ್ತು ಸಿಡಬ್ಲ್ಯುಸಿಗೆ ನೀಡಿರುವ ಆರು ತಿಂಗಳ ಗಡುವಿನ ಬಗ್ಗೆ ವಿವರಿಸಿದರು. ಅಂತಿಮವಾಗಿ, ಈ ಯೋಜನೆಗೆ ಕೇಂದ್ರ ಸರ್ಕಾರದ ಅನುಮತಿ ನಿರ್ಣಾಯಕವಾಗಿದ್ದು, ತಾವೆಲ್ಲರೂ ಸಹಕಾರ ನೀಡಿದರೆ ಆದಷ್ಟು ಬೇಗ ಒಟ್ಟಿಗೆ ಭೂಮಿ ಪೂಜೆ ಮಾಡೋಣ ಎಂದು ಡಿಕೆಶಿ ಅವರು ಪ್ರತಿಪಕ್ಷದ ಕಡೆಗೆ ಕೈಮುಗಿದು ವಿನಮ್ರವಾಗಿ ಮನವಿ ಮಾಡಿದರು.
ಹೊಸ ಶಿವಕುಮಾರನ ಕಂಡು ಬೆರಗಾದ ಸುನೀಲ್ ಕುಮಾರ್
ಡಿ.ಕೆ. ಶಿವಕುಮಾರ್ ಅವರು ಕೈಮುಗಿದು ಅಷ್ಟೊಂದು ವಿನಯದಿಂದ ಮಾತನಾಡಿದ್ದನ್ನು ಗಮನಿಸಿದ ಬಿಜೆಪಿ ಸದಸ್ಯ ಸುನೀಲ್ ಕುಮಾರ್, ತಕ್ಷಣವೇ ಎದ್ದು ನಿಂತು ಡಿಕೆಶಿ ಅವರ ಬದಲಾದ ವರ್ತನೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು. ಸರ್, ಇಷ್ಟು ನಯ ವಿನಯ ಎಲ್ಲಿಂದ ಬಂತು ನಿಮಗೆ? ನಾವು ನೋಡಿದ, ಕಲ್ಪಿಸಿಕೊಂಡಿರುವ ಡಿಕೆ ಶಿವಕುಮಾರ್ ಅವರೇ ಬೇರೆ. ಇದೀಗ ನೋಡುತ್ತಿರುವವರು ಹೊಸ ಶಿವಕುಮಾರಾ? ಇಷ್ಟೊಂದು ದಿಢೀರ್ ಬದಲಾವಣೆ ಮತ್ತು ಸಾತ್ವಿಕತೆ ಹೇಗೆ ಸಾಧ್ಯವಾಯಿತು ಎಂದು ಕಾಲೆಳೆದರು.
ಕಾಣದ ಕಡಲಿಗೆ ಅಲ್ಲ ಕಾಣದ ಕುರ್ಚಿಗೆ
ಡಿಕೆಶಿ ಅವರ ಈ ಅನಿರೀಕ್ಷಿತ ವಿನಯದ ಹಿಂದೆ ಮುಖ್ಯಮಂತ್ರಿ ಹುದ್ದೆಯ ಮೇಲಿರುವ ಕಣ್ಣು ಕಾರಣವಿರಬಹುದು ಎಂದು ಸುನೀಲ್ ಕುಮಾರ್ ಪರೋಕ್ಷವಾಗಿ ಟೀಕಿಸಿದರು. ಈ ಸಂದರ್ಭವನ್ನು ಇನ್ನಷ್ಟು ರಂಜನೀಯವಾಗಿಸಲು ಅವರು ದಿವಂಗತ ಸಿ. ಅಶ್ವಥ್ ಅವರು ಹಾಡಿರುವ ಪ್ರಸಿದ್ಧ ಗೀತೆ ಕಾಣದ ಕಡಲಿಗೆ ಹಂಬಲಿಸಿದೆ ಮನ ಸಾಲುಗಳನ್ನು ಸಮಯೋಚಿತವಾಗಿ ಬಳಸಿಕೊಂಡರು.
ಹಾಡಿನ ಸಾಲುಗಳನ್ನು ಡಿಕೆಶಿ ಅವರ ಪ್ರಸ್ತುತ ರಾಜಕೀಯ ಪರಿಸ್ಥಿತಿಗೆ ಒಗ್ಗಿಸಿದ ಸುನೀಲ್ ಕುಮಾರ್, ಕಾಣದ ಕಡಲಿಗೆ ಹಂಬಲಿಸುತ್ತಿದೇ ಮನ, ಸೇರಬಲ್ಲನೇ ಒಂದು ದಿನ ಎಂದು ಕವಿಗಳು ಹಾಡಿದ್ದಾರೆ. ಆದರೆ ನಮ್ಮ ಡಿಕೆ ಶಿವಕುಮಾರ್ ಅವರ ಮನಸ್ಥಿತಿ ಈಗ ಹೇಗಿದೆಯೆಂದರೆ, ಕಾಣದ ಕುರ್ಚಿಗೆ ಹಂಬಲಿಸಿದೇ ಮನ, ಕೂಡಬಲ್ಲನೇ ಒಂದು ದಿನ ಎನ್ನುವಂತಿದೆ ಎಂದು ಮಾರ್ಮಿಕವಾಗಿ ನುಡಿದರು.
ಡಿಕೆಶಿ ಅವರು ಸಿಎಂ ಕುರ್ಚಿಯ ಮೇಲೆ ಕಣ್ಣಿಟ್ಟೇ ಇಷ್ಟೊಂದು ಬದಲಾಗಿದ್ದಾರೆ, ಅವರ ವಿನಯದ ಹಿಂದಿನ ಮರ್ಮವೇ ಅದು ಎಂದು ಸುನೀಲ್ ಕುಮಾರ್ ವಿಶ್ಲೇಷಿಸಿದರು. ನಿಮ್ಮ ನಾಯಕತ್ವವನ್ನು ನಾವು ಒಪ್ಪುತ್ತೇವೆ, ಆದರೆ ಈ ಪರಿಯ ನಯ ವಿನಯ ತೋರಿದರೆ ಹೇಗೆ ಎಂದು ಹಾಸ್ಯಮಯವಾಗಿಯೇ ಪ್ರಶ್ನಿಸಿದರು. ಸುನೀಲ್ ಕುಮಾರ್ ಅವರ ಈ ಸಮಯಪ್ರಜ್ಞೆ ಮತ್ತು ಸಾಹಿತ್ಯದ ಮೂಲಕ ನೀಡಿದ ಟಾಂಗ್ ಇಡೀ ಸದನದಲ್ಲಿ ನಗೆಯ ಅಲೆ ಎಬ್ಬಿಸಿತು.







